ಪ್ರತಿಷ್ಠಿತ ಹೋಟೆಲ್​ನಲ್ಲಿ ಕೋಟ್ಯಂತರ ರೂ. ಪತ್ತೆ; ಪ್ರಭಾವಿ ಸಚಿವರಿಗೆ ಸೇರಿದ ಹಣದ ಜಾಡು ಹಿಡಿದ ಐಟಿ ಅಧಿಕಾರಿಗಳು

ಬೆಂಗಳೂರು: ಶುಕ್ರವಾರ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ನಗರದ ಖಾಸಗಿ ಹೋಟೆಲ್​ ಒಂದರ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂ. ವಶಕ್ಕೆ ಪಡೆದಿದ್ದಾರೆ.

ಆನಂದರಾವ್ ಸರ್ಕಲ್ ಬಳಿ ಇರುವ ರಾಜ್ ಮಹಲ್​ ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಕೋಟ್ಯಂತರ ರೂಪಾಯಿ ಹಣ ಪತ್ತೆಯಾಗಿದೆ. ಪತ್ತೆಯಾದ ಹಣದ ಬಗ್ಗೆ ಐಟಿ ಅಧಿಕಾರಿಗಳು ದಾಖಲಾತಿ ಕೇಳುತ್ತಿದ್ದು, ಹಣ ರಾಜಕೀಯ ವ್ಯಕ್ತಿಯೊಬ್ಬರಿಗೆ ಸೇರಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಬುಕ್​ ಮಾಡಿದ್ದ ಎರಡು ರೂಮ್​ಗಳಲ್ಲಿ ಹಣ ಪತ್ತೆಯಾಗಿದೆ. ಹಣವು ಸಚಿವರೊಬ್ಬರಿಗೆ ಸೇರಿದ್ದು ಎನ್ನಲಾಗುತ್ತಿದ್ದು, ಸದ್ಯ ಹೋಟೆಲ್​ನಿಂದ ಇಂಜಿನಿಯರ್ ಪರಾರಿಯಾಗಿದ್ದಾನೆ. ಆತನ ಕಾರು ಚಾಲಕ ಐಟಿ ಅಧಿಕಾರಿಗಳ ಬಲೆಗೆ ಸಿಲುಕಿದ್ದು, ವಿಚಾರಣೆ ಎದುರಿಸುತ್ತಿದ್ದಾನೆ. (ದಿಗ್ವಿಜಯ ನ್ಯೂಸ್​)