ಬೆಂಗಳೂರು: ಬಡ್ತಿ, ವರ್ಗಾವಣೆಗೆ ದೊಡ್ಡ ಅಡ್ಡಿಯಾಗಿರುವ ವೃಂದ ಮತ್ತು ನೇಮಕ ನಿಯಮ 2017ಕ್ಕೆ ತಿದ್ದುಪಡಿ ಮಾಡಿ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆ.12 ಕ್ಕೆ ಬೆಂಗಳೂರು ಚಲೋ ಹಮ್ಮಿಕೊಂಡಿದೆ.
ಈ ಬೃಹತ್ ಪ್ರತಿಭಟನೆ ಅಂಗವಾಗಿ ಆ.1 ರಿಂದಲೇ ವಿವಿಧ ಸ್ವರೂಪದ ಹೋರಾಟಗಳನ್ನು ನಡೆಸುತ್ತಿದೆ. ರಾಜ್ಯಾದ್ಯಂತ ಬಾಧಿತ 1 ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಿಕ್ಷಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
ಆ. 5ರಂದು ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಶಿಕ್ಷಕರಿಗೆ ಆಗಿರುವ ಅನ್ಯಾಯ ಕುರಿತು ಆಯಾ ಕ್ಷೇತ್ರದ ಶಾಸಕರು, ತಹಸೀಲ್ದಾರರು, ಬಿಇಒಗಳಿಗೆ ಪತ್ರ ನೀಡಿ ಹೋರಾಟಕ್ಕೆ ಬೆಂಬಲ ಕೋರಲಿದ್ದಾರೆ.
ಆ.7 ರಂದು ತಮ್ಮ ಬೇಡಿಕೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಡಿಡಿಪಿಐಗಳಿಗೆ ಮಾಹಿತಿ ನೀಡಲಿದ್ದಾರೆ. ಬಳಿಕ ಆ.12 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಕೆ.ನಾಗೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.
ಶಿಕ್ಷಕರ ಬೇಡಿಕೆಗಳೇನು..?
-2017ರ ವರೆಗೆ ನೇಮಕವಾದ ಶಿಕ್ಷಕರನ್ನು 1-7ನೆ ತರಗತಿಗೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಬೇಕು. 2017ರ ಸಿ ಅಂಡ್ ಆರ್ ರೂಲ್ಸ್‌ನ್ನು ಪೂರ್ವಾನ್ವಯಗೊಳಿಸಬಾರದು.
-2017ರ ಸಿ ಅಂಡ್ ಆರ್ ನಿಯಮಗಳು 2016ರ ಕ್ಕಿಂತ ಮುಂಚೆ ನೇಮಕ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲವೆಂದು ಕಾರ್ಯಾದೇಶ ಹೊರಡಿಸಬೇಕು.
-ಮೂಲತಃ 1-7/8ಕ್ಕೆ ನೇಮಕಗೊಂಡವರನ್ನು ಪಿಎಸ್‌ಟಿ ಎಂದು ಪದನಾಮ ಮಾಡಿ 1-5ಕ್ಕೆ ಸೀಮಿತಗೊಳಿಸಿರುವುದನ್ನು ಹಿಂಪಡೆಯಬೇಕು.
-ಅರ್ಹ ವಿದ್ಯಾರ್ಹತೆ ಪೂರೈಸಿದ 2016ಕ್ಕಿಂತ ಮೊದಲು ನೇಮಕಗೊಂಡವರಿಗೆ
ಹಿಂದಿನಂತೆ ಅರ್ಹತೆ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು.
-ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಪೂರ್ವದಂತೆ ಮುಖ್ಯ ಶಿಕ್ಷಕರು ಹಾಗೂ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಸೇವಾ ಜೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಬೇಕು.
-ಅರ್ಹ ವಿದ್ಯಾರ್ಹತೆ ಹೊಂದಿದ 2016ಕ್ಕಿಂತ ಮೊದಲು ನೇಮಕಗೊಂಡಿರುವ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ ಸೇವಾ ಜೇಷ್ಠತೆಯ ರಕ್ಷಣೆಯೊಂದಿಗೆ ಬಡ್ತಿ ನೀಡಬೇಕು.