ಬೆಂಗಳೂರು ಹೊಸ ರೈಲು ಇಂದು ಉದ್ಘಾಟನೆ

ಮಂಗಳೂರು: ಮಂಗಳೂರು- ಬೆಂಗಳೂರು(ಯಶವಂತಪುರ) ನೂತನ ರೈಲು ಸಂಚಾರಕ್ಕೆ ಫೆ.21ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹಸಿರು ನಿಶಾನೆ ತೋರಿಸಲಿದ್ದಾರೆ.

ಉದ್ಘಾಟನಾ ದಿನದಂದು ವಿಶೇಷ ರೈಲು (ನಂ.06586) ಕಬಕ ಪುತ್ತೂರುವರೆಗೆ ಮಾತ್ರ ಸಂಚರಿಸಲಿದೆ. ಫೆ.22ರಿಂದ ಅಧಿಕೃತ ಸಂಚಾರ ಆರಂಭವಾಗಲಿದೆ. ಮಂಗಳೂರಿನಿಂದ ಸೋಮವಾರ, ಬುಧವಾರ, ಶುಕ್ರವಾರ ರಾತ್ರಿ 7 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 5 ಗಂಟೆಗೆ ಯಶವಂತಪುರ ತಲುಪಲಿದೆ. ಭಾನುವಾರ, ಮಂಗಳವಾರ, ಗುರುವಾರ ಸಾಯಂಕಾಲ 4.30ಕ್ಕೆ ಯಶವಂತಪುರದಿಂದ ಹೊರಡುವ ಈ ರೈಲು ಮರುದಿನ ಬೆಳಗಿನ ಜಾವ 4 ಗಂಟೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ.

ರೈಲಿನ ವಿವರ ಮತ್ತು ವೇಳಾಪಟ್ಟಿ: ಮಂಗಳೂರು-ಯಶವಂತಪುರ (ರೈಲು ನಂ. 16586)- ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 7 ಗಂಟೆಗೆ ಹೊರಟು ರೈಲು ಮಂಗಳೂರು ಜಂಕ್ಷನ್‌ಗೆ 7.15, ಬಂಟ್ವಾಳ 7.48, ಕಬಕ ಪುತ್ತೂರು 8.16, ಸುಬ್ರಹ್ಮಣ್ಯ ರೋಡ್ 9, ಸಕಲೇಶಪುರ 11.35, ಹಾಸನ 12.40, ಚನ್ನರಾಯಪಟ್ಟಣ 1.33, ಶ್ರವಣಬೆಳಗೊಳ 1.48, ಯಡಿಯೂರು 2.38, ನೆಲಮಂಗಲ 3.43, ಯಶವಂತಪುರ 5 ಗಂಟೆಗೆ ತಲುಪಲಿದೆ.

ಯಶವಂತಪುರ-ಮಂಗಳೂರು (ರೈಲು ನಂ.16585)- ಸಾಯಂಕಾಲ 4.30ಕ್ಕೆ ಯಶವಂತಪುರದಿಂದ ಹೊರಡುವ ರೈಲು ನೆಲಮಂಗಲಕ್ಕೆ 4.58, ಯಡಿಯೂರು 6, ಶ್ರವಣಬೆಳಗೊಳ 6.48, ಚನ್ನರಾಯಪಟ್ಟಣ 7, ಹಾಸನ 7.55, ಸಕಲೇಶಪುರ 8.15, ಸುಬ್ರಹ್ಮಣ್ಯ ರೋಡ್ 12.25, ಕಬಕ ಪುತ್ತೂರು 1.13, ಬಂಟ್ವಾಳ 1.43, ಮಂಗಳೂರು ಜಂಕ್ಷನ್ 3.13, ಮಂಗಳೂರು ಸೆಂಟ್ರಲ್ 4 ಗಂಟೆಗೆ ತಲುಪಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

14 ಕೋಚ್: ಹೊಸ ರಾತ್ರಿ ರೈಲಿನಲ್ಲಿ ಟು ಟೈರ್ ಎಸಿ ಕೋಚ್-1, ತ್ರಿ ಟೈರ್ ಎಸಿ ಕೋಚ್-1, ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್-7, ರಿಸರ್ವ್ ಇಲ್ಲದ ಕೋಚ್‌ಗಳು -3, ಲಗೇಜು ಹಾಗೂ ಅಂಗವಿಕಲ ಸ್ನೇಹಿ ಕೋಚ್-2 ಸಹಿತ 14 ಕೋಚ್‌ಗಳಿರುತ್ತವೆ.