ಟ್ರಿನಿಟಿ ಮೆಟ್ರೋ ನಿಲ್ದಾಣದ ಪಿಲ್ಲರ್​ನಲ್ಲಿ ಬಿರುಕು: ಮೆಟ್ರೋ ಸ್ಥಗಿತಕ್ಕೆ ಸಿಎಂ ಸೂಚನೆ

ಬೆಂಗಳೂರು: ನಗರದ ಟ್ರಿನಿಟಿ ಮೆಟ್ರೋ ನಿಲ್ದಾಣದ ಪಿಲ್ಲರ್​ನಲ್ಲಿ ಭಾರಿ ಗಾತ್ರದ ಬಿರುಕು ಕಾಣಿಸಿಕೊಂಡಿದ್ದು, ಮೆಟ್ರೋ ಸಂಚಾರದ ವೇಗ ಮಿತಿಯನ್ನು ಕಡಿತಗೊಳಿಸಲಾಗಿದೆ.

ಬಿರುಕು ಹಿನ್ನೆಲೆಯಲ್ಲಿ ಬಿಎಂಆರ್​ಸಿಎಲ್​ ತುರ್ತು ತಪಾಸಣೆಗೆ ಮುಂದಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೆಟ್ರೋ ಲೈನ್​ ಕೆಳಭಾಗದಲ್ಲಿ​ ಜಾಕ್​ ಅಳವಡಿಸಲಾಗಿದೆ. ಹಾಗೇ ಸಂಚಾರ ಮಿತಿಯನ್ನು ಕಡಿಮೆ ಮಾಡಲಾಗಿದ್ದು, ಗಂಟೆಗೆ 10 ಕಿ.ಮೀ. ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ. ಪ್ರತಿ 30 ನಿಮಿಷಗಳಿಗೊಂದು ಮೆಟ್ರೋ ಸಂಚಾರಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ.

ಅನುಮಾನಕ್ಕೆ ಎಡೆಮಾಡಿದ ಬಿರುಕು
ಮೆಟ್ರೋ ಪಿಲ್ಲರ್​ಗಳ ಆಯಸ್ಸು 130 ವರ್ಷಗಳಾಗಿದ್ದು, ಕೇವಲ ಹತ್ತೇ ವರ್ಷದಲ್ಲಿ ಬಿರುಕು ಕಾಣಿಸಿಕೊಂಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಳಪೆ ಕಾಮಗಾರಿಯಿಂದಲೇ ಅವ್ಯವಸ್ಥೆ ನಡೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆಟ್ರೋ ಸ್ಥಗಿತಕ್ಕೆ ಸೂಚನೆ
ಮೆಟ್ರೋ ಲೈನ್​​​ನಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ಮೊನ್ನೆಯೇ ನನಗೆ ಮಾಹಿತಿ‌ಬಂದಿದೆ. ತಜ್ಞರನ್ನು ಕರೆಸಿ ಮಾತುಕತೆ ನಡೆಸಿ, ತನಿಖೆಗೆ ಆದೇಶಿಸಿದ್ದೇನೆ. ಬಿರುಕು ಕಾಣಿಸಿಕೊಂಡಿರುವ ಮೆಟ್ರೋ ಲೈನ್ ಸ್ಥಗಿತಕ್ಕೆ ಸೂಚನೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಅನಾಹುತವಾಗದಂತೆ ನೋಡಿಕೊಳ್ಳಲು ಹೇಳಿದ್ದೇನೆ. ತಜ್ಞರು ಪರಿಶೀಲನೆ ನಡೆಸಿ, ವೇಗ ಕಡಿಮೆ ಮಾಡಿ ಓಡಿಸಬಹುದು ಎಂದು ಹೇಳಿದ್ದಾರೆ. ಆದರೂ ನಾನು ಮತ್ತೊಮ್ಮೆ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *