90 ಲಕ್ಷ ರೂ. ಮೌಲ್ಯದ ಆಭರಣ ಕದ್ದು ಮಣ್ಣಲ್ಲಿ ಹೂತಿಟ್ಟಿದ್ದ ಖದೀಮನ ಬಂಧನ

ಬೆಂಗಳೂರು: ಬರೋಬ್ಬರಿ 90 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕಳ್ಳತನ ಮಾಡಿ ಬಿಹಾರಕ್ಕೆ ಪರಾರಿಯಾಗಿದ್ದ ಖದೀಮನನ್ನು ಮಡಿವಾಳ ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ಅಖಿಲೇಶ್ ಕುಮಾರ್ (31) ಬಂಧಿತ ಆರೋಪಿ. ಈತ ಒಂದು ವರ್ಷದಿಂದ ಉದ್ಯಮಿ ಸತ್ಯಪ್ರಕಾಶ್​ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಅಕ್ಟೋಬರ್​ 17ರ ಮಧ್ಯಾಹ್ನ ಮನೆಯ ಲಾಕರ್​ ಕಳ್ಳತನ ಮಾಡಿ ಇಂದಿರಾ ನಗರಕ್ಕೆ ತೆಗೆದುಕೊಂಡು ಹೋಗಿ ಹೊಡೆದು ಹಾಕಿ, ಸುಮಾರು 90 ಲಕ್ಷ ರೂ. ಮೌಲ್ಯದ ವಜ್ರ, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ತುಂಬಿಕೊಂಡು ಬಿಹಾರಕ್ಕೆ ಪರಾರಿಯಾಗಿದ್ದ.

ಈ ಸಂಬಂಧ ಉದ್ಯಮಿ ಸತ್ಯಪ್ರಕಾಶ್​ ಮಡಿವಾಳ ಠಾಣೆಗೆ ದೂರು ನೀಡಿದ್ದರು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ಬಿಹಾರಕ್ಕೆ ತೆರಳಿ, ಮನೆಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ, ಮನೆಯ ಹಿತ್ತಲಲ್ಲಿ ಆಭರಣಗಳನ್ನು ಹೂತಿಟ್ಟಿರುವುದು ಬಯಲಾಗಿದೆ. ಆಭರಣಗಳನ್ನು ಜಪ್ತಿ ಮಾಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)