ನನ್ನ ಪತಿ ರಾಜನಾಗೇ ಬಂದು ರಾಜನಾಗೇ ಹೋದರು: ಸುಮಲತಾ ಅಂಬರೀಷ್​

<<ಅಂತಿಮ ಕ್ರಿಯೆ ಸುಗಮವಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಸುಮಲತಾ ಅಂಬರೀಷ್​>>

ಬೆಂಗಳೂರು: ನನ್ನ ಪತಿ ಅಂಬರೀಷ್​ ಅವರು ಒಳ್ಳೆಯ ನಟ, ರಾಜಕೀಯ ನಾಯಕ, ಸಮಾಜ ಸೇವಕ, ಒಳ್ಳೆ ಕ್ರೀಡಾಪಟು. ಇದೆಲ್ಲಕ್ಕಿಂತ ಅವರೊಬ್ಬ ಅದ್ಭುತ ವ್ಯಕ್ತಿ. ಅವರು ರಾಜನಾಗೇ ಬಂದು, ರಾಜನಾಗೇ ಹೋದರು ಎಂದು ಪತ್ನಿ ಸುಮಲತಾ ಅವರು ತಿಳಿಸಿದರು.

ಕನ್ನಡ ಚಿತ್ರರಂಗದಿಂದ ಶುಕ್ರವಾರ ಆಯೋಜಿಸಲಾಗಿದ್ದ ದಿವಂಗತ ನಟ ಅಂಬರೀಷ್​ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ ಅಂಬಿ ಅಂತ್ಯಕ್ರಿಯೆ ಸುಗಮವಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

27 ವರ್ಷಗಳಲ್ಲಿ ನಾನೇನು ಅವರನ್ನು ನೋಡಿದ್ದೀನಿ ಅಷ್ಟನ್ನು ಮಾತ್ರ ನನಗೆ ಹೇಳೋಕೆ ಸಾಧ್ಯ. ನನಗಿಂತ ಅವರ ಜತೆ ಹೆಚ್ಚು ಒಡನಾಟ ಇರುವವರು ಹೆಚ್ಚು ಮಂದಿ ಇದ್ದೀರಾ. ಭಗವದ್ಗೀತೆಯಲ್ಲಿ ಬರೆದಿದ್ದಾರೆ. ನೀನು ಇಲ್ಲಿ ಏನು ಸಂಪಾದಿಸಿದ್ದೀಯ ಅದು ಯಾವುದು ನಿನ್ನೊಂದಿಗೆ ಬರುವುದಿಲ್ಲ ಎಂದು ಭಗವಂತ ಹೇಳಿದಾಗ, ನೀನು ನಮಗೆ ಒಂದೇ ಒಂದು ಹೃದಯ ನೀಡಿದ್ದೀರಾ, ನಾವು ಮೃತಪಟ್ಟಾಗ ಸಾವಿರಾರು ಹೃದಯಗಳನ್ನ ತರುತ್ತೇವೆ ಎಂದು ಒಬ್ಬ ಹೇಳುತ್ತಾರೆ. ಅದರಂತೆ ನನ್ನ ಪತಿಯೂ ಕೂಡ ಅನೇಕರ ಹೃದಯಲ್ಲಿ ಸ್ಥಾನ ಪಡೆದಿದ್ದರು ಎಂದು ಹೇಳಿದರು.

ಅವರನ್ನು ನನ್ನ ಗಂಡ, ನನ್ನ ಸ್ನೇಹಿತ ಎಂದು ಹೇಳಲ್ಲ. ಯಾಕೆಂದರೆ ಅವರು ನನ್ನ ಅಣ್ಣನಾಗೂ, ಗಂಡನಾಗೂ ಹಾಗೂ ತಂದೆಯಾಗೂ ಇದ್ದರು. ನಮಗೆ ನಿಮ್ಮ ಹೃದಯದಲ್ಲಿ ಸ್ಥಾನ ಕೊಟ್ಟ ನಿಮಗೆ ಧನ್ಯವಾದ ಎಂದು ಮಂಡ್ಯದ ಜನತೆಗೆ ಧನ್ಯವಾದ ತಿಳಿಸಿದರು.

ಈ ಒಂದು ಅಂತಿಮ ಪಯಣದಲ್ಲಿ ಅವರನ್ನ ಅರಸನಾಗೇ ಕಳುಹಿಸಿದ್ದೀರ ಎಂದು ಸುಮಲತಾ ಅವರು ಮೊದಲಿಗೆ ಸಿಎಂ ಕುಮಾರಸ್ವಾಮಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಮಯದಲ್ಲಿ ಸಹಕರಿಸಿದ ಅಭಿಮಾನಿಗಳಿಗೆ, ಪೊಲೀಸರಿಗೆ, ಚಿತ್ರಂಗದವರಿಗೆ, ಸಚಿವ ಸಂಪುಟದ ಸದಸ್ಯರಿಗೆ ಹಾಗೂ ಮಾಧ್ಯಮದವರಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದರು. (ದಿಗ್ವಿಜಯ ನ್ಯೂಸ್​)