ಅಂಬರೀಷ್ ವೈಕುಂಠ ಸಮಾರಾಧನೆ

ಬೆಂಗಳೂರು: ರೆಬೆಲ್​ಸ್ಟಾರ್ ಅಂಬರೀಷ್ 11ನೇ ದಿನದ ಪುಣ್ಯತಿಥಿ ಪ್ರಯುಕ್ತ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಹಾಗೂ ಕುಟುಂಬ ಸದಸ್ಯರು ಮಂಗಳವಾರ ಬೆಳಗ್ಗೆ ಕಂಠೀರವ ಸ್ಟುಡಿಯೋಗೆ ತೆರಳಿ ಅಭಿಮಾನಿಗಳು, ಚಿತ್ರ

ರಂಗದ ಗಣ್ಯರ ಸಮ್ಮುಖ ದಲ್ಲಿ ಸಮಾಧಿಗೆ ಪೂಜೆ ಸಲ್ಲಿಸಿ, ವಿಧಿ-ವಿಧಾನ ನೆರವೇರಿಸಿದರು. ಕುಟುಂಬದವರಿಗೆ ನಿರ್ವಪಕ ರಾಕ್​ಲೈನ್ ವೆಂಕಟೇಶ್, ನಟ ದರ್ಶನ್ ಸಾಥ್ ನೀಡಿದರು. ಅಂಬರೀಷ್ ಅಭಿಮಾನಿಗಳು ಸ್ಟುಡಿಯೋದಲ್ಲಿ ಬಿರಿಯಾನಿ ವಿತರಿಸುವ ಮೂಲಕ ಪುಣ್ಯತಿಥಿ ಆಚರಿಸಿದರು. ಇದಕ್ಕೂ ಮುನ್ನ ಅರಮನೆ ರಸ್ತೆಯಲ್ಲಿನ ತಮ್ಮ ಮನೆಯಲ್ಲೂ ಕುಟುಂಬ ದವರು ಪೂಜೆ ನೆರವೇರಿಸಿದರು. ಅಂಬರೀಷ್ ಹಾಕುತ್ತಿದ್ದ ಬಟ್ಟೆ, ಆಭರಣ, ವಾಚುಗಳನ್ನು ಪೂಜೆಗಿಡಲಾಗಿತ್ತು. ಅಲ್ಲದೆ, ಅಂಬರೀಷ್ ಇಷ್ಟಪಡುತ್ತಿದ್ದ ಆಹಾರ ಎಡೆಗೆ ಇಟ್ಟಿದ್ದರು.

ಅಭಿಮಾನಿಗಳಿಗೂ ಆಹ್ವಾನ

ಅರಮನೆ ಮೈದಾನದಲ್ಲಿ ಬುಧವಾರ ವೈಕುಂಠ ಸಮಾರಾಧನೆ ನೆರವೇರಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಅಭಿಮಾನಿಗಳಿಗೆ ಆಹ್ವಾನ ನೀಡಲಾಗಿದ್ದು, ಅವರಿಗಾಗಿ ವಿಶೇಷ ಊಟದ ವ್ಯವಸ್ಥೆ ಇರಲಿದೆ.

ಭಾವನಾತ್ಮಕ ಪುಣ್ಯತಿಥಿ

ಮಂಡ್ಯ ಜಿಲ್ಲೆಯ ವಿವಿಧೆಡೆ ಅಭಿಮಾನಿಗಳು ಮಂಗಳವಾರ ಭಾವನಾತ್ಮಕವಾಗಿ ಪುಣ್ಯತಿಥಿ ನೆರವೇರಿಸಿ 11ನೇ ದಿನದ ಹಾಲು-ತುಪ್ಪ ಕಾರ್ಯಕ್ರಮ ನೆರವೇರಿಸಿದರು. ಬಲ್ಲೇನಹಳ್ಳಿಯಲ್ಲಿ ಅಭಿಮಾನಿಗಳು ಅಂಬಿಗೆ ಪ್ರಿಯವಾದ ನಾಟಿಕೋಳಿ ಊಟ, ಮದ್ಯ, ಮರದ ಕುದುರೆ, ಸಿಗರೇಟು, ಬೆಲ್ಲದ ಮಿಠಾಯಿ, ಇಸ್ಪೀಟ್ ಕಾರ್ಡ್ಸ್, ಇಟ್ಟು ನಮನ ಸಲ್ಲಿಸಿದರು. ಅಭಿಮಾನಿಗಳಾದ ಮಹದೇವ್, ರವಿ, ಕಿಟ್ಟಿ ಕೇಶಮುಂಡನ ಮಾಡಿಸಿಕೊಂಡು ವಿಧಿ-ವಿಧಾನ ನಡೆಸಿದರು. ಬಳ್ಳಾರಿಯ ಸಿರಗುಪ್ಪ ತಾಲೂಕಿನ ಬಗ್ಗೂರಿನ ಅಂಬರೀಷ್ ಎಂಬ ಹೆಸರಿನ ಅಭಿಮಾನಿಯೊಬ್ಬರು ಕುಟುಂಬ ಸಮೇತ ಕನಕದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಹನ್ನೊಂದು ತೆಂಗಿನಕಾಯಿ ಸಮರ್ಪಿಸಿ, ಪೂಜೆ ಸಲ್ಲಿಸಿ, ಭಕ್ತರಿಗೆ ಅನ್ನಸಂತರ್ಪಣೆ ಮಾಡಿಸಿದರು. ಏಳು ತಿಂಗಳಿಗೆ ಜನಿಸಿ ಅಸ್ವಸ್ಥಗೊಂಡಿದ್ದ ತಮ್ಮ ಮಗುವನ್ನು ಬೆಂಗಳೂರಿನಲ್ಲಿ ಅಂಬರೀಷ್​ಗೆ ತೋರಿಸಿದ್ದಾಗ ಕರ್ಣ ಎಂದು ಹೆಸರಿಟ್ಟು ಆಶೀರ್ವದಿಸಿದ್ದರು. ಹೀಗಾಗಿ ಮಗು ಬದುಕಿದೆ ಎಂದು ಇವರು ಈ ರೀತಿ ಅಭಿಮಾನ ತೋರಿದ್ದಾರೆ.