ಛಲವಾದಿಪಾಳ್ಯ ವಾರ್ಡ್​ನಲ್ಲಿಂದು ಜನತಾದರ್ಶನ

ಬೆಂಗಳೂರು: ಮೈಸೂರು ಅರಸರ ಹೆಸರಿನಲ್ಲಿ ಕರೆಯಲ್ಪಡುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಲಿನಲ್ಲಿದೆ ಛಲವಾದಿಪಾಳ್ಯ ವಾರ್ಡ್. ಇಕ್ಕಟ್ಟಾದ ಪ್ರದೇಶ. ಸಣ್ಣ ಪುಟ್ಟ ಮನೆಗಳಲ್ಲಿ ಬದುಕು ಕಟ್ಟಿಕೊಂಡಿರುವ ಬಡವರೇ ಇಲ್ಲಿ ಜಾಸ್ತಿ. ಪ್ರತಿಷ್ಠಿತ ಕ್ಷೇತ್ರದ ವ್ಯಾಪ್ತಿಯಲ್ಲಿದರೂ ಸಾಕಷ್ಟು ಮೂಲ ಸೌಕರ್ಯವಿಲ್ಲದೆ ಹಿಂದುಳಿದ ವಾರ್ಡ್ ಎನಿಸಿದೆ. ಇಂದಿಗೂ ಬಹುತೇಕ ಮನೆಗಳಲ್ಲಿ ರುಬ್ಬು ಗುಂಡು ಗಳನ್ನೆ ಅಲವಂಬಿಸಿರುವ ಕೊಳೆ ಗೇರಿಗಳು ಛಲವಾದಿಪಾಳ್ಯ ವಾರ್ಡ್​ನಲ್ಲಿ ಕಂಡುಬರುತ್ತವೆ. ಬಹುಪಾಲು ಹಿಂದುಳಿದ ಜನರೇ ನೆಲೆಸಿರುವ ವಾರ್ಡ್​ನಲ್ಲಿ ದೊರೆಸ್ವಾಮಿನಗರ, ಆಂಜನಪ್ಪ ಲೇಔಟ್, ಸಿದ್ದಾರ್ಥನಗರ, ಗಿರಿಪುರ, ಮಂಕಿ ಕಾಲನಿ, ಜೈ ಭೀಮ್ಗರ, ಸಂಪಂಗಿ ಲೇನ್ ಸೇರಿ ಕೊಳೆಗೇರಿಗಳ ಸಂಖ್ಯೆಯೇ ಅಧಿಕವಿದೆ.

ವಾರ್ಡ್​ನಲ್ಲಿ ಶ್ರಮಜೀವಿಗಳು ಹೆಚ್ಚಾಗಿದ್ದರೂ, ಬಹುತೇಕರು ಅನಕ್ಷರಸ್ಥರು. ಅದರಲ್ಲೂ ವಲಸಿಗರ ಸ್ವರ್ಗ ಎನಿಸಿರುವ ವಾರ್ಡ್​ನಲ್ಲಿ ತಮಿಳು ಹಾಗೂ ತೆಲುಗು ಭಾಷಿಕರ ಪ್ರಾಬಲ್ಯವಿದೆ. ಜತೆಗೆ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಮುದಾಯಕ್ಕೂ ವಾರ್ಡ್ ನೆಲೆ ಕಲ್ಪಿಸಿದೆ.

ಸಮಸ್ಯೆ ಪರಿಹಾರಕ್ಕೆ ವೇದಿಕೆ

ವಾರ್ಡ್​ನಲ್ಲಿ ಕುಡಿವ ನೀರು, ಕಸ ವಿಲೇವಾರಿ, ರಸ್ತೆ ಅವ್ಯವಸ್ಥೆ, ಒಳಚರಂಡಿ ಸಮಸ್ಯೆ ಸೇರಿ ನಾಗರಿಕ ಮೂಲ ಸೌಕರ್ಯಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ‘ಜನತಾದರ್ಶನ’ದ ಮೂಲಕ ವೇದಿಕೆ ಕಲ್ಪಿಸಿದೆ. ನಾಗರಿಕರ ಕುಂದುಕೊರತೆಗಳನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಅನಾವರಣಗೊಳಿಸುವ ಹಾಗೂ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸತತ 6 ವರ್ಷಗಳಿಂದ ನಗರದ ವಿವಿಧ ವಾರ್ಡ್​ಗಳಲ್ಲಿ ಯಶಸ್ವಿಯಾಗಿ ಜನತಾದರ್ಶನ ನಡೆದಿದ್ದು, ಈ ಸಲ ಛಲವಾದಿಪಾಳ್ಯ ವಾರ್ಡ್​ನಲ್ಲಿ ಇಂದು ಸೆ.22ರ ಬೆಳಗ್ಗೆ 10 ಗಂಟೆಗೆ ಆಯೋಜನೆಗೊಂಡಿದೆ. ಲೋಕಸಭಾ ಸದಸ್ಯ ಪಿ.ಸಿ. ಮೋಹನ್ ಹಾಗೂ ಪಾಲಿಕೆ ಸದಸ್ಯೆ ರೇಖಾ ಕದಿರೇಶ್ ನೇತೃತ್ವದಲ್ಲಿ ಬಿಬಿಎಂಪಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ನಾಗರಿಕರು ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳಲು ಇದು ಸಹಕಾರಿಯಾಗಲಿ ಎಂಬುದು ಕಾರ್ಯಕ್ರಮದ ಆಶಯ.

ನಿರಂತರ ಫಾಲೋಅಪ್

ವಾರ್ಡ್ ಮಟ್ಟದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವುದು ಜನತಾದರ್ಶನದ ಪ್ರಮುಖ ಉದ್ದೇಶ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕಿವಿಯಾಗುವುದಷ್ಟೆ ಅಲ್ಲದೆ, ಸ್ಥಳದಲ್ಲೇ ಅವುಗಳ ಪರಿಹಾರಕ್ಕೆ ಪ್ರಯತ್ನ ನಡೆಸಲಿದ್ದಾರೆ. ಕಾರ್ಯಕ್ರಮ ಮುಕ್ತಾಯದ ಬಳಿಕ ಸಮಸ್ಯೆಗಳು ಬಗೆಹರಿದಿದೆಯೋ ಇಲ್ಲವೋ ಎಂಬುದನ್ನು ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ವಾಹಿನಿ ತಂಡ ನಿರಂತರ ಫಾಲೋಅಪ್ ಮೂಲಕ ಸಾರ್ವಜನಿಕರ ಅವಗಾಹನೆಗೆ ತರಲಿದೆ.

ಆಕರ್ಷಕ ಬಹುಮಾನ

ಜನತಾದರ್ಶನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಲಕ್ಕಿ ಕೂಪನ್ ನೀಡಲಾಗುತ್ತದೆ. ಕಾರ್ಯಕ್ರಮದ ಕೊನೆಯಲ್ಲಿ ಲಕ್ಕಿ ಡ್ರಾ ಮೂಲಕ ಐವರು ವಿಜೇತರಿಗೆ ಆಕರ್ಷಕ ಬಹುಮಾನವನ್ನು ವಿತರಿಸಲಾಗುತ್ತದೆ.

ವಾರ್ಡ್ ವ್ಯಾಪ್ತಿ ಬಡಾವಣೆಗಳು

ಆಂಜನಪ್ಪ ಗಾರ್ಡನ್, ಛಲವಾದಿಪಾಳ್ಯ, ದೊರೆಸ್ವಾಮಿನಗರ, ಗಿರಿಪುರ, ಮಂಕಿ ಕಾಲನಿ, ಜೈಭೀಮ್ಗರ, ಸಂಪಂಗಿ ಲೇನ್,

ಠಾಣಾ ವ್ಯಾಪ್ತಿ: ಕಾಟನ್​ಪೇಟೆ ಪೊಲೀಸ್ ಠಾಣೆ, ಚಾಮರಾಜಪೇಟೆ ಸಂಚಾರ ಪೊಲೀಸ್ ಠಾಣೆ.

ಮುಖದಲ್ಲಿ ಮಂದಹಾಸ

‘ವಿಜಯವಾಣಿ’ ಜನತಾದರ್ಶನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಮೂಲಕ ತೊಂದರೆಗೊಳಗಾದವರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ. ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗುತ್ತಿದೆ.

ಕಸ ವಿಲೇವಾರಿ, ಬ್ಲ್ಯಾಕ್​ಸ್ಪಾಟ್​ಗಳಿಗೆ ಮುಕ್ತಿ

ವಾರ್ಡ್​ನಲ್ಲಿ ಇತ್ತೀಚೆಗೆ ಅಭಿವೃದ್ಧಿ ಕಾರ್ಯಗಳು ಚುರುಕುಗೊಂಡಿವೆ. ಕಸ ವಿಲೇವಾರಿ ಸಮಸ್ಯೆಯಿದ್ದ ವಾರ್ಡ್​ನಲ್ಲಿ ಇದೀಗ ಸ್ವಚ್ಛತೆ ಅರಿವು ಮೂಡುತ್ತಿದೆ. ಇದಕ್ಕೆ ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ್ ಯೋಜನೆ ಸ್ಪೂರ್ತಿಯಾಗಿದೆ. ಪೌರ ಕಾರ್ವಿುಕರ ಕೊರತೆಯಿಂದ ಕೆಲವು ಕಸದ ಬ್ಲ್ಯಾಕ್​ಸ್ಪಾಟ್​ಗಳಿಗೆ ಮುಕ್ತಿ ಸಿಕ್ಕಿಲ್ಲ. ರಾಜಕಾಲುವೆ ಮೇಲೆ ಯದ್ವಾತದ್ವಾ ನಿರ್ವಣವಾದ ಕಟ್ಟಡಗಳಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ. ಜತೆಗೆ ಹಳ್ಳಕೊಳ್ಳಗಳಿಂದ ಆವೃತವಾಗಿರುವ ರಸ್ತೆಗಳು ದ್ವಿಚಕ್ರ ವಾಹನ ಸವಾರರ ತಾಳ್ಮೆ ಪರೀಕ್ಷಿಸುತ್ತವೆ.

ಮೂಲಸೌಕರ್ಯ ಕೊರತೆ

ಪ್ರಮುಖವಾಗಿ ಜೈಭೀಮ್ಗರ ರಾಜಕಾಲುವೆಯಿಂದ ಮನೆಗಳಿಗೆ ನೀರು ನುಗ್ಗುವ ಅವ್ಯವಸ್ಥೆ ನಾಗರಿಕ ನಿದ್ರೆ ಕೆಡಿಸಿದೆ. ಮೊದಲೇ ಬಹಳ ಕಿರಿದಾದ ರಾಜಕಾಲುವೆ ಒತ್ತುವರಿಗೊಂಡು ಮನೆಗಳಿಗೆ ನೀರು ನುಗ್ಗುವ ಸಮಸ್ಯೆ ಎದುರಾಗಿದೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪ. ಅಲ್ಲದೆ ಹಳೆಯ ಒಳಚರಂಡಿ ಪೈಪ್​ಗಳು ಒತ್ತಡ ಹೆಚ್ಚಾಗಿ ಅಲ್ಲಲ್ಲಿ ಮ್ಯಾನ್​ಹೋಲ್​ಗಳು ಕಟ್ಟಿಕೊಂಡು ರಸ್ತೆಯಲ್ಲಿ ಮಲಿನ ನೀರು ಉಕ್ಕುವುದು ಮರುಕಳಿಸುತ್ತಿದೆ.

ಯಾರ್ಯಾರು ಇರುತ್ತಾರೆ?

# ಸಂಸದ ಪಿ.ಸಿ. ಮೋಹನ್ # ಪಾಲಿಕೆ ಸದಸ್ಯೆ ರೇಖಾ ಕದಿರೇಶ್ # ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳು

ಅಕ್ರಮ ಚಟುವಟಿಕೆ ತಾಣ

ವಾರ್ಡ್​ನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚು ಕೇಳಿಬರುತ್ತವೆ. ಇತ್ತೀಚಿಗೆ ಇಂಥ ಚಟುವಟಿಕೆಗಳಿಗೆ ಸಾಕಷ್ಟು ಕಡಿವಾಣ ಬಿದ್ದಿದೆ ಎನ್ನುತ್ತಾರೆ ಸ್ಥಳೀಯರು. ಪ್ರಮುಖವಾಗಿ ಗಾಂಜಾ ಮಾರಾಟ ಹಾಗೂ ಸೇವನೆಗೆ ಕಡಿವಾಣ ಬಿದ್ದಿಲ್ಲ. ಚಿಕ್ಕ ಮಕ್ಕಳನ್ನು ಇಂಥ ಚಟುವಟಿಕೆಗಳಿಗೆ ಬಳಸುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಇಲ್ಲಿನ ಕಿರಿದಾದ ಪ್ರದೆೇಶಗಳು ರಾತ್ರಿ ವೇಳೆ ಮಾದಕ ವ್ಯಸನಿಗಳ ಅಡ್ಡೆಯಾಗಿ ಬಳಕೆಯಾಗುತ್ತದೆ ಎಂಬುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕಾಟನ್​ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುತ್ತದೆ.

ಪಾಲಿಕೆ ಸದಸ್ಯರ ಪರಿಚಯ

ಬಿಜೆಪಿಯಿಂದ ಸ್ಪರ್ಧಿಸಿ ಎರಡನೇ ಬಾರಿಗೆ ರೇಖಾ ಕದಿರೇಶ್ ಕಾಪೋರೇಟರ್ ಆಗಿ ಆಯ್ಕೆಯಾಗಿದ್ದಾರೆ. ಇವರ ಪತಿ ದಿವಂಗತ ಕದಿರೇಶ್ ಹಿಂದಿನಿಂದಲೂ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಂದಿದ್ದರು. ಅವರ ನಿಧನದ ನಂತರ ನಡೆದ ಉಪ ಚುನಾವಣೆಯಲ್ಲಿ ರೇಖಾ ಅವರಿಗೆ ಮತದಾರರು ಅಧಿಕಾರ ನೀಡಿದರು. ಅಭಿವೃದ್ಧಿ ದೃಷ್ಟಿಯಲ್ಲಿ ಹಿಂದುಳಿದಿರುವ ವಾರ್ಡ್​ನಲ್ಲಿ ಕಸ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ರೇಖಾ ಆದ್ಯತೆ ನೀಡುತ್ತಿದ್ದಾರೆ. ಕಾವೇರಿ ನೀರು ಸಂಪರ್ಕ ಕಲ್ಪಿಸಲಾಗಿದೆ. ಶೌಚಗೃಹ ನಿರ್ವಣ, 118 ಬಡವರಿಗೆ ಒಂಟಿ ಮನೆ ನಿರ್ವಿುಸಿಕೊಡಲಾಗಿದೆ. ವಾರ್ಡ್​ನ ಬಹುತೇಕ ಕೊಳೆಗೇರಿಗಳಲ್ಲಿ ಕಸ ವಿಲೇವಾರಿ, ಸ್ವಚ್ಛತೆ ಕಾಪಾಡುವುದು ಸೇರಿ ಅಭಿವೃದ್ಧಿ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಕದಿರೇಶ್ ಅವರ ಕನಸಾಗಿದ್ದ ಅಂಬೇಡ್ಕರ್ ಸಮುದಾಯ ಭವನ ನಿರ್ವಣಗೊಂಡಿದ್ದು, ಉದ್ಘಾಟನೆ ಹಂತದಲ್ಲಿದೆ. ವಾರ್ಡ್ ಅಭಿವೃದ್ಧಿಗೆ ಸರ್ಕಾರ ಹಾಗೂ ಬಿಬಿಎಂಪಿ ಅನುದಾನ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಸಾಧ್ಯವಾಗುತ್ತಿಲ್ಲ ಎಂದು ರೇಖಾ ದೂರುತ್ತಾರೆ. ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಲೇಖನ ಸಾಮಗ್ರಿ ವಿತರಣೆ, ಶಾಲಾ ಮಕ್ಕಳಿಗೆ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಾಗಾರ, ನೇತ್ರ ತಪಾಸಣೆ ಸೇರಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಆಯೋಜಿಸಲಾಗುತ್ತಿದೆ. ನಿರ್ಗತಿಕರಿಗೆ, ಬಡವರಿಗೆ ಶ್ರದ್ಧಾಂಜಲಿ ವಾಹನದ ಉಚಿತ ಸೇವೆ, ಅಂಧ, ಬಡ ಕೂಲಿ ಕಾರ್ವಿುಕರಿಗೆ ಉಚಿತವಾಗಿ ಅಕ್ಕಿ ಮತ್ತು ಬಟ್ಟೆ ವಿತರಣೆ, ಆಟೋ ಚಾಲಕರಿಗೆ ಸಮವಸ್ತ್ರ ಮತ್ತಿತರ ಸಾಮಾಜಿಕ ಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ.