ರಾಜಧಾನಿಯ 2 ಕಡೆ ಸ್ಪೋಟಕ್ಕೆ ಸಂಚು!

ಬೆಂಗಳೂರು: ರಾಮನಗರದಲ್ಲಿ ಸೆರೆಸಿಕ್ಕ ಬಾಂಗ್ಲಾ ಮೂಲದ ಜೆಎಂಬಿ ಉಗ್ರ ಮುನೀರ್ ಶೇಖ್ ಬೆಂಗಳೂರಿನ 2 ಕಡೆ ಬಾಂಬ್ ಸ್ಪೋಟಿಸಲು ಸಂಚು ರೂಪಿಸಿದ್ದ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ದುಷ್ಕೃತ್ಯ ಎಸಗುವುದಕ್ಕಾಗಿಯೇ ಜನಸಂದಣಿ ಇರುವ ಪ್ರದೇಶಗಳಿಗಾಗಿ ಶೋಧ ಕೂಡ ನಡೆಸಿದ್ದನೆಂಬ ವಿಚಾರ ಎನ್​ಐಎ ತನಿಖೆಯಲ್ಲಿ ಹೊರಬಿದ್ದಿರುವುದಾಗಿ ತಿಳಿದುಬಂದಿದೆ.

ಮುನೀರ್​ನನ್ನು 5 ದಿನ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿರುವ ಎನ್​ಐಎ ಅಧಿಕಾರಿಗಳು ಉದ್ಯಾನನಗರಿಯಲ್ಲಿ ಬಾಂಬ್ ಸ್ಪೋಟಿಸಲು ಹೆಣೆದಿದ್ದ ಸಂಚನ್ನು ಬಾಯ್ಬಿಡಿಸಿದ್ದಾರೆ. ಬೋಧಗಯಾದಲ್ಲಿ ಸರಣಿ ಬಾಂಬ್ ಸ್ಪೋಟಿಸಿ, ಕಳೆದ ಮೇ ತಿಂಗಳಲ್ಲಿ ಬೆಂಗಳೂರಿಗೆ ಬಂದಿದ್ದ ಉಗ್ರ, ರಾಜಧಾನಿಯಲ್ಲಿ ಬಾಂಬ್ ಸ್ಪೋಟಿಸಿದ ಬಳಿಕ ಡಿಸೆಂಬರ್​ನಲ್ಲಿ ಪರಾರಿಯಾಗಲು ಯೋಜನೆ ರೂಪಿಸಿದ್ದ ಎಂದು ಹೇಳಲಾಗುತ್ತಿದೆ.

ಪ್ರಯೋಗಕ್ಕೆ ಸಿದ್ಧತೆ!: ಬಟ್ಟೆ ವ್ಯಾಪಾರದ ಸೋಗಿನಲ್ಲಿ ಪ್ರತಿದಿನ ಬೆಂಗಳೂರಿಗೆ ಬರುತ್ತಿದ್ದ ಆರೋಪಿ ಮುನೀರ್, ಜನಸಂದಣಿ ಪ್ರದೇಶಗಳನ್ನು ಗುರುತಿಸಲು ವಿವಿಧೆಡೆ ಫುಟ್​ಪಾತ್​ಗಳಲ್ಲಿ ಬಟ್ಟೆ ಮಾರಾಟ ಮಾಡುತ್ತಿದ್ದ. ಇಂತಹ ಎರಡು ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಕಚ್ಚಾ ಬಾಂಬ್ ಸ್ಪೋಟಿಸಲು ಸಿದ್ಧತೆ ನಡೆಸುತ್ತಿದ್ದ. ಎನ್​ಐಎ ತಂಡ ಆತನನ್ನು ಬಂಧಿಸದಿದ್ದರೆ ಕೆಲ ದಿನಗಳಲ್ಲೇ

ಕಚ್ಚಾ ಬಾಂಬ್ ಸ್ಪೋಟಿಸಿ ಆ ಬಳಿಕ ದೊಡ್ಡಪ್ರಮಾಣದ ಸ್ಪೋಟಕ್ಕೆ ಯೋಜನೆ ಸಿದ್ಧಪಡಿಸಿಕೊಳ್ಳುತ್ತಿದ್ದ ಎಂಬುದು ಎನ್​ಐಎ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಸಹಚರರಿಗೆ ಶೋಧ: ಆ.15ರ ಸ್ವಾತಂತ್ರ್ಯೊತ್ಸವದಂದು ಬೆಂಗಳೂರಿನಲ್ಲಿ ಬಾಂಬ್ ಸ್ಪೋಟಿಸಲು ಮುನೀರ್ ಸಂಚು ರೂಪಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆಯೂ ಎನ್​ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಮುನೀರ್​ಗೆ ಸಹಕರಿಸುತ್ತಿದ್ದ ಇನ್ನಷ್ಟು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿರುವ ಎನ್​ಐಎ ಅವರನ್ನು ಬಂಧಿಸಲು ಬಲೆ ಬೀಸಿದೆ.

ಕಣ್ಣಿಟ್ಟಿದ್ದ ಎನ್​ಐಎ

ಬೆಂಗಳೂರಿನ ಕೆ.ಆರ್.ಪುರ, ವೈಟ್ ಫೀಲ್ಡ್​ನಲ್ಲಿ ಈ ಮೊದಲು ವಾಸವಾಗಿದ್ದ ಮುನೀರ್, ತನ್ನ ಮೇಲೆ ಪೊಲೀಸರಿಗೆ ಅನುಮಾನ ಬರಬಾರದೆಂದು ರಾಮನಗರಕ್ಕೆ ಸ್ಥಳಾಂತರವಾಗಿದ್ದ. ಬೋಧಗಯಾ ಬಾಂಬ್​ಸ್ಪೋಟದಲ್ಲಿ ಭಾಗಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಎನ್​ಐಎ ಆತನ ಮೇಲೆ ಕಣ್ಣಿಟ್ಟಿತ್ತು. ಎನ್​ಐಎ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಬೆಂಗಳೂರು ಸುರಕ್ಷಿತ ತಾಣ ಎಂಬುದನ್ನು ಮನಗಂಡಿದ್ದ ಭಯೋತ್ಪಾದಕ, ಉತ್ತರ ಭಾರತದಿಂದ ನೇರವಾಗಿ ತನ್ನ ಕುಟುಂಬದ ಜತೆ ನಗರಕ್ಕೆ ಬಂದಿದ್ದ ಎಂದು ಎನ್​ಐಎ ಮೂಲಗಳು ತಿಳಿಸಿವೆ.