ಬಿಜೆಪಿ ತೇಜಸ್ಸು ಎದುರಾಳಿಗಿಲ್ಲ ವರ್ಚಸ್ಸು; ಮೈತ್ರಿ ಪಕ್ಷಗಳಿಗೆ ಸೂಕ್ತ ಅಭ್ಯರ್ಥಿಗಳಿಲ್ಲದೆ ಪರದಾಟ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಬಿಜೆಪಿ ಸಾಂಪ್ರದಾಯಿಕ ಭದ್ರ ನೆಲೆಯಂತಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ನೆನಪಿನಲ್ಲಿ ಚುನಾವಣೆಗೆ ಹೊರಳಿಕೊಳ್ಳುತ್ತಿದೆ. ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡ, ಅದಮ್ಯ ಚೇತನದ ಮೂಲಕ ಶಿಕ್ಷಣ-ಪರಿಸರ ಸೇವೆಯಲ್ಲಿ ನಿರತ ತೇಜಸ್ವಿನಿ ಅನಂತಕುಮಾರ್ ಈ ಬಾರಿ ಬಿಜೆಪಿ ಅಭ್ಯರ್ಥಿ ಎಂಬುದು ಸ್ಪಷ್ಟವಾಗಿದೆ. ಆರಂಭದಲ್ಲಿ ಅವರು ಕಣಕ್ಕಿಳಿಯುವುದಿಲ್ಲ ಎಂದೇ ಹೇಳಿದ್ದರು. ಪಕ್ಷದ ನಾಯಕರ ಒತ್ತಾಯಕ್ಕೆ ಮಣಿದು ಸ್ಪರ್ಧಿಸಲು ಒಪ್ಪಿಗೆ ಕೊಟ್ಟರಲ್ಲದೆ, ತಕ್ಷಣವೇ ಕಣಕ್ಕಿಳಿದು ಕ್ರಿಯಾಶೀಲರಾಗಿ ಓಡಾಡುತ್ತಿದ್ದಾರೆ.

ಇನ್ನು ಎದುರಾಳಿ ಮೈತ್ರಿಪಕ್ಷಗಳಿಗೆ ಸೂಕ್ತ ಅಭ್ಯರ್ಥಿ ಸಿಗದೆ ಪರದಾಟ ನಡೆಸಿವೆ. ಟಿಕೆಟ್ ಆಕಾಂಕ್ಷಿಯಾಗಿ ಯಾರೂ ಮುಂದೆ ಬಂದಿಲ್ಲ. ಹಾಗೂಹೀಗೂ ಆಸಕ್ತಿ ಹೊಂದಿದ್ದವರಿಗೆ ಸಾಮರ್ಥ್ಯ ಕೊರತೆ ಕಾಣಿಸಿತು. ಪಕ್ಷದ ಅಭ್ಯರ್ಥಿ ಆಗಬೇಕೆಂದು ಬಯಸಿದವರು ಗೋಣಾಡಿಸಿ ಹೆಜ್ಜೆ ಹಿಂದಿಟ್ಟರು. ಹೀಗಾಗಿ ಬಿಜೆಪಿ ಕಟ್ಟಿಹಾಕುವ ಆಸೆಯನ್ನು ಕಾಂಗ್ರೆಸ್ ಕೈಬಿಟ್ಟಿದೆ ಎಂಬ ಮಾತು ಆ ಪಕ್ಷದ ಕಚೇರಿಯಲ್ಲೇ ಕೇಳಿಬಂದಿದೆ.

ವಿಜಯದ ಹಾದಿ: ಅನಂತಕುಮಾರ್ ಸೋಲಿಸಲು ಈ ಹಿಂದಿನ ಮೂರು ಚುನಾವಣೆಗಳಲ್ಲೂ ಪ್ರಬಲ ಪ್ರಯತ್ನ ನಡೆದಿದ್ದ ಕಾರಣ, ಚುನಾವಣೆ ವೇಳೆ ರಾಷ್ಟ್ರಮಟ್ಟದಲ್ಲಿ ಈ ಕ್ಷೇತ್ರ ಸೂಜಿಗಲ್ಲಿನಂತೆ ಸೆಳೆದಿತ್ತು. ಆಧಾರ್ ಖ್ಯಾತಿಯ ನಂದನ್ ನೀಲೇಕಣಿ ಕಣಕ್ಕಿಳಿಸಿ ಅನಂತಕುಮಾರ್ ಓಟಕ್ಕೆ ತಡೆಹಾಕುವ ಕಾಂಗ್ರೆಸ್ ಪ್ರಯತ್ನ ವಿಫಲವಾಗಿತ್ತು, ಅದಕ್ಕೂ ಮುನ್ನ ಕೃಷ್ಣ ಭೈರೇಗೌಡರನ್ನು ಅಭ್ಯರ್ಥಿ ಮಾಡಿ ಪ್ರಬಲ ಪೈಪೋಟಿ ನೀಡಲಾಯಿತಾದರೂ ವಿಜಯದ ಗೆರೆಯನ್ನು ಅನಂತ್ ದಾಟಿಬಿಟ್ಟರು.

ಸಂಸದರ ನಿಧಿ ಬಳಕೆ

ಸಂಸದರ ನಿಧಿ ಬಳಕೆಯಲ್ಲಿ ಅನಂತಕುಮಾರ್ ಸದಾ ಮುಂದು. 14, 15ನೇ ಅವಧಿಯ ಲೋಕ ಸಭೆಯ ಅನುದಾನ ಬಳಕೆಯಲ್ಲಿ ಶೇ.85ಕ್ಕಿಂತ ಹೆಚ್ಚು ಮೊತ್ತವನ್ನು ಅದೇ ಅವಧಿಯಲ್ಲಿ ಖರ್ಚು ಮಾಡಿದ್ದರು. 16ನೇ ಲೋಕಸಭೆ ಅವಧಿಯಲ್ಲಿ ನಿಗದಿಯಾದ 25 ಕೋಟಿ ರೂ. ಪೈಕಿ, 12.5 ಕೋಟಿ ರೂ. ಬಿಡುಗಡೆಯಾಗಿದ್ದು, 16.12 ಕೋಟಿ ರೂ.ಗೆ ಶಿಫಾರಸು ನೀಡಿದ್ದರು.12.27 ಕೋಟಿಯಷ್ಟು ಮಂಜೂರಾಗಿದ್ದು, 7.67 ಕೋಟಿ ರೂ. ಖರ್ಚಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಣ ಬಳಕೆಯಾಗಿದ್ದು ಎದ್ದು ಕಾಣಿಸುತ್ತಿದೆ.

ಕ್ಷೇತ್ರದಲ್ಲಿ ಪಾರುಪತ್ಯ

ಈ ಕ್ಷೇತ್ರವನ್ನು ಅನಂತಕುಮಾರ್ ಸತತ ಆರು ಬಾರಿ ಪ್ರತಿನಿಧಿಸಿ ಅಚ್ಚೊತ್ತಿ ಹೋಗಿದ್ದಾರೆ. ಅವರ ಪತ್ನಿ ತೇಜಸ್ವಿನಿ ಕ್ಷೇತ್ರದ ಇಂಚಿಂಚೂ ಮಾಹಿತಿ ಹೊಂದಿರುವುದು ವಿಶೇಷ. ಅನಂತಕುಮಾರ್ ದೆಹಲಿ ರಾಜಕಾರಣದಲ್ಲಿ ಬಿಜಿ ಆಗಿದ್ದಾಗ ತೇಜಸ್ವಿನಿಯವರೇ ಕ್ಷೇತ್ರ ನಿರ್ವಹಿಸಿದ್ದಾರೆ. ಹೀಗಾಗಿ ಅವರಿಗೆ ಕ್ಷೇತ್ರದ ನಾಡಿಮಿಡಿತ ಕಷ್ಟವೇನಲ್ಲ. ಪಕ್ಷದ ಸಂಘಟನೆ ಬೇರು ಕೂಡ ಬಲವಾಗಿದೆ. ಹೀಗಾಗಿ ಬಿಜೆಪಿ ಹೆಚ್ಚು ತ್ರಾಸ ಪಡುವ ಅಗತ್ಯವಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಅನಂತ ಹೆಜ್ಜೆ

ಆರಂಭದಲ್ಲಿ ಕಾಂಗ್ರೆಸ್ ಕ್ಷೇತ್ರವಾಗಿದ್ದ ಬೆಂಗಳೂರು ದಕ್ಷಿಣ, ನಂತರ ಜನತಾ ಪರಿವಾರದ ಹಿಡಿತದಲ್ಲಿತ್ತು. 1996ರಲ್ಲಿ ಅನಂತ್ ಈ ಕ್ಷೇತ್ರ ಪ್ರವೇಶಿಸಿದ್ದಾಗ ಒಂದು ಪ್ರಯತ್ನವಷ್ಟೆ. ಜನ ಕೈ ಹಿಡಿದರು, ಬಳಿಕ ಕೈ ಬಿಡಲೇ ಇಲ್ಲ. ವಾಜಪೇಯಿ ನೇತೃತ್ವದ ಎನ್​ಡಿಎ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಅನಂತಕುಮಾರ್ ಕಾರ್ಯ ನಿರ್ವಹಿಸುವುದರ ಜತೆಗೆ ಪ್ರಭಾವಿಯಾಗಿ ಬೆಳೆದರು. ಮೋದಿ ಸರ್ಕಾರದಲ್ಲಿ ರಸಗೊಬ್ಬರ ಸಚಿವರಾಗಿ, ಸಂಸದೀಯ ಖಾತೆಯನ್ನೂ ನಿರ್ವಹಿಸಿ ಗಮನಸೆಳೆದರು.

ಎಲ್ಲಿ ಯಾರು ಮೇಲು?

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬಸವನಗುಡಿ, ಜಯನಗರ, ಬಿಟಿಎಂ ಲೇಔಟ್, ವಿಜಯನಗರ, ಗೋವಿಂದರಾಜನಗರ, ಚಿಕ್ಕಪೇಟೆ, ಪದ್ಮನಾಭನಗರ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಪೈಕಿ ಐದು ಕಮಲ, ಮೂರು ಕೈ ತೆಕ್ಕೆಯಲ್ಲಿವೆ. ಒಂದು ಕಾಲದಲ್ಲಿ ಜಯನಗರ ಕೂಡ ಬಿಜೆಪಿ ಪಾಲಿನ ಕಾಶಿ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ತೆಕ್ಕೆಗೆ ಜಾರಿದೆ.

ಮೈತ್ರಿ ಪಕ್ಷಗಳ ಪರದಾಟ

ಈ ಬಾರಿ ಕಣದಲ್ಲಿ ಅಷ್ಟೊಂದು ರೋಚಕತೆ ಕಾಣಿಸುತ್ತಿಲ್ಲ. ಜೆಡಿಎಸ್​ಗೇನು ಕ್ಷೇತ್ರದಲ್ಲಿ ಪ್ರಬಲ ಮತಬ್ಯಾಂಕ್ ಇಲ್ಲ. ಕಾಂಗ್ರೆಸ್​ನ ಸಾಂಪ್ರದಾಯಿಕ ಮತಗಳಿದ್ದರೂ ಅದು ಬಿಜೆಪಿ ಸೋಲಿಸುವಷ್ಟರ ಮಟ್ಟಿಗೆ ಪ್ರಬಲವಾಗಿಲ್ಲ. ಬಿಟಿಎಂ ಲೇಔಟ್ ಶಾಸಕ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಈ ಬಾರಿ ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್​ನ ಹಲವು ನಾಯಕರು ಅತ್ಯಾಸಕ್ತಿ ತೋರಿದ್ದರು. ಅನುಕಂಪದ ಅಲೆ ಎದುರಲ್ಲಿ ಈಜುವ ಸಾಹಸ ಕಷ್ಟವೆಂದರಿತ ರೆಡ್ಡಿ ಹಿಂದೆ ಸರಿದರು. ಅವರ ಪುತ್ರಿ ಸೌಮ್ಯಾ ರೆಡ್ಡಿ ಕೂಡ ಒಲ್ಲೆ ಎಂದರು. ಗೋವಿಂದರಾಜನಗರ ಮಾಜಿ ಶಾಸಕ ಪ್ರಿಯಕೃಷ್ಣ ಹೆಸರು ಮುನ್ನೆಲೆಗೆ ಬಂದಿತ್ತು. ಇವರೂ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಕೆ.ಗೋವಿಂದರಾಜು ಅಥವಾ ಜಿ. ಕೃಷ್ಣಪ್ಪ ಅವರ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.