ಮಾಜಿ ಸಂಸದನ ಪತ್ನಿಯನ್ನು ನಂಬಿಸಿ ಕತ್ತು ಕುಯ್ಯಿತಾ ಬಿಜೆಪಿ? ಆಕ್ರೋಶಗೊಂಡಿರುವ ಆಕೆಯ ನಿರ್ಧಾರ ಏನು?

ಚಂಡಿಗಢ: ಪಂಜಾಬ್​ನ ಗುರುದಾಸಪುರದಿಂದ ಬಾಲಿವುಡ್​ನ ಹಿರಿಯ ನಟ ಸನ್ನಿ ಡಿಯೋಲ್​ಗೆ ಟಿಕೆಟ್​ ನೀಡಿರುವ ಬಿಜೆಪಿ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಈ 1998, 1999, 2004 ಮತ್ತು 2014ರಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ವಿನೋದ್​ ಖನ್ನಾ ಅವರ ಪತ್ನಿ ಕವಿತಾ ಖನ್ನಾ ಈ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದರೆ, ತಮಗೆ ಟಿಕೆಟ್​ ನೀಡದೆ ಇತ್ತೀಚೆಗೆ ಬಿಜೆಪಿ ಸೇರ್ಪಡೆಗೊಂಡ ಸನ್ನಿ ಡಿಯೋಲ್​ಗೆ ಟಿಕೆಟ್​ ನೀಡಿರುವುದರಿಂದ ಅವರು ಸಹಜವಾಗಿ ಬೇಸರಗೊಂಡಿದ್ದಾರೆ.

ತಮ್ಮ ಪತಿಯ ಸಾವಿನ ಅನುಕಂಪದ ಲಾಭ ಪಡೆದು ಸಂಸತ್​ ಪ್ರವೇಶಿಸುವುದು ಕವಿತಾ ಖನ್ನಾ ಅವರ ಉದ್ದೇಶವಾಗಿತ್ತು. ತಮಗೇ ಟಿಕೆಟ್​ ಸಿಗುವ ಭರವಸೆಯೊಂದಿಗೆ ತಮ್ಮ ಕ್ಷೇತ್ರದ ಜನತೆಯೊಂದಿಗೆ ಒಡನಾಡುತ್ತಾ ಪರೋಕ್ಷವಾಗಿ ಚುನಾವಣಾ ಪ್ರಚಾರಕ್ಕೂ ಚಾಲನೆ ನೀಡಿದ್ದರು. ಆದರೆ ಬಿಜೆಪಿ ನಾಯಕರು ಇವರ ಬದಲಿಗೆ ಸನ್ನಿ ಡಿಯೋಲ್​ಗೆ ಟಿಕೆಟ್​ ನೀಡಲು ಹಠಾತ್ತನೆ ನಿರ್ಧರಿಸಿದರು. ಇದು ಅವರನ್ನು ಕೆರಳಿಸಿದೆ.

ಪಕ್ಷವು ನನ್ನ ಬೆನ್ನಿಗೆ ಚೂರಿ ಇರಿದಿದೆ. ಪಕ್ಷದ ಈ ನಿರ್ಧಾರದಿಂದ ನನಗೆ ಮಾತ್ರವಲ್ಲ, ನನ್ನನ್ನು ಸಂಸತ್​ಗೆ ಕಳುಹಿಸಲು ನಿರ್ಧರಿಸಿದ್ದ ಮತದಾರರ ಮನಸ್ಸಿಗೂ ಘಾಸಿಯನ್ನುಂಟು ಮಾಡಲಾಗಿದೆ. ಆದ್ದರಿಂದ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಸೇರಿ ಇರುವ ಹಲವು ಅವಕಾಶಗಳ ಕುರಿತು ಚಿಂತನೆ ನಡೆಸಿದ್ದೇನೆ ಎಂದು ಕವಿತಾ ಹೇಳಿದ್ದಾರೆ. (ಏಜೆನ್ಸೀಸ್​)