ರೌಡಿಗಳ ಜತೆ ಪೊಲೀಸರ ಹೊಸ ವರ್ಷಾಚರಣೆ!

| ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಹೊಸ ವರ್ಷಾಚರಣೆಗೆ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸರು ಹೊಸ ಪ್ಲ್ಯಾನ್ ಮಾಡಿದ್ದಾರೆ. ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರೇ ಕೇಕ್ ಕೊಟ್ಟು ಪಾರ್ಟಿ ಅರೆಂಜ್ ಮಾಡಲು ಯೋಜನೆ ರೂಪಿಸಿದ್ದಾರೆ. ಈ ಭಾಗ್ಯ ರೌಡಿ, ಗೂಂಡಾಗಳು ಮತ್ತು ಅಪರಾಧ ಹಿನ್ನೆಲೆಯುಳ್ಳವರಿಗೆ ಮಾತ್ರ. ಆಶ್ಚರ್ಯ ಎನ್ನಿಸಿದರೂ ಸತ್ಯ. ಅಷ್ಟಕ್ಕೂ ಸಮಾಜಘಾತುಕ ಶಕ್ತಿಗಳ ಮೇಲೆ ನಿಗಾ ವಹಿಸಲು ಈ ಯೋಜನೆ.

ದಕ್ಷಿಣ ಭಾರತದಲ್ಲಿ ಗೋವಾ ಮತ್ತು ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ವರ್ಷಾಚರಣೆ ಮಾಡಲು ದೇಶದ ಎಲ್ಲೆಡೆಯಿಂದ ಸಾವಿರಾರು ಮಂದಿ ಬರುತ್ತಾರೆ. ಅಲ್ಲದೆ, ಐಟಿ ಸಿಟಿಯಾಗಿರುವ ಹಿನ್ನೆಲೆಯಲ್ಲಿ ಹೊರಗಡೆಯಿಂದ ಬಂದಿರುವ ಉದ್ಯೋಗಿಗಳು, ವಿದ್ಯಾರ್ಥಿಗಳು ಕೂಡ ಭಾಗವಹಿಸುತ್ತಾರೆ. ಈ ಎಲ್ಲರೂ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ ಸೇರಿ ಪ್ರಮುಖ ಸ್ಥಳಗಳಲ್ಲಿ ವರ್ಷಾಚರಣೆಯಲ್ಲಿ ತೊಡಗುತ್ತಾರೆ. ಇವರಿಗೆ ಭದ್ರತೆ ಕೊಡುವುದು ಸವಾಲಾಗಿರುತ್ತದೆ. ಮತ್ತೊಂದೆಡೆ ರೌಡಿಗಳು, ಗೂಂಡಾಗಳು ಮತ್ತು ಅಪರಾಧ ಹಿನ್ನೆಲೆಯುಳ್ಳವರು ಗ್ಯಾಂಗ್​ಗಳ ಜತೆಗೆ ಅವರವರ ಅಡ್ಡೆಗಳಲ್ಲಿ ಪಾರ್ಟಿಗಳನ್ನು ವ್ಯವಸ್ಥೆ ಮಾಡಿರುತ್ತಾರೆ.

ಇಂತಹ ಪಾರ್ಟಿಗಳಲ್ಲಿ ದಾಂಧಲೆ, ಕೊಲೆ ಮೊದಲಾದ ಅಪರಾಧ ಕೃತ್ಯಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ಅಥವಾ ಹಳೇ ವೈಷಮ್ಯಕ್ಕೆ ಹತ್ಯೆಗೆ ಪ್ಲಾ್ಯನ್ ಮಾಡಿರುತ್ತಾರೆ. ಇಂಥ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಕಳೆದ 3 ವರ್ಷಗಳಲ್ಲಿ ಅಹಿತಕರ ಘಟನೆಗಳ ಕುರಿತು ಮಾಹಿತಿ ಕಲೆ ಹಾಕಿ ಸ್ಥಳ ಗುರುತಿಸಲಾಗಿದೆ. ಜತೆಗೆ ಆಯಾಸ್ಥಳಗಳ ರೌಡಿಗಳು, ಪಡ್ಡೆ ಹುಡುಗರು, ಅಪರಾಧ ಹಿನ್ನೆಲೆಯುಳ್ಳವರನ್ನು ಪತ್ತೆ ಹಚ್ಚಲಾಗಿದೆ. ಸ್ಥಳೀಯರ ಮೊಬೈಲ್ ನಂಬರ್ ಸಂಗ್ರಹಿಸಿ ಡಿ.31ರ ತಡರಾತ್ರಿ 12 ಗಂಟೆಗೆ ಪೊಲೀಸರೇ ಖುದ್ದು ಹೋಗಿ ಕೇಕ್ ಕೊಟ್ಟು ಅವರಿಂದಲೇ ಕತ್ತರಿಸುವುದು ಮತ್ತು ಪರಸ್ಪರ ಶುಭ ಕೋರಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತದೆ.

ಆ ನಂತರ ಅಲ್ಲಿಂದ ಎಲ್ಲರನ್ನೂ ಮನೆಗೆ ಕಳುಹಿಸಿ ವಾಪಸ್ ಬರುತ್ತಾರೆ. ಈ ಮೂಲಕ ವರ್ಷಾಚರಣೆಯಲ್ಲಿ ಪೊಲೀಸರು ಭಾಗಿಯಾಗುತ್ತಾರೆ. ಜತೆಗೆ ಪಾರ್ಟಿಗಳಲ್ಲಿ ಪೊಲೀಸರು ಭಾಗವಹಿಸುವುದರಿಂದ ಅಪರಾಧ ಎಸಗುವ ಮನೋಸ್ಥಿತಿ ಇರುವವರಿಗೆ ಭಯ ಹುಟ್ಟುತ್ತದೆ.

ಶಾಂತಿಯುತವಾಗಿ ಪಾರ್ಟಿ ಮಾಡುವವರಿಗೆ ಭದ್ರತೆ ನೀಡಿದಂತೆ ಆಗುತ್ತದೆ ಎಂಬುದು ಹಿರಿಯ ಪೊಲೀಸ್ ಅಧಿಕಾರಿಗಳ ಚಿಂತನೆ.

ಏರ್​ಪೋರ್ಟ್​ಗೆ ನಿರ್ಬಂಧ

ಕೆಂಪೇಗೌಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 24 ತಾಸು ಹೋಟೆಲ್​ಗಳು ತೆರೆದಿರುತ್ತವೆ. ಅದಕ್ಕಾಗಿ ಡಿ.31ರಂದು ಬೆಳಗಿನ ಜಾವದವರೆಗೂ ಎಲ್ಲೆಡೆ ಸುತ್ತಾಡಿ ಕೊನೆಗೆ ಊಟಕ್ಕಾಗಿ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ. ಈ ವೇಳೆ ಪ್ರಯಾಣಿಕರು ಮತ್ತು ವರ್ಷಾ ಚರಣೆಯಲ್ಲಿ ತೊಡಗಿರುವವರ ನಡುವೆ ಸಂಘರ್ಷ ಉಂಟಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಏರ್​ಪೋರ್ಟ್ ಪ್ರವೇಶಿಸುವ ಮೇಲ್ಸೆತುವೆಯಲ್ಲಿ ಎಲ್ಲ ವಾಹನ ತಡೆದು ಟಿಕೆಟ್ ಇದ್ದವರಿಗೆ ಅಥವಾ ಅಗತ್ಯ ಇದ್ದವರಿಗೆ ಮಾತ್ರ ಕೆಐಎಗೆ ಪ್ರವೇಶಿಸಲು ಅವಕಾಶ ಕೊಡಲಾಗುತ್ತದೆ. ಇತರರನ್ನು ನಿರ್ಬಂಧಿಸಲಾಗುತ್ತದೆ.

ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗೆ ಹೆಚ್ಚಿನ ಪೊಲೀಸ್ ಭದ್ರತೆ

ಕಳೆದ ವರ್ಷಾಚರಣೆಗೆ ಕೈಗೊಳ್ಳಲಾಗಿದ್ದ ಭದ್ರತಾ ವ್ಯವಸ್ಥೆಯನ್ನು ಈ ವರ್ಷವೂ ಮುಂದುವರಿಸಲಾಗುತ್ತದೆ. ಮಹಿಳೆಯರಿಗೆ, ಕುಟುಂಬಸ್ಥರಿಗೆ ಮತ್ತು ಯುವಕರಿಗೆ ಪ್ರತ್ಯೇಕವಾಗಿ ಬ್ಯಾರಿಕೇಡ್ ಅಳವಡಿಸಿ ನೂಕುನುಗ್ಗಲಾಗದಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಿಸಿ ಕ್ಯಾಮರಾ, ವಾಚ್ ಟವರ್, ಮೆಟಲ್ ಡಿಟೆಕ್ಟರ್ ಸೇರಿ ಭದ್ರತೆಗೆ ಬೇಕಾದ ವ್ಯವಸ್ಥೆ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪಬ್, ರೆಸ್ಟೋರೆಂಟ್ ಸಿಬ್ಬಂದಿ ಜತೆ ಸಭೆ

ನಗರದಲ್ಲಿ ಇರುವ ಎಲ್ಲ ಪಬ್, ಬಾರ್ ಮತ್ತು ರೆಸ್ಟೋರೆಂಟ್​ಗಳ ಮಾಲೀಕರು, ವ್ಯವಸ್ಥಾಪಕರ ಜತೆ ಸಭೆ ನಡೆಸಿ ವರ್ಷಾಚರಣೆಗೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ರ್ಚಚಿಸಿ ಸೂಚನೆ ಕೊಡಲಾಗುತ್ತದೆ.

Leave a Reply

Your email address will not be published. Required fields are marked *