ಚಳಿಗೆ ಮುದುಡಿದ ರಾಜಧಾನಿ

ಬೆಂಗಳೂರು: ಇಡೀ ರಾಜ್ಯವನ್ನು ನಡುಗಿಸುತ್ತಿರುವ ಚಳಿಗೆ ರಾಜಧಾನಿ ಬೆಂಗಳೂರು ಅಕ್ಷರಷಃ ಮುದುಡಿದ್ದು, ಕಳೆದ 5 ವರ್ಷದ ಅವಧಿಯಲ್ಲೇ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಮಂಗಳವಾರ ರಾತ್ರಿ ಕನಿಷ್ಠ ತಾಪಮಾನ 12.4 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿರುವುದು ಹೊಸ ದಾಖಲೆಯಾಗಿದೆ. ಇದು 2012ರ ನಂತರ ಬೆಂಗಳೂರು ಜನತೆ ಜನವರಿಯಲ್ಲಿ ಅನುಭವಿಸಿದ ಅತ್ಯಧಿಕ ಚಳಿ ಆಗಿದೆ. 2012 ಜ.16ರಂದು ನಗರದಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್​ಗೆ ಕುಸಿದಿತ್ತು. ಇದಾದ ಬಳಿಕ ಕನಿಷ್ಠ ತಾಪಮಾನ ಜನವರಿಯಲ್ಲಿ ಪ್ರಮಾಣದಲ್ಲಿ ಕುಸಿದಿರಲಿಲ್ಲ.

ಜನವರಿಯಲ್ಲಿ ಬೆಂಗಳೂರಿನ ಕನಿಷ್ಠ ತಾಪಮಾನ ಸಾಮಾನ್ಯವಾಗಿ 15.8 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಕಳೆದ ಮೂರ್ನಾಲ್ಕು ದಿನದಿಂದ ದಿನೇ ದಿನೆ ಕನಿಷ್ಠ ತಾಪಮಾನ ಕುಸಿಯುತ್ತಿರುವುದರಿಂದ ಜನತೆ ಚಳಿಗೆ ತತ್ತರಿಸಿದ್ದಾರೆ.

ಶೀತಗಾಳಿ ಪ್ರಭಾವ: ಉತ್ತರ ಕರ್ನಾಟಕ ಜಿಲ್ಲೆಗಳು ಶೀತಗಾಳಿಗೆ ತತ್ತರಿಸಿದ್ದು, ಬೀದರ್​ನಲ್ಲಿ ಕನಿಷ್ಠ ತಾಪಮಾನ 7.2, ಧಾರವಾಡದಲ್ಲಿ 9, ವಿಜಯಪುರದಲ್ಲಿ 9.5, ಹಾವೇರಿಯಲ್ಲಿ 9.8 ಡಿಗ್ರಿ ಸೆಲ್ಸಿಯಸ್​ಗೆ

ಕುಸಿದಿದೆ. ಉತ್ತರದಿಂದ ಶೀತಗಾಳಿ ದಕ್ಷಿಣದೆಡೆಗೆ ಬೀಸುತ್ತಿದ್ದು, ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಹಾಸನ, ಮಂಡ್ಯ, ಮಡಿಕೇರಿ, ಮೈಸೂರು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10-11 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಮಲೆನಾಡು ಶಿವಮೊಗ್ಗದಲ್ಲಿ ಕನಿಷ್ಠ ತಾಪಮಾನ ಒಂದಂಕಿಗೆ ಕುಸಿದಿದ್ದು, ಮಂಗಳವಾರ ರಾತ್ರಿ 9.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.