ಬೇರೆಯವರ ಮನೆಯನ್ನು ಬಾಡಿಗೆಗೆ ಕೊಡುತ್ತಿದ್ದವ ಪೊಲೀಸರ ಬಲೆಗೆ ಬಿದ್ದಿದ್ದೇಗೆ?

ಬೆಂಗಳೂರು: ಹಳೇ ವಸ್ತುಗಳ ಮಾರಾಟ ಜಾಲತಾಣಗಳಿಗೆ ಯಾರದ್ದೋ ಕಾರು, ಬೈಕ್​ಗಳ ಫೋಟೋ ಅಪ್​ಲೋಡ್ ಮಾಡಿ ವಂಚಿಸುವ ಮೋಸಗಾರರ ಬಗ್ಗೆ ಕೇಳಿರುತ್ತೀರಿ.. ಆದರೆ, ಈ ರೀತಿ ಹೊಸ ವಂಚನೆಯನ್ನು ನೀವು ಕೇಳಿರಲಿಕ್ಕಿಲ್ಲ!

ಇಲ್ಲೊಬ್ಬ ಖತರ್​ನಾಕ್ ವಂಚಕ ಬೇರೆಯವರ ಫ್ಲ್ಯಾಟ್, ಮನೆಗಳ ಫೋಟೋವನ್ನು ಜಾಲತಾಣಕ್ಕೆ ಅಪ್​ಲೋಡ್ ಮಾಡಿ ಅವುಗಳನ್ನು ಬಾಡಿಗೆಗೆ ಕೊಟ್ಟು ಕಟ್ಟಡ ಮಾಲೀಕರಿಗೆ ವಂಚಿಸುತ್ತಿದ್ದ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬಿಟಿಎಂ ಲೇಔಟ್ 2ನೇ ಹಂತದ ನಿವಾಸಿ ಮೊಹಮ್ಮದ್ ಅಬ್ದುಲ್ ರಹೀಂ (47) ಬಂಧಿತ ವಂಚಕ. ಹಿಂದಿ, ಇಂಗ್ಲಿಷ್ ಮತ್ತು ಕನ್ನಡವನ್ನು ನಿರರ್ಗಳವಾಗಿ ಮಾತನಾಡುವ ಈತ, ಮಾರತ್​ಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಫ್ಲ್ಯಾಟ್ ಅಥವಾ ಮನೆಗಳು ಬಾಡಿಗೆಗೆ ಲಭ್ಯ ಎಂದು ಬೋರ್ಡ್ ಹಾಕಿರುವುದನ್ನು ಗಮನಿಸುತ್ತಿದ್ದ. ನಂತರ ಆ ಕಟ್ಟಡ ಮಾಲೀಕರನ್ನು ಭೇಟಿ ಮಾಡಿ ಖಾಲಿ ಇರುವ ಫ್ಲ್ಯಾಟ್ ಅಥವಾ ಮನೆಗಳನ್ನು ಬಾಡಿಗೆ ಪಡೆಯುವುದಾಗಿ ಹೇಳಿ 2 ತಿಂಗಳ ಮುಂಗಡ ಬಾಡಿಗೆ ಹಣ ಕೊಟ್ಟು ಕೀ ಪಡೆಯುತ್ತಿದ್ದ. ಕರಾರು ಪತ್ರವನ್ನು ಬಳಿಕ ಮಾಡಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದ.

ಜಾಲತಾಣಗಳಲ್ಲಿ ಜಾಹೀರಾತು: ನಂತರ ಮನೆ, ಫ್ಲ್ಯಾಟ್​ಗಳ ಫೋಟೋಗಳನ್ನು ಜಾಲತಾಣಗಳಲ್ಲಿ ಹಾಕಿ ಬಾಡಿಗೆಗೆ ದೊರೆಯುತ್ತದೆ ಎಂದು ಜಾಹೀರಾತು ನೀಡುತ್ತಿದ್ದ. ಆ ಪ್ರದೇಶ ಸುತ್ತಮುತ್ತಲಿನ ಸಾಫ್ಟ್​ವೇರ್ ಕಂಪನಿ ಉದ್ಯೋಗಿಗಳು ಜಾಹೀರಾತು ನೋಡಿ ಅಬ್ದುಲ್ ಮೊಬೈಲ್​ಗೆ ಕರೆ ಮಾಡುತ್ತಿದ್ದರು. ಆಗ ಆತ ವಿಳಾಸ ನೀಡಿ ಕಟ್ಟಡಕ್ಕೆ ಕರೆಸಿಕೊಂಡು ಮನೆ ತೋರಿಸುತ್ತಿದ್ದ. ಬಾಡಿಗೆ ಮತ್ತು ಭೋಗ್ಯಕ್ಕೆ ಕೊಡುವ ಬಗ್ಗೆ ಮಾತುಕತೆ ನಡೆಸಿ ನಕಲಿ ಕರಾರು ಪತ್ರ ಕೊಟ್ಟು 50 ಸಾವಿರ ರೂ.ಯಿಂದ 10 ಲಕ್ಷ ರೂ. ವರೆಗೂ ಹಣ ಪಡೆದು ನಾಪತ್ತೆ ಆಗುತ್ತಿದ್ದ.

ಇತ್ತ ಕಟ್ಟಡ ಮಾಲೀಕ, ಆರೋಪಿ ಕೊಟ್ಟಿದ್ದ ಮುಂಗಡ ಹಣ 2 ಅಥವಾ 3 ತಿಂಗಳಿಗೆ ಮುಗಿದ ಬಳಿಕ ಕಟ್ಟಡದ ಬಳಿಗೆ ವಿಚಾರಿಸಲು ಬಂದಾಗ ಆತನಿಗೆ ಗೊತ್ತಿಲ್ಲದಂತೆ ಅನ್ಯರು ಬಾಡಿಗೆಗೆ ಇಲ್ಲವೇ ಭೋಗ್ಯಕ್ಕೆ ಬಂದಿರುವ ವಿಷಯ ಬೆಳಕಿಗೆ ಬರುತ್ತಿತ್ತು. ಇದೆ ರೀತಿ ಮಾರತ್​ಹಳ್ಳಿ ಠಾಣೆ ವ್ಯಾಪ್ತಿಯಲ್ಲೇ 8 ಕಡೆಗಳಲ್ಲಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಗ್ರಾಹಕರಿಗೆ ಕೊಟ್ಟಿದ್ದ ಮೊಬೈಲ್ ನಂಬರ್ ಮತ್ತು ಮುಖ ಚಹರೆ ಆಧಾರದ ಮೇಲೆ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.

ವಂಚನೆಗೆ ಒಳಗಾಗಿದ್ದರೆ ದೂರು ಕೊಡಿ

ಬಂಧಿತ ಅಬ್ದುಲ್ ರಹೀಂನಿಂದ ವಂಚನೆಗೆ ಒಳಗಾಗಿದ್ದರೆ ಮಾರತ್​ಹಳ್ಳಿ ಠಾಣೆಗೆ ಭೇಟಿ ನೀಡಿ ದೂರು ಕೊಡಬಹುದು ಅಥವಾ ದೂರವಾಣಿ ಸಂಖ್ಯೆ 94808 01615 ಗೆ ಕರೆ ಮಾಡಬಹುದು.

ಹಲವು ಹೆಸರುಗಳಿಂದ ವಂಚನೆ
ಆರೋಪಿ ಮೊಹಮ್ಮದ್ ಅಬ್ದುಲ್ ರಹೀಂ, ವಂಚನೆ ಮಾಡಲು ತನ್ನ ಹೆಸರನ್ನು ಬದಲಾಯಿಸಿಕೊಂಡು ಗ್ರಾಹಕರನ್ನು ಹಾಗೂ ಕಟ್ಟಡ ಮಾಲೀಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ರಾಹುಲ್, ರಾಹಿಲ್, ಎಂ.ಎ.ಆರ್. ನೌಮಾನ್, ಸಲ್ಮಾನ್, ಸಾರೀಕ್, ರಾಕೀಬ್, ಫೈಜೀ, ಯಾಸಿರ್ ಎನ್ನುವ ಹೆಸರುಗಳಲ್ಲಿ ಜಾಹೀರಾತು ನೀಡುತ್ತಿದ್ದ. ಪ್ರತಿ ಹೆಸರಿಗೂ ಒಂದೊಂದು ಹೊಸ ಮೊಬೈಲ್ ನಂಬರ್ ಕೊಡುತ್ತಿದ್ದ.