ಬೇಸಿಗೆಯಲ್ಲಿ ಆರೋಗ್ಯವರ್ಧಕ ಆಹಾರಗಳು

ಬೇಸಿಗೆಯಲ್ಲಿ ಹೆಚ್ಚಿನ ಬಿಸಿಲಿನ ಝುಳದಿಂದಾಗಿ ಅನೇಕ ರೀತಿಯ ದೈಹಿಕ ತೊಂದರೆಗಳು ಉಂಟಾಗುತ್ತವೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವ, ದೇಹ ನಿರ್ಜಲೀಕರಣವಾಗದಂತೆ ತಡೆಯುವ ಆರೋಗ್ಯಯುತ ಆಹಾರಗಳ ಕುರಿತು ತಿಳಿದುಕೊಳ್ಳೋಣ.

ಅರ್ಧ ಕಪ್ ಬಾಳೆಹಣ್ಣು ಹಾಗೂ 10 ಗ್ರಾಂ ಹೆಚ್ಚಿದ ಈರುಳ್ಳಿಯನ್ನು ಬೆಣ್ಣೆಯಲ್ಲಿ ಹುರಿದು ನಂತರ ಜೇನುತುಪ್ಪ ಸೇರಿಸಿ ಸೇವಿಸುವುದು ಹಿತಕರ. ಬೆಣ್ಣೆಹಣ್ಣು ಉತ್ತಮ ಕೊಬ್ಬಿನಂಶದ ಜೊತೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ. ಇದರ ಸೇವನೆ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. 50 ಗ್ರಾಂ ಹಸಿ ಮೂಲಂಗಿಯನ್ನು ತುರಿದು ಪುದೀನಾ ಎಲೆಗಳು, ನೀರು ಹಾಗೂ ಜೇನುತುಪ್ಪವನ್ನು ಹಾಕಿ ರುಬ್ಬಿ ತಾಜಾ ಜ್ಯೂಸ್ ಮಾಡಿ ದಿನಕ್ಕೆ ಒಂದು ಬಾರಿ ಸೇವಿಸುವುದು ದೇಹಕ್ಕೆ ಉತ್ತಮ. ಎಳನೀರು ಸೇವನೆ ಬೇಸಿಗೆಯಲ್ಲಿ ಅತ್ಯುತ್ತಮ ಆಯ್ಕೆ. ರಾತ್ರಿ ಹೆಚ್ಚಿರುವ ಅನ್ನಕ್ಕೆ ನೀರು ಸೇರಿಸಿ ಇಡಬೇಕು. ಮರುದಿನ ಬೆಳಗ್ಗೆ ಈ ನೀರನ್ನು ಬೇರ್ಪಡಿಸಿ ಮಜ್ಜಿಗೆ ಹಾಗೂ ಅರ್ಧ ಚಮಚ ಕಪ್ಪು ಎಳ್ಳಿನ ಪುಡಿಯನ್ನು ಸೇರಿಸಿ ಕುಡಿಯಬೇಕು. ಇದರಿಂದ ಹೊಟ್ಟೆಯ ಸಮಸ್ಯೆಗಳ ನಿವಾರಣೆಯೂ ಸಾಧ್ಯ.

ರಾತ್ರಿ ಒಂದು ಗ್ಲಾಸ್ ನೀರಿಗೆ ಒಂದು ಚಮಚ ಹಸಿ ಮೆಂತ್ಯದ ತಾಜಾ ಪುಡಿಯನ್ನು ಮಿಶ್ರಣ ಮಾಡಿ. ಬೆಳಗ್ಗೆ ಇದಕ್ಕೆ ಒಂದು ಚಮಚ ಆಪಲ್ ಸಿಡೆರ್ ವಿನೆಗರ್ ಹಾಕಿ ಕುಡಿಯುತ್ತ ಬಂದಲ್ಲಿ ಬೇಸಿಗೆಯಲ್ಲಿ ಉಪಯುಕ್ತ. ಮಧುಮೇಹ ಹಾಗೂ ಹೆಚ್ಚಾದ ಅಸಿಡಿಟಿ, ಗ್ಲಾಸ್ ಸಮಸ್ಯೆ ಹತೋಟಿಗೆ ಬರುತ್ತದೆ. ದಿನದ ಮಧ್ಯೆ ಮಧ್ಯೆ ಬೆಲ್ಲವನ್ನು ಸೇರಿಸಿದ ನಿಂಬೆ ಜ್ಯೂಸ್, ಕಿತ್ತಳೆ ರಸ, ಪೈನಾಪಲ್ ರಸ, ಕಲ್ಲಂಗಡಿ ರಸ, ಕರಬೂಜ ಜ್ಯೂಸ್, ಸೌತೆಕಾಯಿ ರಸ, ಟೊಮ್ಯಾಟೊ ರಸ ಮುಂತಾದವುಗಳನ್ನು ಅವರವರ ಪ್ರಕೃತಿಗೆ ಅನುಗುಣವಾಗಿ ಸೇವಿಸಬಹುದು. ಮಧುಮೇಹ ಹೊಂದಿದವರು ಇದಕ್ಕೆ ಸಿಹಿ ಬೆರೆಸದಿರಿ. ಉಳಿದವರು ಸಾವಯವ ಬೆಲ್ಲ ಸೇರಿಸಬಹುದು.

ಬೇಸಿಗೆಯಲ್ಲಿ ಮಜ್ಜಿಗೆಗೆ ಮೆಂತ್ಯ, ಜೀರಿಗೆ ಸೇರಿಸಿ ಪೇಯ ಮಾಡಿ ಸೇವಿಸಬಹುದು. ಕಬ್ಬಿನ ಹಾಲು ಉತ್ತಮ ಪೇಯ. ಶುಂಠಿ, ನಿಂಬೆ, ಪುದಿನ ಸೇರಿಸಿ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಹೆಚ್ಚಿನ ಆರೋಗ್ಯಕಾರಿ ಪರಿಣಾಮ ಕಂಡುಬರುವುದು. ಕ್ಯಾರೇಟ್, ಸಿಹಿಗುಂಬಳ, ಸೋರೆಕಾಯಿ ಮುಂತಾದ ತರಕಾರಿಗಳ ತಾಜಾ ಸೂಪ್ ತಯಾರಿಸಿ ಇದಕ್ಕೆ ತಾಜಾ ಬೆಣ್ಣೆ ಸೇರಿಸಿ ಇದಕ್ಕೆ ಗೋಡಂಬಿ ಪುಡಿ ಹಾಕಿ ಕುಡಿಯಬಹುದು. ಕಾಮಕಸ್ತೂರಿ ಬೀಜಗಳ ಪಾನಕ ತುಂಬ ಒಳ್ಳೆಯದು. ನೆಲ್ಲಿಕಾಯಿಯ ತಾಜಾ ರಸಕ್ಕೆ ಸ್ವಲ್ಪ ಉಪ್ಪು, ಚಿಟಿಕೆ ಕಾಳುಮೆಣಸಿನ ಪುಡಿ ಹಾಕಿ ಕಾಮಕಸ್ತೂರಿ ಬೀಜಗಳನ್ನು ಹಾಕಿ ದಿನಕ್ಕೆರಡು ಬಾರಿ ಸೇವಿಸಬಹುದು.

ಈ ರೀತಿ ಅಡುಗೆಮನೆಯಲ್ಲಿಯೇ ಸರಳವಾದ ಆಹಾರೌಷಧಿಗಳನ್ನು ತಯಾರಿಸಿ ಉಪಯೋಗಿಸುತ್ತಾ

ಬಂದಾಗ ಬೇಸಿಗೆಯಲ್ಲಿ ಬರುವ ಆರೋಗ್ಯ ತೊಂದರೆಗಳ ನಿಯಂತ್ರಣ ಪ್ರಕೃತಿದತ್ತವಾಗಿ ಸಾಧ್ಯ.