ಸಿಲಿಕಾನ್​ ಸಿಟಿಗೆ ದಿಢೀರ್​ ಆಗಮಿಸಿದ ವರುಣ; ವಾಹನ ಸವಾರರ ಪರದಾಟ, ಟ್ರಾಫಿಕ್ ಜಾಮ್

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಶನಿವಾರ ದಿಢೀರನೇ ಆಗಮಿಸಿದ ಗುಡುಗು ಸಹಿತ ಭಾರಿ ಮಳೆಯಿಂದಾಗಿ ನಗರದ ಹಲವೆಡೆ ಟ್ರಾಫಿಕ್​ ಜಾಮ್​ ಉಂಟಾಗಿ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ಮೆಜೆಸ್ಟಿಕ್​, ಜಯನಗರ, ಜೆಪಿನಗರ, ಲಾಲ್​ಬಾಗ್​, ಕಾರ್ಪೊರೇಷನ್, ಶಾಂತಿನಗರ, ಬಸವನಗುಡಿ, ಬನಶಂಕರಿ ಹಾಗೂ ಕೆ.ಆರ್​.ಮಾರಕಟ್ಟೆ ಸೇರಿದಂತೆ ಹಲವೆಡೆ ಭಾರಿ ಮಳೆಯಾಗುತ್ತಿದೆ. ವರುಣನ ಆರ್ಭಟ ಮುಂದುವರಿದಿದ್ದು, ಕೆಲಸ ಮುಗಿಸಿ ತಮ್ಮ ಮನೆಗೆ ಹೊರಟ್ಟಿರುವ ಅನೇಕರು ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.

ಮಾಲ್ಡೀವ್ಸ್​ನಿಂದ ತೆಲಂಗಾಣ ಕರಾವಳಿವರೆಗೆ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಮನಗರ, ಚಾಮರಾಜನಗರ ಹಾಗೂ ಮಡಿಕೇರಿಯಲ್ಲಿ ಮಳೆ ಆಗುತ್ತಿದ್ದು, ನಾಳೆಯೂ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ನೈಸರ್ಗಿಕ ವಿಕೋಪ ಮತ್ತು ವಿಪತ್ತು ನಿರ್ವಹಣಾ ಕೇಂದ್ರದ ಮುಖ್ಯಸ್ಥ ಶ್ರೀನಿವಾಸ ರೆಡ್ಡಿ ದಿಗ್ವಿಜಯ ನ್ಯೂಸ್​ಗೆ ಮಾಹಿತಿ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)