ಅಜ್ಜನಹಳ್ಳಿಯಲ್ಲಿ ಇಂದು ಪಂಚಾಯ್ತಿ ಕಟ್ಟೆ

ಬೆಂಗಳೂರು: ಗ್ರಾಮೀಣ ಭಾಗದ ನಾಗರಿಕರ ಕುಂದುಕೊರತೆ ನಿವಾರಣೆಗೆ ಸಹಕಾರಿ ಯಾಗುವ ನಿಟ್ಟಿನಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಆಯೋಜಿಸುತ್ತಿರುವ ‘ಪಂಚಾಯ್ತಿ ಕಟ್ಟೆ’ ವಿನೂತನ ಕಾರ್ಯಕ್ರಮ ಶನಿವಾರ (ಡಿ.8) ಅಜ್ಜನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನಡೆಯಲಿದೆ.

ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿರುವ ಅಜ್ಜನಹಳ್ಳಿ ಗ್ರಾಮ ಪಂಚಾಯ್ತಿ ವಿಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿದೆ. ಪಂಚಾಯ್ತಿ ವ್ಯಾಪ್ತಿಯ ಬ್ಯಾಲಾಳು ಗ್ರಾಮದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ಘಟಕ ಕಾರ್ಯ ನಿರ್ವಹಿಸುತ್ತಿದೆ. ಇದೇ ಕಾರಣಕ್ಕೆ ಪಂಚಾಯ್ತಿಗೆ ವಿಶೇಷ ಸ್ಥಾನಮಾನ ದೊರೆತಿದೆ.

ಬಯಲುಶೌಚಮುಕ್ತ ಗ್ರಾಮ ಪಂಚಾಯ್ತಿ ಎಂಬ ಪ್ರಶಸ್ತಿಗೂ ಅಜ್ಜನಹಳ್ಳಿ ಭಾಜನವಾಗಿದೆ. ಇತ್ತೀಚೆಗೆೆ ಆಂಬುಲೆನ್ಸ್ ವಾಹನ ಪಡೆದು ವೈದ್ಯಕೀಯ ಸೇವೆಯಲ್ಲೂ ಗ್ರಾಪಂ ಮುಂದಡಿಯಿಟ್ಟಿದೆ. ಈ ಪಂಚಾಯ್ತಿ ವ್ಯಾಪ್ತಿಯಲ್ಲಿ 22 ಗ್ರಾಮಗಳಿವೆ. ಶಾಸಕ ಎಸ್.ಟಿ. ಸೋಮಶೇಖರ್ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಪಂಚಾಯ್ತಿ ಹೆಚ್ಚಿನ ಅಭಿವೃದ್ಧಿ ಕಂಡಿದೆ. ಪ್ರಮುಖವಾಗಿ ರಸ್ತೆ ಡಾಂಬರೀಕರಣ, ಕಾಂಕ್ರೀಟ್ ರಸ್ತೆ, ಬೀದಿ ದೀಪ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಣದಿಂದ ಪಂಚಾಯ್ತಿ ಮಾದರಿಯಾಗುವತ್ತ ಹೆಜ್ಜೆ ಹಾಕಿದೆ. ನೂರಿನ್ನೂರು ರೂ.ಗಳಿಂದ 50- 60 ಲಕ್ಷ ರೂ. ಬೆಲೆ ಬಾಳುವ ಬೋನ್ಸಾಯ್ ನರ್ಸರಿಗಳು ಪಂಚಾಯ್ತಿ ವ್ಯಾಪ್ತಿಯಲ್ಲಿವೆ.

ಪ್ರಮುಖವಾಗಿ ಒಳಚರಂಡಿ ಸಮಸ್ಯೆ ಇದೆ. ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಮೂಲಿ ಎನ್ನುವಂತಾಗಿದೆ. ಆಶ್ರಯ ಯೋಜನೆಯಡಿ ಮನೆಗಳಿಗೆ ಬೇಡಿಕೆ ಇದೆ. ರೇಷನ್ ಕಾರ್ಡ್, ಹಕ್ಕುಪತ್ರ ಪ್ರಮುಖ ಬೇಡಿಕೆಯಾಗಿದೆ. ಇದರ ಜತೆಗೆ ಈ ಭಾಗದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ವಾಹನಗಳ ಸಂಚಾರದಿಂದ ಉಂಟಾಗುವ ಧೂಳಿನ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನವಿದೆ.

ನೀವೇನು ಕೇಳಬೇಕು?

# ನಿಮ್ಮ ಸಮಸ್ಯೆಗಳನ್ನು ನೇರವಾಗಿ ಪ್ರಸ್ತಾಪಿಸಿ

# ಎಲ್ಲಿ, ಯಾವಾಗಿನಿಂದ ಸಮಸ್ಯೆ ಇದೆ ವಿವರಿಸಿ

# ದೂರು ಕೊಟ್ಟರೂ ಪರಿಹರಿಸದಿದ್ದಲ್ಲಿ ತಿಳಿಸಿ

# ಇಂತಿಷ್ಟೇ ದಿನದಲ್ಲಿ ಪರಿಹರಿಸುವ ಬಗ್ಗೆ ಖಚಿತಪಡಿಸಿಕೊಳ್ಳಿ

ಕ್ಷೇತ್ರದ ಶಾಸಕರ ಸ್ಪಂದನೆ

ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಸತತ 2 ಬಾರಿ ಶಾಸಕರಾಗಿ ಎಸ್.ಟಿ. ಸೋಮಶೇಖರ್ ಆಯ್ಕೆಯಾಗಿದ್ದಾರೆ. ಕ್ಷೇತ್ರದ 17 ಪಂಚಾಯ್ತಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಶಾಸಕರು ಹೆಚ್ಚು ಶ್ರಮಿಸಿದ್ದಾರೆ. ಗ್ರಾಮಗಳಲ್ಲಿ ಕಾಂಕ್ರಿ್ರೕಟ್ ರಸ್ತೆ ನಿರ್ವಣ, ಕುಡಿವ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಿದ್ದಾರೆ. ಆಶ್ರಯ ಯೋಜನೆಯಡಿ ಮನೆ ನಿವೇಶನಗಳ ಹಂಚಿಕೆ, ಹಕ್ಕುಪತ್ರ ವಿತರಣೆ, ಉಚಿತ ಆರೋಗ್ಯ ಶಿಬಿರ, ಉಚಿತ ಸಾಮೂಹಿಕ ವಿವಾಹ, ಸಹಕಾರ ಸಪ್ತಾಹ ಮತ್ತಿತರ ಜನಪರ ಕಾರ್ಯಕ್ರಮ ನಡೆಸಿಕೊಂಡು ಬರುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳನ್ನು ಬಿಬಿಎಂಪಿ ವಾರ್ಡ್​ಗಳಂತೆ ಅಭಿವೃದ್ಧಿಪಡಿಸುವ ಇಂಗಿತ ಹೊಂದಿದ್ದು, ವಿಶೇಷ ಒತ್ತು ನೀಡಿದ್ದಾರೆ. ಗ್ರಾಮ ಸಭೆಗಳ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತಿದ್ದಾರೆ.

ಯಾರ್ಯಾರ ಉಪಸ್ಥಿತಿ?

# ಶಾಸಕ: ಎಸ್.ಟಿ. ಸೋಮಶೇಖರ್

# ಗ್ರಾಪಂ ಅಧ್ಯಕ್ಷ: ರುದ್ರಪ್ಪ

# ಜಿಲ್ಲಾ ಪಂಚಾಯಿತಿ ಸದಸ್ಯ: ಹನುಮಂತಯ್ಯ

# ತಾಲೂಕು ಪಂಚಾಯಿತಿ ಸದಸ್ಯೆ: ಕವಿತಾ ರಾಮಕೃಷ್ಣ

# ಪಿಡಿಒ: ಶಂಭೇಗೌಡ

ಪಂಚಾಯ್ತಿ ವ್ಯಾಪ್ತಿ ಗ್ರಾಮಗಳು

# ಚಂದ್ರಪ್ಪ ಸರ್ಕಲ್

# ಬ್ಯಾಲಾಳು

# ಅಜ್ಜನಪುರ

# ಮಾದಾಪಟ್ಟಣ

# ಹುಲುವೇನಹಳ್ಳಿ ಜ ಹುಣ್ಣಿಗೆರೆ

# ಮುದ್ದಿನಪಾಳ್ಯ

# ಕಾಳಯ್ಯನಪಾಳ್ಯ ಮತ್ತಿತರ ಗ್ರಾಮಗಳು

ನಿರಂತರ ಫಾಲೋಅಪ್

ಪಂಚಾಯ್ತಿ ಮಟ್ಟದಲ್ಲಿನ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡುವುದು ಪಂಚಾಯ್ತಿ ಕಟ್ಟೆಯ ಪ್ರಮುಖ ಉದ್ದೇಶ. ಕಾರ್ಯಕ್ರಮ ಮುಕ್ತಾಯದ ಬಳಿಕವೂ ಅಲ್ಲಿ ವ್ಯಕ್ತವಾದ ಸಮಸ್ಯೆಗೆ ಪರಿಹಾರ ಕಾರ್ಯ ಯಾವ ಹಂತದಲ್ಲಿದೆ ಎಂಬುದನ್ನು ವಿಜಯವಾಣಿ ಹಾಗೂ ದಿಗ್ವಿಜಯ ವಾಹಿನಿ ತಂಡ ನಿರಂತರ ಫಾಲೋಅಪ್ ಮಾಡಲಿವೆ.

ಪಂಚಾಯ್ತಿ ಕಟ್ಟೆ ನಡೆಯುವ ಸ್ಥಳ

ಅಜ್ಜನಹಳ್ಳಿ ಗ್ರಾಮ ಪಂಚಾಯ್ತಿ ಸಮುದಾಯ ಆರೋಗ್ಯ ಕೇಂದ್ರ ಆವರಣ, ಚಂದ್ರಪ್ಪ ಸರ್ಕಲ್, ಚುಂಚನಗುಪ್ಪೆ, ಮೈಸೂರು ರಸ್ತೆ ಸಮೀಪ.

ಡಿ.8, ಶನಿವಾರ, ಬೆಳಗ್ಗೆ 11 ಗಂಟೆಗೆ

ಗ್ರಾಪಂ ಕಟ್ಟಡದ ಕನಸು

ಅಜ್ಜನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಮೊದಲ ಬಾರಿಗೆ ಆಯ್ಕೆಯಾಗಿರುವ ರುದ್ರಪ್ಪ, ಈ ಮೊದಲು ಚಿಕ್ಕನಹಳ್ಳಿ ಹಾಗೂ ಅಜ್ಜನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ನಂತರ ಅಜ್ಜನಹಳ್ಳಿ ಗ್ರಾಪಂಗೆ ಉಪಾಧ್ಯಕ್ಷರಾದದರು. ಇದೇ ಅವಧಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಗದ್ದುಗೆ ಹಿಡಿದರು. ಶಾಸಕರ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮಾದರಿ ಗ್ರಾಪಂ ಮಾಡುವ ಕನಸು ಇವರದ್ದು. ಬಾಡಿಗೆ ಕಟ್ಟಡದಲ್ಲಿರುವ ಪಂಚಾಯ್ತಿ ಕಚೇರಿಗೆ ತಮ್ಮ ಅಧಿಕಾರವಧಿಯಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕು ಎಂಬುದು ಇವರ ಹೆಬ್ಬಯಕೆಯಾಗಿದೆ. ಶಾಸಕರ ನೆರವಿನೊಂದಿಗೆ ಖಾತಾ ಆಂದೋಲನ ನಡೆಸಿ ಯಶಸ್ಸು ಕಂಡಿದ್ದಾರೆ. ಬ್ಯಾಲಾಳುವಿನಲ್ಲಿ ಸುಸಜ್ಜಿತ ಬಸ್ ತಂಗುದಾಣ ನಿರ್ವಣ, ಪ್ರಮುಖ ಜಾಗಗಳಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆ, ಶುದ್ದ ನೀರಿನ ಘಟಕಗಳ ನಿರ್ಮಾಣ ಸೇರಿ ಹಲವು ಜನಸ್ನೇಹಿ ಕಾರ್ಯ ಮಾಡಿದ್ದಾರೆ. ಅಂಗವಿಕಲರಿಗೆ ವಿಶೇಷ ಶೌಚಗೃಹ ನಿರ್ಮಾಣ ಸಂಬಂಧ ಶಾಸಕರ ಗಮನ ಸೆಳೆದಿದ್ದು, ಅವರಿಂದಲೂ ಹಸಿರುನಿಶಾನೆ ದೊರೆತಿದೆ ಎನ್ನಲಾಗಿದೆ.

ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ

ಚೋಳನಾಯಕನಹಳ್ಳಿ ಜಿಪಂ ಸದಸ್ಯರಾಗಿರುವ ಹನುಮಂತಯ್ಯ 2ನೇ ಅವಧಿಗೂ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೊದಲು ಬಿಡಿಸಿಸಿ ಅಧ್ಯಕ್ಷರಾಗಿದ್ದರು. ಇದೀಗ ಸದಸ್ಯರಾಗಿದ್ದಾರೆ. ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ, ಬೆಂಗಳೂರು ದಕ್ಷಿಣ ತಾಲೂಕು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸ್ಥಳೀಯರೇ ಆಗಿದ್ದು, ಇವರ ತಂದೆ ದೊಡ್ಡಯ್ಯ ಚೋಳನಾಯಕನಹಳ್ಳಿ ಗ್ರಾಪಂ ಅಧ್ಯಕ್ಷರಾಗಿದ್ದರು. ತಾಯಿ ಗಂಗಮ್ಮ ಸದಸ್ಯರಾಗಿದ್ದರು. ಕುಟುಂಬದಿಂದಲೇ ರಾಜಕೀಯ ನಂಟು ಹೊಂದಿದ್ದು, ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ರೈತಾಪಿ ಕುಟುಂಬದಿಂದ ಬಂದ ಹನುಮಂತಯ್ಯ ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 38 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದಾರೆ. ಓವರ್ ಹೆಡ್ ಟ್ಯಾಂಕ್​ಗಳ ನಿರ್ವಣದ ಮೂಲದ ಗ್ರಾಮೀಣ ಭಾಗದಲ್ಲಿನ ನೀರಿನ ಸಮಸ್ಯೆಗೆ ಪರಿಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾಸಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಅವರ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ತಾಪಂ ಸದಸ್ಯೆ ಪರಿಚಯ

ತಾಪಂ ಸದಸ್ಯರಾಗಿರುವ ಕವಿತಾ ರಾಮಕೃಷ್ಣ ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ. ಪಕ್ಷ ಸಂಘಟನೆ, ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿರುವ ಇವರ ಕಾರ್ಯವೈಖರಿ ಗುರುತಿಸಿ ಶಾಸಕ ಸೋಮಶೇಖರ್ ರಾಜಕೀಯ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಕವಿತಾ ಅವರ ಮಾವ ಮಹದೇವಯ್ಯ ಗ್ರಾಪಂ ಸದಸ್ಯರಾಗಿದ್ದರು. ಪತಿ ರಾಮಕೃಷ್ಣ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿಯಾಗಿದ್ದರು. ಜಿಪಂ ಸದಸ್ಯ ಹನುಮಂತಯ್ಯ ಮಾರ್ಗದರ್ಶನ ಹಾಗೂ ಸಹಕಾರದಿಂದ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು,

ಶಾಸಕರ ನೆರವಿನೊಂದಿಗೆ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪತ್ನಿಯ ರಾಜಕೀಯ ಚಟುವಟಿಕೆಗಳಿಗೆ ರಾಮಕೃಷ್ಣ ಬೆನ್ನೆಲುಬಾಗಿದ್ದಾರೆ.