ಬೆಂಗಳೂರಿಗೆ ತಟ್ಟಿದ ಲಾರಿ ಮುಷ್ಕರ ಬಿಸಿ: ನಾಳೆ ದಿನಸಿ, ತರಕಾರಿ ಸಿಗೋದು ಕಷ್ಟ

ಬೆಂಗಳೂರು: ಲಾರಿ‌ ಮಾಲೀಕರ ಅನಿರ್ಧಿಷ್ಟಾವಧಿ ಮುಷ್ಕರದ ಬಿಸಿ ರಾಜ್ಯ ರಾಜಧಾನಿಗೂ ತಟ್ಟಿದೆ. ನಾಳೆಯಿಂದ ತರಕಾರಿ ಹಾಗೂ ದಿನಸಿ ಲಾರಿಗಳ ಲೋಡ್ ಮತ್ತು ಅನ್ ಲೋಡ್​​ಗೆ ತಡೆ ನೀಡುವ ಮೂಲಕ ನಗರದ ಎಪಿಎಂಸಿ ಮುಷ್ಕರಕ್ಕೆ ಬೆಂಬಲ ನೀಡಿದೆ.

ಪ್ರತಿನಿತ್ಯ ಎಪಿಎಂಸಿಗೆ ಟೊಮ್ಯಾಟೊ, ಆಲೂಗಡ್ಡೆ ಹಾಗೂ ಬೇಳೆಕಾಳು ಸೇರಿ ದವಸಧಾನ್ಯಗಳ ಸಾಗಣೆಯಾಗುತ್ತಿತ್ತು. ಸುಮಾರು 1,500 ಲಾರಿಗಳ ಓಡಾಟಕ್ಕೆ ತಡೆ ನೀಡಲಾಗಿದ್ದು, ಸಮಸ್ಯೆಗೆ ಕೂಡಲೇ ಸ್ಪಂದಿಸಿದಿದ್ದರೆ ಸಂಪೂರ್ಣ ಬಂದ್ ಮಾಡುವುದಾಗಿ ಕೇಂದ್ರ ಸರ್ಕಾರಕ್ಕೆ ವರ್ತಕರ ಸಂಘದ ಅಧ್ಯಕ್ಷ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಟೋಲ್ ಮುಕ್ತ ಭಾರತಕ್ಕೆ ಮನವಿ
ದೇಶವ್ಯಾಪಿ ಟೋಲ್​ಗಳಿಂದ ವಾರ್ಷಿಕ 22000 ಕೋಟಿ ರೂ. ಆದಾಯ ಸಂಗ್ರಹವಾಗುತ್ತಿದೆ. 2% ಡಿಸೇಲ್ ಮೇಲಿನ ಸೆಸ್ ಹೆಚ್ಚಿಸಿ 26,000 ಕೋಟಿ ರೂ. ಸಂಗ್ರಹಿಸಲಾಗುತ್ತಿದೆ. ರಾಜ್ಯದ 36 ಸೇರಿ ದೇಶದ್ಯಾಂತ ಇರುವ 461 ಟೋಲ್​ಗಳನ್ನು ಮುಚ್ಚಲು ಲಾರಿ ಮಾಲೀಕರ ಸಂಘ ಆಗ್ರಹಿಸುತ್ತಿದೆ.

ಡಿಸೇಲ್​ಗೆ ಏಕರೂಪ ದರ ನಿಗದಿಪಡಿಸಿ
ಡಿಸೇಲ್ ಜಿಎಸ್​ಟಿ ವ್ಯಾಪ್ತಿಗೆ ಒಳಪಡಿಸಿ, ದೇಶವ್ಯಾಪಿ ಡಿಸೇಲ್​ಗೆ ಏಕರೂಪ ದರ ನಿಗದಿಪಡಿಸಿ, ಪ್ರತಿ ಲಾರಿಗೆ ವಾರ್ಷಿಕವಾಗಿ ಸಂಗ್ರಹಿಸುವ 1ಲಕ್ಷ ಆದಾಯ ತೆರಿಗೆಯನ್ನು ಹಿಂಪಡೆಯಿರಿ ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮೂರು ದಿನದೊಳಗೆ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ ವಿಳಂಬ ಮಾಡಿದರೆ ಎಲ್ಲ ಟೋಲ್​ಗಳಲ್ಲಿ ವಾಹನಗಳ ನಿಲುಗಡೆ ಮಾಡಿ ಉಗ್ರ ಹೋರಾಟದ ಎಚ್ಚರಿಕೆಯನ್ನು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್ ಶಣ್ಮುಗಪ್ಪ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)