ಸಿಲಿಕಾನ್​ ಸಿಟಿಯಲ್ಲಿ ಇನ್ನೂ 2-3 ದಿನ ಭಾರಿ ಮಳೆ!

ಬೆಂಗಳೂರು: ನಿನ್ನೆ ರಾತ್ರಿ ಆದ ದಾಖಲೆಯ ಮಳೆಗೆ ಸಿಲಿಕಾನ್​ ಸಿಟಿಯ ಜನತೆ ಬೆಚ್ಚಿ ಬಿದ್ದಿದ್ದು, ಇನ್ನೂ 2-3 ದಿನ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

ದಿಗ್ವಿಜಯ ನ್ಯೂಸ್​ಗೆ ಮಾಹಿತಿ ನೀಡಿ, 1988 ಸೆ.12 ರಂದು 177.6 ಮಿ.ಮೀ. ಮಳೆಯೇ ಬೆಂಗಳೂರಿನಲ್ಲಿ ದಾಖಲೆಯ ಮಳೆಯಾಗಿತ್ತು. ಆದರೆ, ಕಳೆದ ರಾತ್ರಿ ಬೆಂಗಳೂರಿನಲ್ಲಿ 206 ಮಿ.ಮೀ. ಮಳೆಯಾಗಿ ದಾಖಲೆ ನಿರ್ಮಿಸಿದೆ. ಸಿಲಿಕಾನ್ ಸಿಟಿಯಲ್ಲಿ ಇನ್ನೂ ಎರಡು-ಮೂರು ದಿನ ಇದೇ ರೀತಿ ಮಳೆಯ ಮುನ್ಸೂಚನೆ ಇದೆ ಎಂದರು.

ಸೆಪ್ಟೆಂಬರ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಈಗಾಗಲೇ ನಿನ್ನೆ ನಗರದಲ್ಲಿ 3 ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಕನಕಪುರ ರಸ್ತೆಯಲ್ಲಿನ ಅಂಜನಾಪುರದಲ್ಲಿ 206 ಮಿ.ಮೀ. ಮಳೆಯಾಗಿದೆ. ಇದು ಅತಿ ಹೆಚ್ಚು ಮಳೆಯಾಗಿರುವ ಪ್ರದೇಶ, ನಾವು ಊಹಿಸಿದ್ದಿಕ್ಕಿಂತಲೂ ಅಧಿಕ ಮಳೆಯಾಗಿದೆ ಎಂದರು.

ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಿಂದ ಎರಡೂ ಕಡೆಯ ತೇವಾಂಶ ಮಿಶ್ರಿತ ಗಾಳಿ ಒಂದೆಡೆ ಸೇರಿ ಗಾಳಿಯ ಒತ್ತಡದಿಂದ ಹೆಚ್ಚು ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲೂ ಕೂಡಾ ಹೆಚ್ಚು ಪ್ರಮಾಣದ ಮಳೆಯಾಗಿರುವ ದಾಖಲೆಯಾಗಿದೆ ಎಂದರು. (ದಿಗ್ವಿಜಯ ನ್ಯೂಸ್​)