ಕೇಬಲ್ ಬಂದ್​ಗೆ ಕೋರ್ಟ್ ತಡೆ

ಬೆಂಗಳೂರು: ಟ್ರಾಯ್ ನೀತಿ ವಿರೋಧಿಸಿ ಕರ್ನಾಟಕ ಕೇಬಲ್ ಟಿವಿ ಆಪರೇಟರ್​ಗಳ ಸಂಘ (ಕೆಎಸ್​ಸಿಒಎ) ಗುರುವಾರ(ಜ.24) ನಡೆಸಲು ಉದ್ದೇಶಿಸಿ ರುವ ಕೇಬಲ್ ಟಿವಿ ಬಂದ್​ಗೆ ನಗರ ಸಿವಿಲ್ ಕೋರ್ಟ್ ಬುಧವಾರ ನಿರ್ಬಂಧ ವಿಧಿಸಿದೆ. ಹೀಗಾಗಿ ರಾಜ್ಯದಲ್ಲಿ ಕೇಬಲ್ ಸಂಪರ್ಕ ಕಡಿತವಾಗುವುದು ಅನುಮಾನವಾಗಿದೆ.

ಜ.24ರಂದು ಕರೆ ನೀಡಲಾಗಿದ್ದ ಬಂದ್​ಗೆ ತಡೆ ನೀಡುವಂತೆ ಕೋರಿ ದಕ್ಷಿಣ ಭಾರತ ಗ್ರಾಹಕ ಸಂಘಗಳ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನಗರದ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ, ಕೆಎಸ್​ಸಿಒಎ ಮತ್ತದರ ಏಜೆಂಟರು ಹಾಗೂ ಪ್ರತಿನಿಧಿಗಳು ಕೇಬಲ್ ಪ್ರಸಾರ ಸ್ಥಗಿತಗೊಳಿಸದಂತೆ ಏಕಪಕ್ಷೀಯವಾಗಿ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.

ಇದೇ ವೇಳೆ, ಕೆಎಸ್​ಸಿಒಎಗೆ ತುರ್ತು ನೋಟಿಸ್ ಜಾರಿಗೊಳಿಸಿದ ನ್ಯಾಯಾಲಯ, ವಿಚಾರಣೆಯನ್ನು ಫೆ. 23ಕ್ಕೆ ಮುಂದೂಡಿತು. ಕೆಬೇಲ್ ಪ್ರಸಾರ ಸ್ಥಗಿತಗೊಳಿಸುವುದರಿಂದ ರಾಜ್ಯದ 60 ಲಕ್ಷಕ್ಕೂ ಅಧಿಕ ಗ್ರಾಹಕರಿಗೆ ತೊಂದರೆಯಾಗಲಿದೆ. ಗ್ರಾಹಕರ ಹಿತದೃಷ್ಟಿಯಿಂದ ಬಂದ್​ಗೆ ತಡೆ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ದಕ್ಷಿಣದಲ್ಲಿ ಪ್ರತಿಭಟನೆ: ಟ್ರಾಯ್ ಹೊಸ ನೀತಿ ವಿರೋಧಿಸಿ ದಕ್ಷಿಣ ಭಾರತದಾದ್ಯಂತ ಗುರುವಾರ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಕೇಬಲ್ ಬಂದ್ ಮಾಡಲು ಆಪರೇಟರ್​ಗಳ ಸಂಘ ಕರೆಕೊಟ್ಟಿತ್ತು.

ಸುಪ್ರೀಂಕೋರ್ಟ್​ಗೆ ದಾವೆ: ಟ್ರಾಯ್ ನೀತಿ ಖಂಡಿಸಿ ಟಾಟಾ ಸ್ಕೈ ಮತ್ತು ಡಿಟಿಎಚ್ ಸಂಸ್ಥೆಗಳು ಈಗಾಗಲೇ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಜ.28ರಂದು ವಿಚಾರಣೆಗೆ ಬರಲಿದೆ. ಶೇ.5 ಮನರಂಜನೆ ತೆರಿಗೆ ಇದೆ. ಆದರೆ, ಮನೆಯಲ್ಲೇ ಕುಳಿತು ಟಿವಿ ವೀಕ್ಷಿಸುವವರಿಗೆ ಶೇ.18 ತೆರಿಗೆ ವಿಧಿಸಿರುವುದು ಏಕೆ? ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಮಾಡಿರುವ ಟ್ರಾಯ್, ಜ.31ರೊಳಗೆ ನಮ್ಮ ಸಮಸ್ಯೆ ಬಗೆಹರಿಸದಿದ್ದರೆ ಫೆ.1ರಿಂದ ಕೇಬಲ್ ಸ್ಥಗಿತಗೊಳಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.