ಡೈನಾಮಿಕ್ ಸಿಟಿಯ ಆಸ್ತಿ ತೆರಿಗೆ ದುಬಾರಿ

| ಅಭಯ್ ಮನಗೂಳಿ ಬೆಂಗಳೂರು

ಡೈನಾಮಿಕ್ ಸಿಟಿ ಖ್ಯಾತಿಯ ಬೆಂಗಳೂರು ದಿನೇದಿನೆ ಬೆಳೆಯುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಸಾಧಿಸುತ್ತಿರುವ ಬೆಂಗಳೂರಿನಲ್ಲಿ ಗಗನಚುಂಬಿ ಕಟ್ಟಡಗಳು ನಿತ್ಯ ತಲೆಯೆತ್ತುತ್ತಲೇ ಇವೆ. ಇವುಗಳಿಂದ ಸಂಗ್ರಹವಾಗುವ ಆಸ್ತಿ ತೆರಿಗೆ ಪ್ರಮಾಣವೂ ಕಡಿಮೆಯೇನಿಲ್ಲ.

ಜಾಗತಿಕವಾಗಿ ಗಮನ ಸೆಳೆದಿರುವ ಬೆಂಗಳೂರು ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಟ್ರಾಫಿಕ್ ಸಮಸ್ಯೆ ಹೊರತುಪಡಿಸಿದರೆ ಈ ನಗರದ ಬಗ್ಗೆ ನಕಾರಾತ್ಮಕವಾಗಿ ಮಾತನಾಡಲು ಬೇರೆ ಹೆಚ್ಚಿನ ಗಮನಾರ್ಹ ಅಂಶಗಳೂ ಇಲ್ಲ. ಇಂತಹ ನಗರ ಬೆಳವಣಿಗೆ ಸಾಧಿಸಿದಷ್ಟು ಸಂದಾಯವಾಗುತ್ತಿರುವ ತೆರಿಗೆ ಪ್ರಮಾಣವೂ ಹೆಚ್ಚಳವಾಗುತ್ತಿದೆ. ನಗರದಲ್ಲಿ ಒಟ್ಟು 19 ಲಕ್ಷ ಆಸ್ತಿಗಳಿದ್ದು, ಈ ಎಲ್ಲ ಆಸ್ತಿಗಳಿಂದ 2600 ಕೋಟಿ ರೂ.ಗಳ ತೆರಿಗೆಯನ್ನು ನಿರೀಕ್ಷಿಸಲಾಗಿದೆ.

1777 ಕೋಟಿ ರೂ. ಸಂಗ್ರಹ: 2017-18ನೇ ಸಾಲಿನಲ್ಲಿ 2700 ಕೋಟಿ ರೂ.ಗಳ ಆಸ್ತಿ ತೆರಿಗೆ ಸಂಗ್ರಹವಾಗಿದೆ. ವರ್ಷದಿಂದ ವರ್ಷಕ್ಕೆ ಆಸ್ತಿ ತೆರಿಗೆ ಸಂಗ್ರಹದ ಗುರಿಯನ್ನು ಬಿಬಿಎಂಪಿ ಹೆಚ್ಚಿಸಿಕೊಳ್ಳುತ್ತಿದೆ. ಆಸ್ತಿ ತೆರಿಗೆ ಸಂಗ್ರಹಕ್ಕಾಗಿ ಹಲವು ಆಧುನಿಕ ಮಾರ್ಗಗಳನ್ನು ಬಿಬಿಎಂಪಿ ಅನುಸರಿಸುತ್ತಿದ್ದು, ಅದರ ಫಲ ಕೂಡ ಸಿಕ್ಕಿದೆ.

2018-19ನೇ ಸಾಲಿನ ಆಸ್ತಿ ತೆರಿಗೆ ಸಂಗ್ರಹಕ್ಕೆ ಬಿಬಿಎಂಪಿ ಚಾಲನೆ ನೀಡಿದೆ. ಆನ್​ಲೈನ್ ತೆರಿಗೆ ಸಂಗ್ರಹದಲ್ಲಿ ಈ ಬಾರಿ ಯಾವುದೇ ದೋಷಗಳು ಎದುರಾಗದಂತೆ ಬಿಬಿಎಂಪಿ ಕಾರ್ಯ ನಿರ್ವಹಿಸಿದ್ದು, ಬೆಂಗಳೂರಿಗರ ಮೆಚ್ಚುಗೆಗೂ ಪಾತ್ರವಾಗಿದೆ.

ಪ್ರತಿ ಸಲ ಏಪ್ರಿಲ್ ಅಷ್ಟೇ ಅಲ್ಲ, ಮೇನಲ್ಲೂ ಆಸ್ತಿ ತೆರಿಗೆ ಮೇಲೆ ಶೇ.5ರಷ್ಟು ರಿಯಾಯಿತಿಯನ್ನು ಬಿಬಿಎಂಪಿ ನೀಡುತ್ತಿತ್ತು. ಈ ಬಾರಿ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಏಪ್ರಿಲ್ ತಿಂಗಳು ಮಾತ್ರವೇ ರಿಯಾಯಿತಿಯನ್ನು ಘೋಷಿಸಲಾಗಿತ್ತು. ಒಂದು ತಿಂಗಳಲ್ಲಿ ಬರೋಬ್ಬರಿ 1 ಸಾವಿರ ಕೋಟಿ ರೂ.ಗಳ ತೆರಿಗೆ ಸಂಗ್ರಹವಾಗಿದ್ದು, ಈ ಬಾರಿ ಒಟ್ಟಾರೆ ಹೆಚ್ಚಿನ ಪ್ರಮಾಣದ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯನ್ನು ಮೂಡಿಸಿದೆ. ಬಿಬಿಎಂಪಿ ಕೂಡ ಹೆಚ್ಚಿನ ತೆರಿಗೆ ಸಂಗ್ರಹಕ್ಕೆ ನಾನಾ ಯೋಜನೆಗಳನ್ನು ಹೊಂದಿದೆ.

ಹಿಂದಿನ ವರ್ಷಗಳಲ್ಲಿ ತೆರಿಗೆ ಸಂಗ್ರಹಕ್ಕೆ ಅಭಿಯಾನದ ರೂಪ ನೀಡಲಾಗಿತ್ತು. ಈ ರೀತಿಯ ಪ್ರಯತ್ನಗಳು ಈ ಸಾಲಿನಲ್ಲಿಯೂ ನಡೆಯುವ ಸಾಧ್ಯತೆ ಇದೆ. ಬೃಹತ್ ತೆರಿಗೆದಾರರ ಬಳಿಗೆ ತೆರಳಿ ಅವರಿಂದ ಚೆಕ್ ಮುಖಾಂತರ ಆಸ್ತಿ ತೆರಿಗೆಯನ್ನು ಪಡೆಯುವುದರೊಂದಿಗೆ ಮಧ್ಯಮ ಹಾಗೂ ಸಣ್ಣ ಗಾತ್ರದ ಆಸ್ತಿಗಳನ್ನು ಕಂದಾಯ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಆಸ್ತಿ ತೆರಿಗೆ ಸಂಗ್ರಹಕ್ಕೆ ಎಲ್ಲಿಲ್ಲದ ಒತ್ತನ್ನು ಬಿಬಿಎಂಪಿ ನೀಡುತ್ತಿರುವುದರ ಪರಿಣಾಮವೇ ಅನೇಕ ಕಟ್ಟಡಗಳು ಕೂಡ ಸಾಲದ ಹೊರೆಯಿಂದ ಋಣಮುಕ್ತವಾಗಿ ಮರಳಿ ಬಿಬಿಎಂಪಿ ತೆಕ್ಕೆಗೆ ಸೇರಿವೆ.

ಟೋಟಲ್ ಸ್ಟೇಷನ್ ಸರ್ವೆ: ಆಸ್ತಿದಾರರು ತಮ್ಮ ಕಟ್ಟಡ, ಜಾಗದ ಅಳತೆಯನ್ನೂ ನೀಡಿದರೂ ಅದನ್ನು ವೈಜ್ಞಾನಿಕವಾಗಿ ಖಚಿತಪಡಿಸಿಕೊಂಡು ಪಾರದರ್ಶಕತೆ ಕಾಯ್ದುಕೊಳ್ಳುವುದು ಬೇಡವೇ? ಇಂತಹ ಪ್ರಶ್ನೆಗೆ ಬಿಬಿಎಂಪಿ, ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಂಡಿದೆ.

ಟೋಟಲ್ ಸ್ಟೇಷನ್ ಸರ್ವೆ ಯಂತ್ರಗಳನ್ನು ಬಳಸುತ್ತಿರುವ ಪಾಲಿಕೆಯು ಕಟ್ಟಡ ಮತ್ತು ಖಾಲಿ ಜಾಗಗಳಲ್ಲಿ ಈ ಯಂತ್ರವನ್ನು ಬಳಸಿ ನಿಖರ ಅಳತೆಯನ್ನು ಪಡೆಯುತ್ತಿದೆ. ಆ ಮೂಲಕ ತಪು್ಪ ಮಾಹಿತಿ ನಮೂದಿಸುತ್ತಿದ್ದವರಿಗೆ ಪಾಲಿಕೆ ಕಡಿವಾಣ ಹಾಕಿದೆ. ಈ ಯಂತ್ರ ನಿಖರ ಮಾಹಿತಿ ನೀಡುವುದರಿಂದ ಬೃಹತ್ ಆಸ್ತಿದಾರರು ನೀಡುವ ಮಾಹಿತಿಯನ್ನು ಅದರೊಂದಿಗೆ ತಾಳೆ ಹಾಕುತ್ತದೆ. ಇದಲ್ಲದೆ ಕಟ್ಟಡಗಳಿಗೆ ಜಿಐಎಸ್ ಸಂಖ್ಯೆಗಳನ್ನು ನೀಡುವುದರ ಮೂಲಕ ನಗರದಲ್ಲಿರುವ ಆಸ್ತಿಗಳ ಸಂಖ್ಯೆಯನ್ನೂ ಬಿಬಿಎಂಪಿ ಪತ್ತೆ ಮಾಡಿದ್ದು, ಇದರಿಂದಾಗಿಯೇ ಆಸ್ತಿ ತೆರಿಗೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೆ ಪಾಲಿಕೆ ಇಟ್ಟುಕೊಳ್ಳುವ ಗುರಿಯನ್ನು ತಲುಪಲು ಸಾಧ್ಯವಾಗುತ್ತಿಲ. ಇದಕ್ಕೂ ಕಾರಣಗಳನ್ನು ಹುಡುಕಲಾಗುತ್ತಿದ್ದು, ಒಂದೊಂದಾಗಿ ಪರಿಹಾರಗಳನ್ನು ಕಂಡುಕೊಳ್ಳುತ್ತಿದೆ.

Leave a Reply

Your email address will not be published. Required fields are marked *