ರಾಮಮಂದಿರ ನಿರ್ಮಾಣಕ್ಕೆ ಎಂತಹ ತ್ಯಾಗಕ್ಕಾದರೂ ಸಿದ್ಧ: ಪೇಜಾವರ ಶ್ರೀ

ಬೆಂಗಳೂರು: ಜನಾಗ್ರಹ ಸಭೆಯನ್ನು ರಾಮಮಂದಿರ ನಿರ್ಮಾಣಕ್ಕೆ ಸುಗ್ರಿವಾಜ್ಞೆ ತರಲು ಆಯೋಜನೆ ಮಾಡಲಾಗಿದೆ. ಸಂಘಪರಿವಾರದವರು ರಾಮಮಂದಿರ ಕಟ್ಟಲು ಸಿದ್ಧರಿದ್ದಾರೆ‌. ಸುಗ್ರೀವಾಜ್ಞೆ ತರಲು ಕೇಂದ್ರ ಸರ್ಕಾರ ಸಿದ್ಧವಾಗಬೇಕು ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ನ್ಯಾಷನಲ್ ಮೈದಾನದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಮಾತನಾಡಿ, ರಾಮಮಂದಿರ ವಿಚಾರ ನಿನ್ನೆ ಮೊನ್ನೆಯದಲ್ಲ. ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಹಾಗೆಯೇ ಈಗಲೂ ಜನಾಂದೋಲನ ನಡೆಯುತ್ತಿದೆ. ಆದರೆ ಈ ನಡುವೆ ಚುನಾವಣೆ ಬಂದಿವೆ ಅಷ್ಟೆ. ನ್ಯಾಯಾಲಯಗಳು ಹಿಂದೂ ಸಮಾಜದ ಭಾವನೆಗೆ ಗೌರವ ಕೊಡಬೇಕು. ನ್ಯಾಯಾಧೀಶರಿಗೆ ರಾಮಮಂದಿರ ನಿರ್ಮಾಣ ವಿಚಾರ ಆದ್ಯತೆಯಾಗಿಲ್ಲ. ಇದು ರಾಮನಿಗೆ, ಹಿಂದೂಗಳಿಗೆ ಮಾಡಿದ ಅವಮಾನ ಎಂದರು.

ವಿಚಾರಣೆ ಮುಗಿದು ತೀರ್ಪು ಬರುವ ಮುನ್ನ ಅಪರಾಧಿಗಳು ಮರಣ ಹೊಂದುತ್ತಿದ್ದಾರೆ. ಹೀಗಾಗಿ ನ್ಯಾಯಾಲಯ ಪ್ರಕ್ರಿಯೆಯಲ್ಲಿ ಪರಿವರ್ತನೆ ಆಗಬೇಕು. ನನಗೆ 85 ವರ್ಷ. ರಾಮಮಂದಿರದಲ್ಲಿ ರಾಮನನ್ನು ದರ್ಶನ ಮಾಡುತ್ತೇನೊ ಇಲ್ಲವೋ ಗೊತ್ತಿಲ್ಲ. ಸಂತರು, ಮಠಾಧೀಶರು ಯಾವುದೇ ರಾಜಕೀಯ ಪಕ್ಷದ ವಿರುದ್ಧ ಧ್ವನಿ ಎತ್ತಿಲ್ಲ. ಕ್ರಿಶ್ಚಿಯನ್, ಮುಸ್ಲಿಮರು ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಬೇಕು. ಅವರು ಬೆಂಬಲ ನೀಡಿದರೆ ದೇಶದಲ್ಲಿ ಹಿಂದು-ಮುಸ್ಲಿಂ ನಡುವೆ ಬಹು ದೊಡ್ಡ ಸೌಹಾರ್ದತೆ ಬೆಳೆಯುತ್ತದೆ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಲೋಕಸಭೆ ಮತ್ತು ರಾಜ್ಯಸಭೆಯ ಸಂಯುಕ್ತ ಸಭೆ ಕರೆದು, ಪ್ರಧಾನಿ ಮೋದಿ ದೇಶದ ಸಂತರ ಜತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಬೇಕು. ಸಭೆ ನಡೆಸದಿದ್ದರೆ ಸಂತರು ಉಪವಾಸ ಕುಳಿತುಕೊಳ್ಳೋಣ. ರಾಮಮಂದಿರ ನಿರ್ಮಿಸಲು ಎಂತಹ ತ್ಯಾಗಕ್ಕಾದೂ ಸಿದ್ಧರಾಗೋಣ. ನಾವು ಕೋಮುವಾದಿಗಳಲ್ಲ, ಪ್ರೇಮವಾದಿಗಳು. ನಾವು ಯಾರನ್ನು ದ್ವೇಷಿಸಲ್ಲ ಎಂದು ಹೇಳಿದರು.

ಹಿಂದೂ ಸಮಾಜಕ್ಕೆ ನ್ಯಾಯಾಲಯಗಳಲ್ಲಿ ಬೆಲೆ ಇಲ್ಲ. ನ್ಯಾಯಾಲಯಗಳಿಗೆ ಹಿಂದೂ ಸಮಾಜ ಆದ್ಯತೆಯಲ್ಲ. ಕೋಟಿ ಜನರ ಭಾವನೆ ಆದ್ಯತೆಯ ವಿಷಯವಲ್ಲ. ನ್ಯಾಯಾಲಯಗಳಿಗೆ ಸ್ಯಾಂಡಲ್, ಚಪ್ಪಲಿ, ಯಾಕೂಬ್ ಮೆನನ್, ನಾಯಿಗಳಿಗೆ ಕಲ್ಲು ಹೊಡೆಯುವ ವಿಚಾರಗಳು ಆದ್ಯತೆಯಾಗಿವೆ. ಹಿಂದೂಗಳ ಭಾವನೆ ಆದ್ಯತೆ ಅಲ್ಲವಂತೆ. ಅದಕ್ಕಾಗಿ ಜನಾಗ್ರಹ ಸಭೆ ಮಾಡಬೇಕಾಯಿತು ಎಂದು ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ಮುಕುಂದ್ ಸಿ.ಆರ್. ಹೇಳಿದರು.

ಜಬಲ್ಪುರದ ಅಖಿಲೇಶ್ವರಾನಂದ ಸ್ವಾಮೀಜಿ ಮಾತನಾಡಿ, ಹಿಂದೂಗಳ ಭಾವನೆಗೆ ಧಕ್ಕೆ ತಂದರೆ ನಾವು ಅಂತಹವರ ವಿರುದ್ಧ ಆಂದೋಲನಕ್ಕೆ ಇಳಿದೇ ಇಳಿಯುತ್ತೇವೆ. ಇಲ್ಲಿವರೆಗೂ ನಾವುಗಳು ಹಲವು ವಿಷಯಗಳನ್ನು ಒಪ್ಪಿಕೊಂಡಿದ್ದೇವೆ. ಆದರೆ ರಾಮಜನ್ಮ ಭೂಮಿ ವಿಚಾರದಲ್ಲಿ ಯಾವುದೇ ಸಬೂಬು ನಮಗೆ ಬೇಡ. ರಾಹುಲ್ ಗಾಂಧಿ ತೆಲಂಗಾಣದಲ್ಲಿ ನನ್ನ ಪೂರ್ವಜರು ಮುಸಲ್ಮಾನರು ಅಂತಾರೆ. ನನ್ನ ಅಮ್ಮ ಕ್ರಿಶ್ಚಿಯನ್ ಅಂತಾರೆ. ಆದರೆ ದೇವಸ್ಥಾನಕ್ಕೆ ಹೋದಾಗ ನಾನು ಹಿಂದೂ ಅಂತಾರೆ. ಅವರಿಗೆ ಯಾವ ಧರ್ಮವೂ ಇಲ್ಲ, ಗೋತ್ರವು ಇಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)