ರಾಮೋಹಳ್ಳಿಯಲ್ಲಿ ಇಂದು ಪಂಚಾಯ್ತಿ ಕಟ್ಟೆ

>

ಬೆಂಗಳೂರು: ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ 24/7 ಚಾನಲ್ ನಗರದ ವಾರ್ಡ್​ಗಳಲ್ಲಿ ಆಯೋಜಿಸುತ್ತ ಬಂದಿರುವ ಜನಪ್ರಿಯ ಕಾರ್ಯಕ್ರಮ ‘ಜನತಾದರ್ಶನ’ ಇದೀಗ ‘ಪಂಚಾಯ್ತಿ ಕಟ್ಟೆ’ ಹೆಸರಿನಲ್ಲಿ ಗ್ರಾಮೀಣ ಭಾಗಕ್ಕೂ ವಿಸ್ತರಣೆಯಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನರನ್ನು ಒಂದೇಕಡೆ ಮುಖಾಮುಖಿಯಾಗಿಸಿ ಸಾರ್ವಜನಿಕ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ಅಪರೂಪದ ಕಾರ್ಯಕ್ರಮವಿದು. ಮೊಟ್ಟಮೊದಲ ‘ಪಂಚಾಯ್ತಿ ಕಟ್ಟೆ’ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮೋಹಳ್ಳಿ ಪಂಚಾಯ್ತಿಯಲ್ಲಿ ಶನಿವಾರ (ನ.24) ನಡೆಯಲಿದೆ.

ಪಂಚಾಯ್ತಿ ಪರಿಚಯ: ಯಶವಂತಪುರ ವಿಧಾನ ಸಭಾ ಕ್ಷೇತ್ರದ 17 ಗ್ರಾಮ ಪಂಚಾಯತಿಗಳಲ್ಲಿ ರಾಮೋಹಳ್ಳಿ ಅತಿ ಹೆಚ್ಚು ಕಂದಾಯ ಸಂಗ್ರಹವಾಗುವ ಪಂಚಾಯ್ತಿ. ಇದರ ವ್ಯಾಪ್ತಿಯಲ್ಲಿ 13 ಗ್ರಾಮಗಳಿವೆ. ರಾಗಿ ಈ ಭಾಗದ ಪ್ರಮುಖ ಬೆಳೆ. ತೆಂಗು ತೋಟಗಾರಿಕಾ ಉತ್ಪನ್ನವಾಗಿದೆ. ಅನೇಕ ಸಸಿಗಳ ನರ್ಸರಿಗಳಿವೆ. ಇಲ್ಲಿಯ ಸಸಿಗಳಿಗೆ ಭಾರಿ ಬೇಡಿಕೆ ಇದೆ.

ಒಕ್ಕಲಿಗ ಸಮುದಾಯ ಪ್ರಬಲವಾಗಿದ್ದು, ಎಲ್ಲ ವರ್ಗದ ಜನರು ನೆಲೆನಿಂತಿದ್ದಾರೆ. ಶಾಸಕರ ಅನುದಾನ ದಲ್ಲಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ, ಬೀದಿದೀಪ ಅಳವಡಿಕೆ, 9ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮೊದಲಾದ ಕಾರ್ಯಗಳಾಗಿವೆ. ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವಲ್ಲಿ ಪಂಚಾಯ್ತಿ ಯಶಸ್ವಿಯಾಗಿದೆ. ಪಂಚಾಯ್ತಿ ವ್ಯಾಪ್ತಿಗೆ ಕೆಂಪೇಗೌಡ ಬಡಾವಣೆ (ಬಿಡಿಎ) ಹೊಂದಿಕೊಂಡಿದೆ. ಬಡಾವಣೆಯ ಆಸುಪಾಸಿನ ಜಮೀನು ನಿವೇಶನಗಳಾಗಿ ಮಾರ್ಪಾಡಾಗುತ್ತಿವೆ. ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದಿರುವುದು, ಒಳಚರಂಡಿ ಅವ್ಯವಸ್ಥೆ ಇಲ್ಲಿಯ ಪ್ರಮುಖ ಸಮಸ್ಯೆ. ವಿದ್ಯುತ್ ಲೋಡ್ ಶೆಡ್ಡಿಂಗ್ ಕೂಡ ಜನರನ್ನು ಬಾಧಿಸುತ್ತಿದೆ.

ಆಕರ್ಷಕ ಬಹುಮಾನ

ಪಂಚಾಯ್ತಿಕಟ್ಟೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಲಕ್ಕಿ ಕೂಪನ್ ನೀಡಲಾಗುತ್ತದೆ. ಕಾರ್ಯಕ್ರಮದ ಕೊನೆಯಲ್ಲಿ ಲಕ್ಕಿ ಡ್ರಾ ಮೂಲಕ ಐವರು ವಿಜೇತರಿಗೆ ಆಕರ್ಷಕ ಬಹುಮಾನ ವಿತರಿಸಲಾಗುತ್ತದೆ.

 

ಕ್ಷೇತ್ರದ ಶಾಸಕರ ಸ್ಪಂದನೆ

ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಕ್ಷೇತ್ರ ವ್ಯಾಪ್ತಿಯ 5 ವಾರ್ಡ್​ಗಳ ಅಭಿವೃದ್ಧಿ ಜತೆಗೆ ಕ್ಷೇತ್ರದ 17 ಗ್ರಾಮ ಪಂಚಾಯ್ತಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದು, ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಕಾಂಕ್ರೀಟ್ ರಸ್ತೆ ನಿರ್ವಣ, ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಿದ್ದಾರೆ. ಮಾದರಿ ಪಂಚಾಯ್ತಿಗಳಾಗಿ ರೂಪಿಸಲು ರೂಪುರೇಷೆ ಸಿದ್ಧಪಡಿಸಿದ್ದು. ಹಂತಹಂತವಾಗಿ ಕಾರ್ಯರೂಪಕ್ಕೆ ತರುವ ಗುರಿ ಹೊಂದಿದ್ದಾರೆ. ಗ್ರಾಮಸಭೆಗಳ ಮೂಲಕ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪರಿಚಯ

ಮೂರು ಬಾರಿ ಗ್ರಾಪಂ ಸದಸ್ಯೆಯಾಗಿ ಅವಿರೋಧವಾಗಿ ಆಯ್ಕೆಯಾದ ರೂಪಾ ವೇಣುಗೋಪಾಲ್ 2014-15ರಲ್ಲಿ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷೆಯಾಗಿ ಅಧಿಕಾರದ ಗದ್ದುಗೆ ಹಿಡಿದರು. ಪತಿ ವೇಣುಗೋಪಾಲ್ ಮೊದಲಿಗೆ ಭೂ ನ್ಯಾಯಮಂಡಳಿ ಅಧ್ಯಕ್ಷರಾಗಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, 3 ಬಾರಿ ಗ್ರಾಪಂ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ರಾಮೋಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿದ್ದಾರೆ. ರೂಪಾ ಅವರ ಅತ್ತೆ ರತ್ನಮ್ಮ 2 ಬಾರಿ ಇದೇ ಗ್ರಾಪಂ ಉಪಾಧ್ಯಕ್ಷೆಯಾಗಿದ್ದರು, ಮಾವ ವೆಂಕಟೇಶಪ್ಪ 2 ಬಾರಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು. ಶಾಸಕ ಎಸ್.ಟಿ. ಸೋಮಶೇಖರ್ ಬೆಂಬಲದಿಂದ ಪಂಚಾಯ್ತಿ ಅಧ್ಯಕ್ಷೆಯಾಗಿ ರೂಪಾ ಯಶಸ್ಸು ಕಂಡಿದ್ದಾರೆ. ಶಾಸಕರ ಅನುದಾನದ ಸದ್ಬಳಕೆ ಮಾಡಿಕೊಂಡು ಮಾದರಿ ಗ್ರಾಪಂ ಮಾಡುವ ಕನಸು ಅವರದು. ನಿರಂತರವಾಗಿ ಗ್ರಾಮ ಸಭೆಗಳನ್ನು ನಡೆಸುತ್ತಿದ್ದಾರೆ. ಕಾಂಕ್ರೀಟ್ ರಸ್ತೆ ನಿರ್ವಣ, ಕುಡಿಯುವ ನೀರಿನ ವ್ಯವಸ್ಥೆ, ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಣದಲ್ಲಿ ಇವರ ಶ್ರಮವಿದೆ.

ಗ್ರಾಪಂ ಉಪಾಧ್ಯಕ್ಷರ ಪರಿಚಯ

ರಾಮೋಹಳ್ಳಿ ಗ್ರಾಪಂ ಉಪಾಧ್ಯಕ್ಷ ಬಿ.ಎಚ್. ಪ್ರಭು ಮೊದಲು ಭೀಮನಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು. ಪಕ್ಷ ಸಂಘಟನೆ ಸೇರಿ ಅನೇಕ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯವಾಗಿದ್ದು, ಪಂಚಾಯ್ತಿ ವ್ಯಾಪ್ತಿಯ ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಪ್ರತಿ ಬಡವರಿಗೆ ಹಕ್ಕುಪತ್ರ ನೀಡುವ ಕನಸಿನ ಭಾಗವಾಗಿ ಶಾಸಕರ ಸಹಕಾರದಿಂದ ಈಗಾಗಲೇ 60 ಮಂದಿಗೆ ಹಕ್ಕು ವಿತರಿಸಿದ್ದಾರೆ. ಪ್ರಸ್ತುತ 150 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಶೀಘ್ರದಲ್ಲೇ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಹೊಸ ಮೈಲಿಗಲ್ಲು

ಫೋನ್​ಇನ್ ಕಾರ್ಯಕ್ರಮ, ವಾರ್ಡ್ ದರ್ಶನ, ಸ್ವಯಂವರ ಪಾರ್ವತಿ ಯಾಗ, ದೇವಾಲಯ ದರ್ಶನ, ಜನತಾದರ್ಶನ ಮತ್ತಿತರ ಕಾರ್ಯಕ್ರಮಗಳ ಮೂಲಕ ಮಾಧ್ಯಮ ಲೋಕದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿರುವ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಚಾನಲ್ ಈಗ ಪಂಚಾಯ್ತಿ ಕಟ್ಟೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಮತ್ತೊಂದು ಮಹತ್ತರ ಹೆಜ್ಜೆ ಇಟ್ಟಿದೆ.