ಅಂಗಡಿ, ಮಾಲ್​ಗಳಲ್ಲಿ ಇಡುವ ದೇಣಿಗೆ ಡಬ್ಬಾಗಳ ಹಿಂದಿದೆ ಕರಾಳ ಸತ್ಯ!

ಬೆಂಗಳೂರು: ಅನಾಥ ಮಕ್ಕಳ ಪೋಷಣೆಗಾಗಿ ಹಲವು ಎನ್​ಜಿಓಗಳು ಸಾರ್ವಜನಿಕ ಪ್ರದೇಶಗಳಲ್ಲಿ ದೇಣಿಗೆ ಡಬ್ಬವನ್ನು​ ಇಟ್ಟಿವೆ. ಜನರು ಹಾಕುವ ಹಣದಿಂದ ಮಕ್ಕಳನ್ನು ಪೋಷಣೆ ಮಾಡುತ್ತಾರೆ ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪು. ಎನ್​ಜಿಓಗಳ ಹೆಸರಿನಲ್ಲಿ ಡೊನೇಷನ್​ ಬಾಕ್ಸ್​ ಇಡುವ ಕೆಲ ಖದೀಮರು ಅಲ್ಲಿ ಬೀಳುವ ಹಣವನ್ನೇ ದೋಚುವ ದೊಡ್ಡ ಜಾಲವೊಂದು ಹುಟ್ಟಿಕೊಂಡಿದ್ದು, ದಿಗ್ವಿಜಯ ನ್ಯೂಸ್​ ತನಿಖಾ ವರದಿಯಿಂದ ಬಯಲಾಗಿದೆ​.

ರಾಜ್ಯದೆಲ್ಲಡೆ ಬಾರ್​-ರೆಸ್ಟೋರೆಂಟ್​, ಮಾಲ್​ ಹಾಗೂ ಮೆಡಿಕಲ್​ ಸ್ಟೋರ್​ ಸೇರಿದಂತೆ ಮುಂತಾದ ಕಡೆ ದೇಣಿಗೆ ಡಬ್ಬ ಇಟ್ಟಿರುವುದನ್ನು ನೀವು ನೋಡಿರುತ್ತೀರಿ, ಅನಾಥಾಶ್ರಮದ ಬಗ್ಗೆ ಜನರಿಗೆ ಮಾಹಿತಿ ನೀಡಿ, ಹೃದಯವಂತರು ನೀಡುವ ಚಿಲ್ಲರೆ ದೇಣಿಗೆ ಪಡೆದು ಅನಾಥ ಮಕ್ಕಳ ಆರೈಕೆಗೆ ಬಳಸುವುದೇ ದೇಣಿಗೆ ಡಬ್ಬದ ಉದ್ದೇಶ.

ಆದರೆ, ಇದರ ಹಿಂದೆಯೂ ಮೋಸದ ಜಾಲ ಅಡಗಿದೆ ಎಂಬುದು ದಿಗ್ವಿಜಯ ನ್ಯೂಸ್​ ತನಿಖಾ ವರದಿಯಿಂದ ಬಹಿರಂಗವಾಗಿದೆ. ಸಿಲಿಕಾನ್​ ಸಿಟಿಯ ಬಹುತೇಕ ಅಂಗಡಿ, ಹೋಟೆಲ್​ಗಳಲ್ಲಿ ಬೀಗ ಹಾಕಿರುವ ದೇಣಿಗೆ ಡಬ್ಬಾಗಳು ಇರುತ್ತವೆ. ಈ ಡಬ್ಬಾಗಳ ರಹಸ್ಯವನ್ನು ಹುಡುಕಿಕೊಂಡು ಹೊರಟಾಗ, ಡಬ್ಬಾ ಇಟ್ಟಿರುವ ಎನ್​ಜಿಓಗಳನ್ನು ಬೆನ್ನಟ್ಟಿದಾಗ ಸ್ಫೋಟಕ ಸಂಗತಿ ಹೊರಬಿದ್ದಿದೆ.

ದೇಣಿಗೆ ಬಾಕ್ಸ್​ಗಳನ್ನು ಒಮ್ಮೆ ಸೂಕ್ಷ್ಮವಾಗಿ ಗುರುತಿಸಿ, ಪೂರ್ಣ ವಿಳಾಸದ ಒಂದು ಭಾಗವನ್ನು ಹರಿದು ಹಾಕಿರುತ್ತಾರೆ. ಜತೆಗೆ ಈ ದಂಧೆ ಮಾಡುವರು ಮೊಬೈಲ್​ ನಂಬರನ್ನಷ್ಟೇ ನಮೂದಿಸಿರುತ್ತಾರೆ. ತಿಂಗಳಿಗೊಮ್ಮೆ ಈ ಡೊನೇಷನ್​ ಬಾಕ್ಸ್​ಗಳು ತುಂಬಿಕೊಳ್ಳುತ್ತವೆ. ತುಂಬಿದ ಕೂಡಲೇ ಅಂಗಡಿಯವರು ಮಾಹಿತಿ ನೀಡುತ್ತಾರೆ. ಕಾರು- ಬೈಕ್​ನಲ್ಲಿ ಬರುವ ಕೆಲವು ಕಿರಾಕತರು ಹಣ ಪಡೆದು ಡಬ್ಬಾ ಅಲ್ಲಿಟ್ಟು ಪರಾರಿ ಆಗುತ್ತಾರೆ. (ದಿಗ್ವಿಜಯ ನ್ಯೂಸ್​)