ಗಟ್ಟಿಗ ಡಿಕೆಸು ವಿರುದ್ಧ ಅಶ್ವತ್ಥಾಸ್ತ್ರ

ರಾಜಧಾನಿ ಬೆಂಗಳೂರಿನ ಮೂರೂ ಕ್ಷೇತ್ರಗಳಲ್ಲಿ ಸಂಸದರನ್ನು ಹೊಂದಿರುವ ಬಿಜೆಪಿ, ಪಕ್ಕದ ಗ್ರಾಮಾಂತರ ಕ್ಷೇತ್ರದಲ್ಲಿ ಖಾತೆ ತೆರೆಯಲು ಹೆಣಗಾಡುತ್ತಿದೆ. ಈ ಬಾರಿಯ ಗೆಲ್ಲುವ ಅವಕಾಶವನ್ನೂ ಕೈಚೆಲ್ಲಿತೇ ಎಂಬ ಅನುಮಾನಗಳ ಜತೆಜತೆಗೇ ಜೆಡಿಎಸ್ ಕಾರ್ಯಕರ್ತರು ಹಾಲಿ ಸಂಸದ ಡಿ.ಕೆ.ಸುರೇಶ್​ಗೆ ನೀಡುವ ‘ಒಳೇಟಿನ’ ಮೇಲೆ ನಿರೀಕ್ಷೆ ಇಟ್ಟಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಮೈತ್ರಿಕೂಟದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಬಿಜೆಪಿಯಿಂದ ಮಾಜಿ ಎಂಎಲ್​ಸಿ ಅಶ್ವತ್ಥನಾರಾಯಣ ಗೌಡ ಕಣದಲ್ಲಿದ್ದಾರೆ.

ಸಾಮಾನ್ಯವಾಗಿ ಟಿ.ವಿ. ಪರದೆಗಳಲ್ಲಿ ಕಾಣಿಸಿಕೊಂಡು ಗುಟುರು ಹಾಕುವ ಡಿ.ಕೆ. ಶಿವಕುಮಾರ್​ಗಿಂತಲೂ ಚುನಾವಣಾ ರಾಜಕಾರಣದಲ್ಲಿ, ಚುನಾವಣೆ ನಡೆಸುವ ವಿಚಾರದಲ್ಲಿ ಡಿ.ಕೆ.ಸುರೇಶ್ ಚಾಣಾಕ್ಷ ಎಂಬುದು ಎದುರಾಳಿ ಪಕ್ಷದವರೂ ಒಪು್ಪವ ವಿಚಾರ. ಅಸಲಿಗೆ ಶಿವಕುಮಾರ್ ರಾಜಕಾರಣದ ಬೆನ್ನಲುಬು ಎಂದೇ ಹೇಳಲಾಗುವ ಸುರೇಶ್ ಪುನರಾಯ್ಕೆ ಬಯಸಿದ್ದಾರೆ. ಸಾಂಪ್ರದಾಯಿಕವಾಗಿ ಜಾತಿ, ಸಮುದಾಯದ ಮತಗಳ ಜತೆಗೆ ಹೊಸ ರಾಜಕೀಯ ವ್ಯವಸ್ಥೆಯಲ್ಲಿ ಪರಿಗಣನೆಯಾಗುವ ಸಂಸದರ ನಿಧಿ ಬಳಕೆ, ಸಂಸದರ ಆದರ್ಶ ಗ್ರಾಮ, ಕೇಂದ್ರದಿಂದ ಯೋಜನೆಗಳಿಗೆ ಹಣ ತರುವಿಕೆಗಳಲ್ಲೂ ನನ್ನ ಸಾಧನೆ ಇದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಸುರೇಶ್ ಮುಂದಾಗಿದ್ದಾರೆ. ಸಹೋದರ ಶಿವಕುಮಾರ್, ಹಿರಿಯ ಕಾಂಗ್ರೆಸಿಗ ರಾಮಲಿಂಗಾರೆಡ್ಡಿ, ಶಾಸಕಿ ಅನಿತಾ ಕುಮಾರಸ್ವಾಮಿ ಸೇರಿ ಅನೇಕರು ಪ್ರಚಾರಕ್ಕೆ ತೆರಳಿ ಸಹಕರಿಸುತ್ತಿದ್ದಾರೆ.

ಬಿಜೆಪಿ ಎಡವಟ್ಟು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಗರ ಪ್ರದೇಶವೇ ಹೆಚ್ಚಾಗಿರುವ ಆನೇಕಲ್, ಬೆಂಗಳೂರು ದಕ್ಷಿಣ ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಿವೆ. ಈ ಮೂರೂ ಕ್ಷೇತ್ರದಲ್ಲಿ ರಾಷ್ಟ್ರೀಯ ವಿಚಾರ ಚರ್ಚೆ ಹಾಗೂ ಮೋದಿ ಅಲೆ ಹಿನ್ನೆಲೆಯಲ್ಲಿ ಹೆಚ್ಚಿನ ಅನುಕೂಲ ಬಿಜೆಪಿಗೆ ಆಗುತ್ತದೆ. ಇದೇ ಲೆಕ್ಕಾಚಾರದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಮಾಜಿ ಎಂಎಲ್​ಸಿ ಅಶ್ವತ್ಥನಾರಾಯಣ ಗೌಡ 5-6 ತಿಂಗಳಿಂದಲೇ ಪ್ರಚಾರ ಕಾರ್ಯ ಆರಂಭಿಸಿದ್ದರು. ಆದರೆ, ಪಕ್ಷದ ಆಂತರಿಕ ರಾಜಕಾರಣಕ್ಕೆ ಬೇಸತ್ತ ಅಶ್ವತ್ಥನಾರಾಯಣ ಕಣದಿಂದಲೇ ಹಿಂದೆ ಸರಿದು ಬೆಂ.ಉತ್ತರ ಕ್ಷೇತ್ರದಲ್ಲಿ ಸದಾನಂದಗೌಡ ಪರ ಪ್ರಚಾರದಲ್ಲಿ ತೊಡಗಿದ್ದರು. ಇತ್ತ ಸುರೇಶ್​ಗೆ ಪ್ರಬಲ ಅಭ್ಯರ್ಥಿಯಾಗಬಲ್ಲ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರನ್ನು ಕಣಕ್ಕಿಳಿಸಲು ವರಿಷ್ಠರು ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ರಾಜ್ಯ ರಾಜಕಾರಣದಲ್ಲೇ ತಮಗೆ ಭವಿಷ್ಯವಿದೆ ಎಂದು ಬಲವಾಗಿ ನಂಬಿರುವ ಯೋಗೇಶ್ವರ್, ‘ಗೆದ್ದುಬಿಟ್ಟರೆ’ ರಾಜ್ಯದಿಂದ ದೂರ ಹೋಗಬೇಕಾಗುತ್ತದೆ ಎಂಬ ಲೆಕ್ಕಾಚಾರ ಹೊಂದಿದ್ದಾರೆ. ಬೇಕಿದ್ದರೆ ಪುತ್ರಿಯನ್ನು ಕಣಕ್ಕಿಳಿಸಿ ಎಂದಿದ್ದ ಯೋಗೇಶ್ವರ್ ಪ್ರಸ್ತಾಪಕ್ಕೆ ವರಿಷ್ಠರು ಸೊಪು್ಪಹಾಕಲಿಲ್ಲ. ಇನ್ನು ಸಮಯ ಮೀರುತ್ತಿದೆ ಎಂದರಿತು ಅಶ್ವತ್ಥನಾರಾಯಣಗೇ ಮಣೆ ಹಾಕಿದ್ದಾರೆ. ಯೋಗೇಶ್ವರ್ ಕಣಕ್ಕಿಳಿದಿದ್ದರೆ ಅದರ ಮಾತೇ ಬೇರೆ ಇತ್ತು ಎಂಬುದು ಬಿಜೆಪಿ ನಾಯಕರ ಅಭಿಪ್ರಾಯ.

ಅಲ್ಲಿದ್ದವರೆಲ್ಲ ಇಲ್ಲಿದ್ದಾರೆ

2004ರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದು ಕಾಂಗ್ರೆಸ್ ಅಭ್ಯರ್ಥಿ ತೇಜಸ್ವಿನಿ ಗೌಡ. ಇದೀಗ ಅವರು ರಾಜ್ಯ ಬಿಜೆಪಿ ವಕ್ತಾರೆ ಹಾಗೂ ವಿಧಾನಪರಿಷತ್ ಸದಸ್ಯೆ. 2008ರಲ್ಲಿ ಕಾಂಗ್ರೆಸ್ ತ್ಯಜಿಸಿ 2009ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್ 2013ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಜಯಿಸಿದ್ದರು. ನಂತರ 2016ರಲ್ಲಿ ಕಾಂಗ್ರೆಸ್​ಗೆ ಮರಳಿದ್ದರಾದರೂ 2018ರ ವಿಧಾನಸಭಾ ಚುನಾವಣೆಗೆ ಮುನ್ನ ಮತ್ತೆ ಬಿಜೆಪಿಗೆ ಆಗಮಿಸಿದ್ದಾರೆ.

ಕ್ಷೇತ್ರಾದ್ಯಂತ ಎಲ್ಲಿಯೂ ಮೋದಿ ಅಲೆ ಕಾಣುತ್ತಿಲ್ಲ. ಐದು ವರ್ಷಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯದ ಆಧಾರದಲ್ಲಿ ಮತ ಕೇಳುತ್ತಿದ್ದೇನೆ. ಜೆಡಿಎಸ್ ಕಾರ್ಯಕರ್ತರೂ ಕೈ ಜೋಡಿಸುತ್ತಿದ್ದಾರೆ, ಮತ ನೀಡಲಿದ್ದಾರೆ. ಗೆದ್ದೇ ಗೆಲ್ಲುವ ವಿಶ್ವಾಸವಿದೆ.

| ಡಿ.ಕೆ. ಸುರೇಶ್ ಕಾಂಗ್ರೆಸ್ ಅಭ್ಯರ್ಥಿ

ಹದಿನೈದೇ ಅಭ್ಯರ್ಥಿಗಳು

ಕನಕಪುರ ಲೋಕಸಭಾ ಕ್ಷೇತ್ರ ಮರುವಿಂಗಡಣೆ ನಂತರ 2009ರಿಂದಲೂ ಬೆಂಗಳೂರು ಗ್ರಾಮಾಂತರ ಕ್ಷೇತ್ರವಾಗಿದೆ. 2009, 2014, ಇದೀಗ 2019ರ ಚುನಾವಣೆಯಲ್ಲೂ ಸಮಾನವಾಗಿ ಹದಿನೈದೇ ಅಭ್ಯರ್ಥಿಗಳು ಕಣದಲ್ಲಿರುವುದು ಕಾಕತಾಳೀಯವಾದರೂ ಅಚ್ಚರಿಯ ವಿಚಾರ.

ಕೈ ಕೊಡುವರೇ ದಳಪತಿಗಳು?

2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರಾಜುಗೌಡ ವಿರುದ್ಧ 2.31 ಲಕ್ಷ ಅಂತರದಲ್ಲಿ ಸುರೇಶ್ ಗೆದ್ದಿದ್ದರು. ಇದೇ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ 3.17 ಲಕ್ಷ ಮತ ಪಡೆದಿದ್ದರು. ಇದೀಗ ಮೈತ್ರಿ ಅಭ್ಯರ್ಥಿಯಾಗಿರುವ ಕಾರಣ ಜೆಡಿಎಸ್-ಕಾಂಗ್ರೆಸ್ ಮತ ಒಟ್ಟಾಗಿ 9.7 ಲಕ್ಷವಾಗುತ್ತದೆ, ಬಿಜೆಪಿ ನಡುವಿನ ಅಂತರ 5.49 ಲಕ್ಷವಾಗುತ್ತದೆ ಎಂಬುದು ಕೇವಲ ಗಣಿತದ ಲೆಕ್ಕಾಚಾರ. ಸ್ಥಳೀಯವಾಗಿ ಕಾಂಗ್ರೆಸ್ ಜತೆಗಿನ ವೈಮನಸ್ಯ ಮರೆತು ಜೆಡಿಎಸ್ ಕಾರ್ಯಕರ್ತರು ಸುರೇಶ್​ಗೆ ಮತ ಹಾಕಿಸುತ್ತಾರೆಯೇ ಎಂಬುದು ಯಕ್ಷಪ್ರಶ್ನೆ. ನಾಯಕರು ಒಂದಾದರೂ ಸ್ಥಳೀಯವಾಗಿ ಬಡಿದಾಡಿಕೊಂಡಿರುವ ಕಾರ್ಯಕರ್ತರು ಇದನ್ನು ಒಪು್ಪತ್ತಿಲ್ಲ. ಕಾಂಗ್ರೆಸ್ ಮೇಲಿನ ಸಿಟ್ಟಿಗೆ ಜೆಡಿಎಸ್ ಸ್ಥಳೀಯ ನಾಯಕರು ಚುನಾವಣೆಯಿಂದ ದೂರ ಉಳಿಯುವ ಅಥವಾ ಬಿಜೆಪಿ ಪರ ಮತ ಹಾಕಿಸುತ್ತಾರೆ ಎಂಬ ನಿರೀಕ್ಷೆ ಬಿಜೆಪಿಯದ್ದು. ಇಂಥ ಅಸಮಾಧಾನಿತ ದಳ ಕಾರ್ಯಕರ್ತರನ್ನೇ ಬಿಜೆಪಿ ಸಂರ್ಪಸಿ ಮನವೊಲಿಸುತ್ತಿದೆ. ಜೆಡಿಎಸ್​ನವರು ಎಷ್ಟರಮಟ್ಟಿಗೆ ‘ಒಳೇಟು’ ನೀಡುತ್ತಾರೆ ಎಂಬುದರ ಆಧಾರದಲ್ಲಿ ಸುರೇಶ್-ಅಶ್ವತ್ಥನಾರಾಯಣ ಫಲಿತಾಂಶ ನಿರ್ಧರಿತವಾಗಿರುತ್ತದೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕನಿಷ್ಠ 6 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅಲೆ ಗ್ರಾಮೀಣ ಭಾಗದ ಜನಸಾಮಾನ್ಯರನ್ನೂ ತಲುಪಿರುವುದು, ಡಿಕೆ ಸಹೋದರರ ದಬ್ಬಾಳಿಕೆ ಕಾರಣಕ್ಕೆ ಕಾಂಗ್ರೆಸ್ ಪರ ಜೆಡಿಎಸ್ ಕಾರ್ಯಕರ್ತರು ಕೆಲಸ ಮಾಡದೆ ಇರುವುದು ಬಿಜೆಪಿ ಗೆಲುವಿಗೆ ಸಹಕಾರಿ ಆಗಲಿದೆ.

| ಅಶ್ವತ್ಥನಾರಾಯಣ ಬಿಜೆಪಿ ಅಭ್ಯರ್ಥಿ

ಸಾಧನೆಯೇ ಸುರೇಶ್ ಸಾಧನ

ಡಿ.ಕೆ.ಸುರೇಶ್ ಕಳೆದ ಐದು ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಬಿಂಬಿಸುತ್ತಿದ್ದಾರೆ. ವಸಂತಪುರದಲ್ಲಿ ಷಟಲ್ ಸ್ಟೇಡಿಯಂ ನಿರ್ವಣ, 750 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿ, ಕುಡಿಯುವ ನೀರು ಸರಬರಾಜಿಗೆ ಜಿಎಲ್​ಆರ್ ಘಟಕ, ಕೆರೆಗಳ ಅಭಿವೃದ್ಧಿಗೆ 80 ಕೋಟಿ ರೂ., ರಸ್ತೆ ಮತ್ತು ಚರಂಡಿ ಕಾಮಗಾರಿಗೆ 203 ಕೋಟಿ ರೂ., 25 ಕೋಟಿ ರೂ. ವೆಚ್ಚದಲ್ಲಿ 300 ಶುದ್ಧ ಕುಡಿಯುವ ನೀರಿನ ಘಟಕ, ಸಂಸದರ ಆದರ್ಶ ಗ್ರಾಮ, ಹಾಲಿನ ಪೌಡರ್ ಘಟಕ ಆರಂಭ, ಕನಕಪುರದಲ್ಲಿ ಡೈರಿ ನಿರ್ವಣ, ನೈಸ್ ಜಂಕ್ಷನ್​ನಿಂದ ಮಾಗಡಿವರೆಗೆ 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಇನ್ನಿತರ ವಿಚಾರಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದಾರೆ.

ಐಟಿ ದಾಳಿ ಪ್ರಕರಣವೇ ಬಿಜೆಪಿ ಬಾಣ

ಡಿಕೆ ಸಹೋದರರು ದಬ್ಬಾಳಿಕೆ ರಾಜಕಾರಣ ಮಾಡುತ್ತಿದ್ದಾರೆಂಬುದನ್ನು ಬಿಜೆಪಿ ಅಭ್ಯರ್ಥಿ ಅಶ್ವತ್ಥನಾರಾಯಣ ಪ್ರಸ್ತಾಪಿಸುತ್ತಿದ್ದಾರೆ. ಭ್ರಷ್ಟಾಚಾರ, ಅಕ್ರಮ ಸಂಪತ್ತು, ಡಿಕೆಶಿ ಮೇಲಿನ ಐಟಿ ದಾಳಿ ಪ್ರಕರಣಗಳನ್ನು ಉಲ್ಲೇಖಿಸುತ್ತಿದ್ದಾರೆ. ದೇಶದ ಎಲ್ಲ ಬಿಜೆಪಿ ಅಭ್ಯರ್ಥಿಗಳಂತೆ ಮೋದಿ ಸರ್ಕಾರದ ಸಾಧನೆಗಳನ್ನು ತಿಳಿಸುವಲ್ಲಿ ಹಿಂದೆ ಬೀಳುತ್ತಿಲ್ಲ. ಜಾಲತಾಣ ವಿಸ್ತಾರದ ಕಾರಣಕ್ಕೆ ನಗರ, ಗ್ರಾಮೀಣ ಗಡಿ ದಾಟಿ ವ್ಯಾಪಿಸಿರುವ ಮೋದಿ ಅಲೆ ಕೈ ಹಿಡಿಯಬಹುದು ಎಂಬ ನಿರೀಕ್ಷೆ ಬಿಜೆಪಿಯದ್ದು.