ಕಾಲಿಗೆ ಗುಂಡಿಕ್ಕಿ ರೌಡಿ ಬಂಧನ

ಬೆಂಗಳೂರು: ಆಟೋ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ರೌಡಿಯನ್ನು ನಂದಿನಿ ಲೇಔಟ್ ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ.

ಮಹಾಲಕ್ಷ್ಮೀ ಲೇಔಟ್ ಠಾಣೆಯ ರೌಡಿಪಟ್ಟಿಯಲ್ಲಿರುವ ಭರತ್ (25) ಬಂಧಿತ. ಸೋಮವಾರ ತಡರಾತ್ರಿ 12.40ರಲ್ಲಿ ಜಾಲಹಳ್ಳಿಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.

ಬೈಕ್​ನಲ್ಲಿ ಹೋಗುತ್ತಿದ್ದ ಭರತ್​ನನ್ನು ಜಾಲಹಳ್ಳಿಯ ಪ್ರೆಸ್ಟೀಜ್ ಅಪಾರ್ಟ್​ವೆುಂಟ್ ತಡೆದಿದ್ದರು. ಈ ವೇಳೆ ಭರತ್​ನನ್ನು ಹಿಡಿಯಲು ಪೇದೆ ಉಮೇಶ್ ಮುಂದಾದಾಗ ಡ್ರಾ್ಯಗರ್​ನಿಂದ ಹಲ್ಲೆ ಮಾಡಿದ್ದಾನೆ. ಕೂಡಲೇ ಎಸ್​ಐ ಲಕ್ಷ್ಮಣ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಬಳಿಕ ಆತ ಲಕ್ಷಣ್ ಮೇಲೂ ಹಲ್ಲೆ ನಡೆಸಿದ್ದಾನೆ. ಆಗ ಲಕ್ಷ್ಮಣ್ ಭರತ್​ನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಗಾಯಗೊಂಡಿರುವ ಮೂವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

ಹೆಸರಘಟ್ಟದ ನಿವಾಸಿ ರೌಡಿ ಕಾಡು ವೆಂಕಟೇಶ್ ಮತ್ತು ಭರತ್ ಗ್ಯಾಂಗ್ ನಡುವೆ ಜಗಳ ನಡೆದಿತ್ತು. ಈ ಬಗ್ಗೆ ವೆಂಕಟೇಶ್​ನ ತಂದೆ ಆಟೋ ಚಾಲಕ ಜಯರಾಮ್ ನಂದಿನಿ ಲೇಔಟ್ ಪೊಲೀಸರಿಗೆ ಭರತ್ ವಿರುದ್ಧ ದೂರು ಕೊಟ್ಟಿದ್ದರು. ಇದೇ ವಿಚಾರಕ್ಕೆ ದ್ವೇಷ ಇಟ್ಟುಕೊಂಡಿದ್ದ ಭರತ್, ಆ.10ರ ಮಧ್ಯಾಹ್ನ 2.45ಕ್ಕೆ ನಂದಿನಿ ಲೇಔಟ್​ನ ಗಣೇಶ್ ಬ್ಲಾಕ್​ನಲ್ಲಿ ಜಯರಾಮ್ ಮೇಲೆ ಸಹಚರರಾದ ಸಂಜಯ್, ಮಂಜ ಮತ್ತು ನಟರಾಜ್ ಜತೆಗೂಡಿ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೈಕ್ ಸುಲಿಗೆ ಮಾಡಿ ಪರಾರಿಯಾಗಿದ್ದ

ಮಂಜುನಾಥ್ ಎಂಬುವರು ಸೋಮವಾರ (ಆ.12)ರಾತ್ರಿ 11 ಗಂಟೆಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಲಗ್ಗೆರೆ ಬ್ರಿಜ್ ಬಳಿ ಅವರನ್ನು ಅಡ್ಡಗಟ್ಟಿದ ಆರೋಪಿಗಳು, ಚಾಕುವಿನಿಂದ ಬೆದರಿಸಿ ಮೊಬೈಲ್, ಹಣ ಹಾಗೂ ಅವರ ಬೈಕ್ ದೋಚಿ ಪರಾರಿಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತೀವ್ರ ಶೋಧ ನಡೆಸಲಾಗಿತ್ತು. ಬೈಕ್​ಗೆ ಅಳವಡಿಸಿದ್ದ ಜಿಪಿಎಸ್ ಬಳಸಿ ಸುಳಿವು ಪಡೆದು ಆರೋಪಿಯನ್ನು ಸೆರೆ ಹಿಡಿಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.

ಜೈಲುಪಾಲಾಗಿದ್ದ ಆರೋಪಿ

ಈ ಹಿಂದೆ ಭರತ್ 2 ಕೊಲೆ ಯತ್ನ, ಕಳ್ಳತನ, 2 ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈ ಹಿನ್ನೆಲೆಯಲ್ಲಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಭರತ್​ನ ಹೆಸರನ್ನು ರೌಡಿಪಟ್ಟಿಗೆ ಸೇರ್ಪಡೆ ಮಾಡಿ ಜೈಲಿಗೆ ಅಟ್ಟಿದ್ದರು. ಇತ್ತೀಚೆಗಷ್ಟೇ ಜೈಲಿನಿಂದ ಹೊರಬಂದಿದ್ದ ಆರೋಪಿ ಹಳೇ ಚಾಳಿಯನ್ನು ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

===

Leave a Reply

Your email address will not be published. Required fields are marked *