ಜಾರಕಿಹೊಳಿ ಬ್ರದರ್ಸ್​ ಅಸಮಾಧಾನಕ್ಕೆ ನಾವು ಬಗ್ಗಲ್ಲ: ಡಿಸಿಎಂ ಎಚ್ಚರಿಕೆ

ಬೆಂಗಳೂರು: ಕಾಂಗ್ರೆಸ್ 132 ವರ್ಷದಿಂದ ಏಳು-ಬೀಳು ನೋಡುತ್ತಾ ಬಂದಿದೆ. ಅವರಿಗೆ ಏನಾದರು ಅಸಮಾಧಾನ ಇದ್ದರೆ, ನನ್ನ ಬಳಿ, ಸಿಎಂ ಬಳಿ ಅಥವಾ ಪಕ್ಷದ ವರಿಷ್ಠರ ಬಳಿ ಬಂದು ಹೇಳಲಿ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್​ ಅವರು ಜಾರಕಿಹೊಳಿ ಬ್ರದರ್ಸ್​ಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಗಣೇಶ ಹಬ್ಬದ ಪ್ರಯುಕ್ತ ಬುಧವಾರ ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡರ ಪದ್ಮನಾಭನಗರದ ನಿವಾಸಕ್ಕೆ ಭೇಟಿ ನೀಡಿ ಶುಭಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಾರಕಿಹೊಳಿ ಬ್ರದರ್ಸ್​ ಅಸಮಾಧಾನಕ್ಕೆ ನಾವು ಬಗ್ಗಲ್ಲ. ಕಡಿವಾಣ ಹಾಕುತ್ತೇವೆ. ಈ ಸಮಸ್ಯೆಯನ್ನು ಆದಷ್ಟು ಬೇಗ ಸರಿ ಮಾಡುತ್ತೇವೆ ಎಂದು ತಿಳಿಸಿದರು.

ರಾಜಕೀಯಕ್ಕೆ ಅವರು ಕೈ ಹಾಕಿಲ್ಲ
ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ವಿಚಾರ ಬೆಳಗಾವಿಯಲ್ಲಿ ಪಕ್ಷದ ಕಚೇರಿ ಕಟ್ಟಲು ಡಿಕೆಶಿಗೆ ಜವಾಬ್ದಾರಿ ನೀಡಿದ್ದೆವು. ಆಗ ಡಿಕೆಶಿ ಹೋಗಿ ಬರುತ್ತಿದ್ದರು. ಆದರೆ, ಬೆಳಗಾವಿ ರಾಜಕೀಯಕ್ಕೆ ಅವರು ಕೈ ಹಾಕಿಲ್ಲ. ಪಕ್ಷದ ಬೆಳವಣಿಗೆ ಹಾಗೂ ಇಲಾಖೆಯ ಕೆಲಸದಲ್ಲಿ ಹಸ್ತಕ್ಷೇಪ ಮಾಡಿರಬಹುದು. ಅಂತಹ ಸಮಸ್ಯೆ ಇದ್ದರೆ ನಾವು ಸರಿಪಡಿಸುತ್ತೇವೆ. ಇದೆಲ್ಲ ಪಕ್ಷದ ಆಂತರಿಕ ವಿಚಾರ. ಎಲ್ಲವನ್ನ ಪರಿಹಾರ ಮಾಡೋಣ ಎಂದು ಡಿಕೆಶಿ ಪರ ಬ್ಯಾಟ್​ ಬೀಸಿದರು.

ರಾಜಕೀಯ ಚರ್ಚೆ ಆಗಿಲ್ಲ
ಮಾಜಿ ಪ್ರಧಾನಿ ಹೆಚ್​ಡಿಡಿ ಅವರಿಗೆ ಗಣೇಶ ಹಬ್ಬದ ಶುಭಾಶಯ ಕೋರಲು ಬಂದಿದ್ದೆ. ನೀವು ಅಂದುಕೊಂಡ ಹಾಗೆ ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ. ಮಾಧ್ಯಮಗಳು ಊಹಾಪೋಹದ ಸುದ್ದಿ ಪ್ರಕಟಿಸುತ್ತಿವೆ. ಸರ್ಕಾರ ಸುಭದ್ರವಾಗಿದೆ. ಯಾವುದೇ ಬೆಳವಣಿಗೆಗಳು ಆಗಿಲ್ಲ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)