ಶಿರಸಿ: ದೇಶದ ಪ್ರಮುಖ ರೋಟರಿ ಕ್ಲಬ್ಗಳಲ್ಲಿ ಒಂದಾದ ಮದ್ರಾಸ್ ಈಸ್ಟ್ ರೋಟರಿ ಕ್ಲಬ್ ನೀಡುವ ಪ್ರತಿಷ್ಠಿತ ಯಂಗ ಅಚೀವರ್ ಅವಾರ್ಡ್ 2024 ಅನ್ನು ಯಕ್ಷಗಾನ ಯುವ ಪ್ರತಿಭೆ, ತಾಲೂಕಿನ ಬೆಟ್ಕೊಪ್ಪದ ತುಳಸಿ ಹೆಗಡೆ ಅವರಿಗೆ ಪ್ರದಾನ ಮಾಡಲಾಯಿತು.
ಮಕ್ಕಳ ದಿನಾಚರಣೆಯ ಪ್ರಯುಕ್ತ ಬುಧವಾರ ಚೆನ್ನೈನ ಕೊನ್ನೆಮಾರಾದ ತಾಜ್ ಹೋಟೆಲ್ನಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹೆಸರಾಂತ ಭರತನಾಟ್ಯ ಕಲಾವಿದೆ ವಿದೂಷಿ ಮೀನಾಕ್ಷಿ ಚಿತ್ತರಂಜನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ವೇದಿಕೆಯಲ್ಲಿ ಮದ್ರಾಸ್ ಈಸ್ಟ್ ರೋಟರಿ ಕ್ಲಬ್ ಅಧ್ಯಕ್ಷ ರವಿ ವೆಂಕಟ್ರಾಮನಿ, ಪ್ರಶಸ್ತಿ ಪ್ರಾಯೋಜಕ ಮುರುಗವೆಲ್ ಸೆಲ್ವನ್, ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷೆ ಸುಜಿತಾ ಅರವಿಂದ ಇದ್ದರು.
ಇದೇ ವೇಳೆ ವಿಶ್ವಶಾಂತಿ ಸರಣಿಯ ಯಕ್ಷನೃತ್ಯ ರೂಪಕವನ್ನು ತುಳಸಿ ಪ್ರಸ್ತುತಗೊಳಿಸಿದಳು. ಕನ್ನಡದ ಕಲೆಯ ಸೊಬಗಿನಲ್ಲಿ ಶ್ರೀ ಕೃಷ್ಣನ ಶಾಂತಿ ಸಂದೇಶದ ಕಥಾಮೃತ ಮೆಚ್ಚುಗೆಗೆ ಪಾತ್ರವಾಯಿತು. ವೆಂಕಟೇಶ ಬೊಗ್ರಿಮಕ್ಕಿ ಪ್ರಸಾದನದಲ್ಲಿ ಸಹಕಾರ ನೀಡಿದರು.