ವಾಸ್ತು ನೋಡಲು ಮನೆಗೆ ತೆರಳಿದ ಸ್ವಾಮೀಜಿ ಜನ್ಮಾಂತರದ ಕತೆ ಕಟ್ಟಿ ಯುವತಿಗೆ ವಂಚಿಸಿದ್ದನ್ನು ಕೇಳಿದರೆ ಶಾಕ್​ ಆಗುವುದು ಖಂಡಿತ!

ಬೆಂಗಳೂರು: ವಾಸ್ತು ನೋಡುವ ಹೆಸರಲ್ಲಿ ಶ್ರೀಮಂತರ ಮನೆಗೆ ಹೋಗಿ ಮನೆಯ ಹೆಣ್ಣು ಮಗಳನ್ನೇ ತನ್ನ ಬಲೆಗೆ ಹಾಕಿಕೊಂಡು, ವಂಚನೆ ಮಾಡಿರುವ ಆರೋಪದ ಮೇಲೆ ಸ್ವಾಮೀಜಿಯೊಬ್ಬನನ್ನು ಸಿಲಿಕಾನ್​ ಸಿಟಿಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ವೆಂಕಟ ಕೃಷ್ಣಾಚಾರ್ಯ(28) ಬಂಧಿತ ಸ್ವಾಮೀಜಿ. ಈತ ಕಳೆದ ಕೆಲ ವರ್ಷಗಳಿಂದ ಜ್ಯೋತಿಷ್ಯ, ವಾಸ್ತು ಹೆಸರಲ್ಲಿ ಜನರನ್ನು ಯಾಮಾರಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರಿನ ಶ್ರೀನಿವಾಸನಗರದ ಅಪಾರ್ಟ್ಮೆಂಟ್​ನಲ್ಲಿ ಕಚೇರಿ ತೆರೆದಿರುವ ಈತ ಕಳೆದ ಎರಡು ವರ್ಷಗಳ ಹಿಂದೆ ವಿಜಯನಗರದ ಯುವತಿಯೊಬ್ಬರ ಮನೆಗೆ ವಾಸ್ತು ನೋಡಲು ತೆರಳಿದ್ದ ಎನ್ನಲಾಗಿದೆ. ಈ ವೇಳೆ ಮನೆಯ ವಾಸ್ತು ಸರಿಯಿಲ್ಲ. ವಾಸ್ತು ದೋಷದಿಂದ ಮನೆಯಲ್ಲಿ ಶುಭ ಕಾರ್ಯಗಳು ಆಗುತ್ತಿಲ್ಲ ಎಂದು ನಂಬಿಸಿ, ವಂಚಿಸಿದ್ದಾನೆ ಎಂದು ಹೇಳಲಾಗಿದೆ.

ಜನ್ಮ-ಜನ್ಮದ ಅನುಬಂಧದ ಕತೆ
ಕಳೆದ ಎರಡು ವರ್ಷಗಳಿಂದ ಸುಮಾರು ಹನ್ನೆರಡು ಬಾರಿ‌ ಯುವತಿಯ ಮನೆಯಲ್ಲಿ ಯಾಗಗಳನ್ನು ಮಾಡಿರುವ ಆರೋಪಿ, ಜನ್ಮ-ಜನ್ಮದ ಅನುಬಂಧ ಎಂದು ಕತೆ ಕಟ್ಟಿ, ನಂತರ ಯುವತಿಯ ನಂಬರ್ ಪಡೆದು ಯುವತಿಯ ಜತೆ ಲವ್ವಿ-ಡವ್ವಿ ಶುರು ಮಾಡಿದ್ದಾನೆ. ಖಾಸಗಿ ಕಂಪನಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಸಂತ್ರಸ್ತೆ ಯುವತಿಯನ್ನು ತನ್ನ ಅಪಾರ್ಟ್ಮೆಂಟ್​ಗೆ ಕರೆದು ಹಲವು ಬಾರಿ ಮಂತ್ರಪಠನೆ ನಡೆಸಿದ್ದಾನೆ. ಈಗಾಗಲೇ ಮದುವೆಯಾಗಿ ಒಂದು ಮಗುವಿನ ತಂದೆಯಾಗಿರುವ ಆರೋಪಿ ಕಳೆದ ಮೂರು ಜನ್ಮದಿಂದ ನಾವಿಬ್ಬರೂ ಗಂಡ-ಹೆಂಡತಿ, ಈ ಜನ್ಮದಲ್ಲಿ ಕಾರಣಾಂತರಗಳಿಂದ ದೂರ ಆಗಿದ್ದೇವೆ ಎಂದು ಪುಂಗಿ ಬಿಟ್ಟಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಮದುವೆಯಾದರೆ ಮಾತ್ರ ನಿನಗೆ ಮೋಕ್ಷ ಸಾಧ್ಯ
ನೀನು ನನ್ನನ್ನು ಮದುವೆಯಾದರೆ ಮಾತ್ರ ನಿನಗೆ ಮೋಕ್ಷ ಸಾಧ್ಯ ಎಂದು ಸಂತ್ರಸ್ಥ ಯುವತಿಯನ್ನು ನಂಬಿಸಿ, ಜನ್ಮ-ಜನ್ಮಗಳಿಂದಲೂ ನಾವಿಬ್ಬರು ದಂಪತಿಗಳು, ಹೀಗಾಗಿ ನಿನಗೆ ಇನ್ನೂ‌ ಮದುವೆ ಆಗುತ್ತಿಲ್ಲ ಎಂದು ನಂಬಿಸಿ, ನಾನು ನಿನ್ನ ಗಂಡ ಎಂದು ಹೇಳಿ ಲಕ್ಷ ಲಕ್ಷ ಹಣವನ್ನು ಯುವತಿಯಿಂದ ಕಬಳಿಸಿದ್ದಾನೆ. ಕಳೆದ ಜನ್ಮದಲ್ಲಿ ನೀನೊಬ್ಬಳು ದೊಡ್ಡ ಭರತ ನಾಟ್ಯ ಕಲಾವಿದೆ ಆಗಿದ್ದೆ, ಹಿಂದಿನ ಜನ್ಮದಲ್ಲಿ ನಿನ್ನ ಸಾವಿಗೆ ನಾನೇ ಕಾರಣನಾಗಿದ್ದೆ, ನೀನು ನನ್ನ ಸ್ವತ್ತು ಎಂದು ಹೇಳಿ ಹಣ ಲಪಟಾಯಿಸಿದ್ದಾನೆ ಎನ್ನಲಾಗಿದೆ.

ಮಂತ್ರ ಹಾಕಿ ನಿಮ್ಮ ಕೈ‌ಕಾಲು ಬೀಳಿಸುತ್ತೇನೆ
ವಿವಿಧ ಬ್ಯಾಂಕ್​ಗಳಲ್ಲಿ ಯುವತಿಯ ಹೆಸರಲ್ಲಿ 30 ಲಕ್ಷ ರೂ.ಗೂ ಹೆಚ್ಚು ಸಾಲವನ್ನು ಆರೋಪಿ ಪಡೆದುಕೊಂಡಿದ್ದಾನೆ. ತನ್ನ ಬಗ್ಗೆ ಏನಾದರೂ ದೂರು ನೀಡಿದರೆ, ಮಂತ್ರ ಹಾಕಿ ನಿಮ್ಮ ಕೈ‌ಕಾಲು ಬೀಳಿಸುತ್ತೇನೆ ಎಂದು ಹೆದರಿಸಿದ್ದಾನೆ. ಜತೆಗೆ ಯುವತಿಯ ವ್ಯಾನಿಟಿ ಬ್ಯಾಗ್​ನಲ್ಲಿ ನಿಂಬೆಹಣ್ಣು, ತಾಯತ, ಹೆಣ್ಣಿನ ಗೊಂಬೆ ಹಾಗೂ ಕರ್ಪೂರವನ್ನು ಇಟ್ಟು, ಯಾವಾಗಲೂ ಇವುಗಳನ್ನು ಜತೆಯಲ್ಲಿಯೇ ಇಟ್ಟುಕೊಂಡು ತೆರಳಬೇಕೆಂದು ಸೂಚಿಸಿದ್ದ ಎಂದು ಹೇಳಲಾಗಿದೆ. ಸ್ವಾಮೀಜಿಯ ಮಾತನ್ನು ಚಾಚುತಪ್ಪದೇ ಪಾಲಿಸುತ್ತಿರುವ ಒಬ್ಬಳೇ ಮಗಳ ಸ್ಥಿತಿಯನ್ನು ಕಂಡು ವೃದ್ದ ದಂಪತಿ ಕಣ್ಣೀರಿಡುತ್ತಿದ್ದಾರೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಯುವತಿ ಪಾಲಕರು ದೂರು ನೀಡಿದ್ದು, ಪೊಲೀಸರಿಂದ ಆರೋಪಿಯ ಬಂಧನವಾಗಿದ್ದು, ವಿಚಾರಣೆ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *