ಬೆಟಗೇರಿ: ವಿದ್ಯಾರ್ಥಿಗಳಿಗಾಗಿ ಶುಭ ಶುಕ್ರವಾರ ಅಭಿಯಾನ

ಬೆಟಗೇರಿ: ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿ.ವಿ.ದೇಯಣ್ಣವರ ಸರ್ಕಾರಿ ಪ್ರೌಢ ಶಾಲೆಯ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಎಲ್ಲ ಸರ್ಕಾರಿ ಪ್ರೌಢಶಾಲೆಗಳಲ್ಲಿ ಮಾ.15ರಂದು ಶುಭ ಹಾರೈಕೆ ಶುಕ್ರವಾರ ಹಾಗೂ ಮಾ.16 ರಂದು ಪಾಸ್ ಪ್ಯಾಕೇಜ್ ವಿನೂತನ ಕಲಿಕಾ ಅಭಿಯಾನ ಜರುಗಿತು.

ಶುಭ ಶುಕ್ರವಾರ: ಅಂದು ಶಾಲೆಯ ಮುಖ್ಯೋಪಾಧ್ಯಾಯ, ಸಹ ಶಿಕ್ಷಕರು ಶಾಲೆಯ ಎಸ್ಸೆಸ್ಸೆಲ್ಸಿ ಎಲ್ಲಾ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವಂತೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಮಕ್ಕಳಲ್ಲಿ ಪರೀಕ್ಷೆ ಭಯ ನಿವಾರಣೆ, ಪರೀಕ್ಷೆ ಸಮಯ ಪ್ರಜ್ಞೆ, ಮಕ್ಕಳ ಅಭ್ಯಾಸದ ಕಡೆ ಪಾಲಕರು ನಿಗಾ ಇಡುವಂತೆ ಹಾಗೂ ಹೆಣ್ಣು ಮಕ್ಕಳು ಎಸ್ಸೆಸ್ಸೆಲ್ಸಿ ವ್ಯಾಸಂಗದ ಬಳಿಕ ಶಿಕ್ಷಣ ಮೊಟಕುಗೊಳಿಸದಂತೆ, ಪಾಲಕರಿಗೆ, ಮನವರಿಕೆ ಮಾಡಿ ಪರೀಕ್ಷೆ ಯಶಸ್ಸು ಸಾಧಿಸುವಂತೆ ಶುಭ ಕೋರಿದರು.

ಪಾಸ್ ಪ್ಯಾಕೇಜ್ ಅಭಿಯಾನ: ಕಲಿಕೆಯಲ್ಲಿ ಹಿಂದುಳಿದ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕನಿಷ್ಠ ಉತ್ತೀರ್ಣರಾಗುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ನುರಿತ ಸಂಪನ್ಮೂಲ ವ್ಯಕ್ತಿ ಹಾಗೂ ಸಹ ಶಿಕ್ಷಕರಿಂದ ಪಾಸ್ ಪ್ಯಾಕೇಜ್ ವಿನೂತನ ಕಲಿಕಾ ಅಭಿಯಾನವೂ ಜರುಗಿತು. ಆ ಮೂಲಕ ಪರೀಕ್ಷೆ ಭಯ ನಿವಾರಣೆ, ಪರೀಕ್ಷೆ ಸಿದ್ಧತೆ, ಕೊಠಡಿಯಲ್ಲಿ ವಿದ್ಯಾರ್ಥಿಯ ಸಿದ್ಧತೆ, ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ತುಂಬುವ, ವಿಜ್ಞಾನ ಚಿತ್ರ, ಗಣಿತ ಸೂತ್ರಗಳನ್ನು ಅತಿ ಕಡಿಮೆ ಅವಧಿಯಲ್ಲಿ ಬಿಡಿಸುವ, ಪ್ರಶ್ನೆಗಳಿಗೆ ಉತ್ತರ ಬರೆಯುವ ಸರಳ ವಿಧಾನ ಸೇರಿ ಹಲವು ಪ್ರಾಯೋಗಿಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಮೂಡಲಗಿ ಶೈಕ್ಷಣಿಕ ವಲಯ ಹಲವು ಭಾರಿ ಪ್ರಥಮ, ದ್ವಿತೀಯ ರ‌್ಯಾಂಕ್ ಗಳಿಸಿದೆ. ಈ ಸಲ ಆ ಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಎಲ್ಲಾ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ಮೇಲುಗೈ ಸಾಧಿಸಲು, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾರ್ಗದರ್ಶನದಲ್ಲಿ ವಲಯದ ಎಲ್ಲ ಪ್ರೌಢಶಾಲೆ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ನುರಿತ ಸಂಪನ್ಮೂಲ ವ್ಯಕ್ತಿಗಳು ಕೈಜೋಡಿಸಿ ಹಗಲಿರುಳು ಕಾರ್ಯಹಿಸುತ್ತಿದ್ದಾರೆ ಎಂದು ಬೆಟಗೇರಿಯ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ ತಿಳಿಸಿದ್ದಾರೆ.

ಸ್ಥಳೀಯ ಪ್ರೌಢಶಾಲೆ ಶಿಕ್ಷಕರಾದ ಮಂಜುನಾಥ ಹತ್ತಿ, ರಮೇಶ ಬುದ್ನಿ, ಮಲ್ಲಿಕಾರ್ಜುನ ಹಿರೇಮಠ, ರಾಕೇಶ ನಡೋಣಿ, ವಿ.ಬಿ. ಬಿರಾದರ, ಶುಭಾ.ಬಿ., ಜಯಶ್ರೀ ಇಟ್ನಾಳ, ವೀಣಾ ಹತ್ತಿ, ಎ.ಬಿ.ತಾಂವಶಿ, ಮೋಹನ ತುಪ್ಪದ, ಪ್ರಮೋದ ದಾಸರ, ಮಲ್ಹಾರಿ ಪೋಳ ಸೇರಿ ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇತರರು ಇದ್ದರು.

ಮೂಡಲಗಿ ಶೈಕ್ಷಣಿಕ ವಲಯದ ಎಲ್ಲ ಸರ್ಕಾರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಈಗಾಗಲೇ ಕಠಿಣ ವಿಷಯ ಕುರಿತು ನುರಿತ ಉಪನ್ಯಾಸಕರು, ಸಹಶಿಕ್ಷಕರಿಂದ ವಿಶೇಷ ಕಾರ್ಯಾಗಾರ ಸೇರಿ ಹಲವು ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ತುಂಬಿ, ಭಯ ನಿವಾರಿಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಯಶಸ್ಸು ಸಾಧಿಸುವಂತೆ ಶಾಲೆಯ ಸಹ ಶಿಕ್ಷಕರಿಂದ ಶುಭ ಹಾರೈಕೆ ಶುಕ್ರವಾರ ಎಂಬ ವಿನೂತನ ಅಭಿಯಾನವನ್ನು ಶೈಕ್ಷಣಿಕ ವಲಯ ವ್ಯಾಪ್ತಿಯ ಎಲ್ಲ ಪ್ರೌಢಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಅಜಿತ ಮನ್ನಿಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೂಡಲಗಿ ವಲಯ.