ಮನೆ ಒಡೆದರೂ ಪರಿಹಾರ ನೀಡಲಿಲ್ಲ: ರಾಜಕಾಲುವೆ ಒತ್ತುವರಿ ತೆರವಾಗಿ 3 ವರ್ಷ, ಬಿಬಿಎಂಪಿ ವಿಳಂಬ ಧೋರಣೆ

| ಗಿರೀಶ್ ಗರಗ ಬೆಂಗಳೂರು

ಮಳೆ ಪ್ರವಾಹ ತಡೆಯಲು 2016ರ ಆಗಸ್ಟ್​ನಲ್ಲಿ ಬಿಬಿಎಂಪಿ ನಡೆಸಿದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಎಂಬ ಪ್ರಹಸನದಿಂದಾಗಿ ನೂರಾರು ಜನರು ಬೀದಿಗೆ ಬೀಳುವಂತಾಗಿತ್ತು. ತೆರವು ಮಾಡಲಾದ ಸ್ಥಳಗಳಲ್ಲಿ ರಾಜಕಾಲುವೆ ನಿರ್ಮಾಣ ಮಾಡಲು ಬಿಬಿಎಂಪಿಗೆ ಇದುವರೆಗೂ ಸಾಧ್ಯವಾಗಿಲ್ಲ. ಹೀಗಾಗಿ ತೆರವು ಕಾರ್ಯಾಚರಣೆ ಮಾಡಿಯೂ ಪ್ರಯೋಜನವಿಲ್ಲದಂತಾಗಿದೆ.

ಕಳೆದ ಮೂರು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ಅರ್ಧ ಬೆಂಗಳೂರು ಮುಳುಗುವಂತಾಗಿತ್ತು. ರಾಜಕಾಲುವೆ ಒತ್ತುವರಿಯಿಂದ ಪ್ರವಾಹ ಉಂಟಾಗುತ್ತಿದ್ದು, ತೆರವು ಕಾರ್ಯಾಚರಣೆ ನಡೆಸುವಂತೆ ಬಿಬಿಎಂಪಿಗೆ ರಾಜ್ಯ ಸರ್ಕಾರ ಸೂಚಿಸಿತ್ತು. ಅದರಂತೆ ನಗರದ ಹಲವು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ 130 ಕಟ್ಟಡಗಳು, 118 ಖಾಲಿ ಜಾಗಗಳಲ್ಲಿನ ಒತ್ತುವರಿ ತೆರವು ಮಾಡಿ ಜಾಗ ವಶಕ್ಕೆ ಪಡೆದಿತ್ತು. ಹೀಗೆ ವಶಕ್ಕೆ ಪಡೆದ ನಂತರ ಅವನಿ ಶೃಂಗೇರಿನಗರದಲ್ಲಿ ರಾಜಕಾಲುವೆ ಮರು ನಿರ್ಮಾಣ ಮಾಡಲಾಗಿದೆ. ಉಳಿದೆಡೆ ನ್ಯಾಯಾಲಯದಲ್ಲಿ ದಾವೆಗಳಿವೆ ಎಂಬ ನೆಪವೊಡ್ಡಿ, ಅರ್ಧಂಬರ್ಧ ಕಾಲುವೆ ನಿರ್ವಿುಸಲಾಗಿದೆ.

ಬಲಾಢ್ಯರಿಗೆ ಮಣೆ: ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದಾಗ ಅತಿ ಹೆಚ್ಚು ಮನೆಗಳನ್ನು ಒಡೆದ ಸ್ಥಳಗಳಲ್ಲಿ ಆವನಿ ಶೃಂಗೇರಿನಗರವೂ ಒಂದು. ಇಲ್ಲಿ 15ಕ್ಕೂ ಹೆಚ್ಚಿನ ಕಟ್ಟಡಗಳನ್ನು ಒಡೆದು ಜಾಗ ವಶಕ್ಕೆ ಪಡೆಯಲಾಗಿದೆ. ಆರಂಭದಲ್ಲಿ 10 ಅಡಿಗೂ ಹೆಚ್ಚಿನ ಜಾಗವನ್ನು ವಶಕ್ಕೆ ಪಡೆಯಲಾಯಿತು. ಆದರೆ, ಅದೇ ಮಾರ್ಗದಲ್ಲಿ ಮುಂದೆ ಅಪಾರ್ಟ್ ಮೆಂಟ್​ಗಳು ಬರುವೆಡೆ ತೆರವು ಕಾರ್ಯಾಚರಣೆ ಮಾಡಲಿಲ್ಲ. ಅದರ ಬದಲು ಅಪಾರ್ಟ್​ವೆುಂಟ್ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ರಾಜಕಾಲುವೆ ನಿರ್ವಿುಸಲಾಗಿದೆ. ಆಮೂಲಕ ರಾಜಕಾಲುವೆ ಮರು ನಿರ್ವಣದಲ್ಲೂ ತಾರತಮ್ಯ ಮಾಡಲಾಗಿದೆ. ಮೊದಲು ಅಗಲವಾಗಿ ರಾಜಕಾಲುವೆ ನಿರ್ವಿುಸಿ ಕ್ರಮೇಣ ರಾಜಕಾಲುವೆ ಅಗಲ ಕಿರಿದು ಮಾಡಲಾಗಿದೆ. ಆ ಮೂಲಕ ಬಲಾಢ್ಯರ ಒತ್ತಡಕ್ಕೆ ಮಣಿಯಲಾಗಿದೆ.

130 ಕಟ್ಟಡ ತೆರವು

ಬಿಬಿಎಂಪಿ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 130 ಕಟ್ಟಡ ಗಳನ್ನು ತೆರವುಗೊಳಿಸಲಾಗಿದೆ.ಉಳಿದಂತೆ 118 ಖಾಲಿ ಜಾಗ ಗಳನ್ನು ವಶಕ್ಕೆ ಪಡೆದಿದ್ದಾರೆ.

ಪರಿಹಾರವೂ ಸಿಕ್ಕಿಲ್ಲ

ಅವನಿ ಶೃಂಗೇರಿನಗರದಲ್ಲಿ ಮನೆ ಕಳೆದುಕೊಂಡ 13 ಜನರಿಗೆ ಒಂಟಿ ಮನೆ ಯೋಜನೆ ಅಡಿಯಲ್ಲಿ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಬಿಬಿಎಂಪಿ ಘೋಷಿಸಿತ್ತು. ಅದರಲ್ಲಿ 7ರಿಂದ 8 ಜನರಿಗೆ ಈವರೆಗೆ ಪರಿಹಾರ ನೀಡಲಾಗಿದೆ. ಉಳಿದವರಿಗೆ ಈವರೆಗೂ ನೀಡಿಲ್ಲ. ಆ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯರನ್ನು ಕೇಳಿದರೆ, ಪರಿಹಾರಕ್ಕೆ ನೀಡುವ ದಾಖಲೆಗಳು ಸರಿಯಿಲ್ಲ. ಹೀಗಾಗ ಪರಿಹಾರ ನೀಡಿಲ್ಲ ಎಂಬ ಉತ್ತರ ಹೇಳುತ್ತಾರೆ.

ಮನೆಗೆ ಮಳೆ ನೀರು ನುಗ್ಗುವ ಭೀತಿ

ರಾಜಕಾಲುವೆ ಮರು ನಿರ್ಮಾಣ ಮಾಡಿ ಅದನ್ನು ಮುಚ್ಚಲಾಗಿದೆ. ಹೀಗಾಗಿ ಮಳೆ ನೀರು ರಾಜಕಾಲುವೆಗೆ ಸೇರುವ ಯಾವುದೇ ಅವಕಾಶವಿಲ್ಲ. ಹೀಗಾಗಿ ಮಳೆ ಹೆಚ್ಚಾಗಿ ಬಂದರೆ, ಆ ನೀರು ಕೆಲವೆಡೆ ಮನೆಗಳಿಗೆ ನುಗ್ಗುವ ಸ್ಥಿತಿಯಿದೆ.

11.21 ಎಕರೆ ವಶ

ಬಿಬಿಎಂಪಿ ದಾಖಲೆ ಪ್ರಕಾರ ಒಟ್ಟು 1,953 ಕಡೆಗಳಲ್ಲಿ ಒತ್ತುವರಿ ಗುರುತಿಸಲಾಗಿತ್ತು. ಅವುಗಳಲ್ಲಿ 2016ರ ಆಗಸ್ಟ್ 5ಕ್ಕೂ ಮುಂಚೆ 822 ಕಡೆ ತೆರವು ಕಾರ್ಯ ಮಾಡಲಾಗಿತ್ತು. ಅದಾದ ನಂತರ ಅಂದರೆ 2016ರ ಆ. 6ರಿಂದ 2017ರ ಫೆ. 18ರವರೆಗೆ ಮತ್ತೆ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಈ 7 ತಿಂಗಳ ಅವಧಿಯಲ್ಲಿ ಒಟ್ಟು 403 ಕಡೆಗಳಲ್ಲಿನ ಒತ್ತುವರಿ ತೆರವು ಮಾಡಿ 600 ಕೋಟಿ ರೂ. ಮೌಲ್ಯದ 11.21 ಎಕರೆ (20.09 ಕಿ.ಮೀ.) ಭೂಮಿ ವಶಕ್ಕೆ ಪಡೆಯಲಾಗಿತ್ತು.

ದೊಡ್ಡಬೊಮ್ಮಸಂದ್ರ ನಾಗರಿಕರಿಗೆ ಮತ್ತೆ ಎದುರಾದ ಪ್ರವಾಹ ಭೀತಿ

ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವವರೆಗೆ ಯಾವುದೇ ರೀತಿಯ ಪ್ರವಾಹ ಉಂಟಾಗದ ದೊಡ್ಡಬೊಮ್ಮಸಂದ್ರದಲ್ಲಿ ಈಗ ಪ್ರವಾಹದ ಭೀತಿ ಎದುರಾಗಿದೆ. ಈವರೆಗೆ ತೆರವು ಮಾಡಲಾದ ಸ್ಥಳದಲ್ಲಿದ್ದ ಕಟ್ಟಡ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ರಾಜಕಾಲುವೆ ನಿರ್ಮಾಣ ಮಾಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರು. ಇದೀಗ ಅವೆಲ್ಲವೂ ಬಗೆಹರಿದಿದ್ದು, 3 ತಿಂಗಳಿನಿಂದ ರಾಜಕಾಲುವೆ ಮರುನಿರ್ವಣ ಕಾಮಗಾರಿ ನಡೆಸಲಾಗುತ್ತಿದೆ. ಆದರೆ, ಅದು ಪೂರ್ಣವಾಗದ ಕಾರಣ ನಿರ್ವಣವಾಗಿರುವ ಕಾಲುವೆಯಲ್ಲಿ ನೀರು ನಿಂತಿದೆ. ಒಂದೊಮ್ಮೆ ಜೋರು ಮಳೆ ಬಂದರೆ ಆ ಭಾಗದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಗಳಿವೆ. ದೊಡ್ಡಬೊಮ್ಮಸಂದ್ರದಂತೆ ಕಸವನಹಳ್ಳಿಯ ಶುಭ್ ಎನ್​ಕ್ಲೇವ್​ನಲ್ಲಿಯೂ ರಾಜಕಾಲುವೆ ಸಂಪೂರ್ಣ ನಿರ್ವಣವಾಗಿಲ್ಲ. ಅರ್ಧ ರಾಜಕಾಲುವೆ ನಿರ್ವಿುಸಲಾಗಿದ್ದು, ಮಳೆ ನೀರು ಸರಾಗವಾಗಿ ಹರಿಯದ ಪರಿಸ್ಥಿತಿಯಿದೆ. ನಿರ್ವಣಗೊಂಡಿರುವ ಅರ್ಧ ರಾಜಕಾಲುವೆಯಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಪರಿಸ್ಥಿತಿ ನಿರ್ವಣವಾಗಿದೆ.

ರಾಜಕಾಲುವೆ ಮರು ನಿರ್ಮಾಣ ಮಾಡಲಾಗಿದೆ. ಆದರೆ, ಕಾಲುವೆಯನ್ನು ಮೇಲ್ಭಾಗದಿಂದ ಮುಚ್ಚಿರುವ ಕಾರಣ ಮಳೆ ನೀರು ಅದರೊಳಗೆ ಹೋಗದಂತಾಗಿದೆ. ಹೀಗಾಗಿ ಜೋರಾಗಿ ಮಳೆ ಬಂದರೆ ಪ್ರವಾಹ ಉಂಟಾಗುತ್ತದೆ.

| ಚಂದ್ರು ಅವನಿ ಶೃಂಗೇರಿನಗರ ನಿವಾಸಿ

92.65 ಕಿ.ಮೀ. ರಾಜಕಾಲುವೆ ಕಾಮಗಾರಿ ಇನ್ನೂ ಬಾಕಿ..!

ಬಿಬಿಎಂಪಿ ವ್ಯಾಪ್ತಿಯಲ್ಲಿನ ಒಟ್ಟು 842 ಕಿ.ಮೀ. ಉದ್ದದ ರಾಜಕಾಲುವೆಗಳಿವೆ. ಅದರಲ್ಲಿ 2006-07ರಿಂದ 2015-16ರವರೆಗೆ ಒಟ್ಟು 1,367.05 ಕೋಟಿ ರೂ. ವೆಚ್ಚದಲ್ಲಿ 177.02 ಕಿ.ಮೀ. ಉದ್ದದ ರಾಜಕಾಲುವೆ ಹಾಗೂ 2016-17ರಿಂದ ಈವರೆಗೆ 119.33 ಕಿ.ಮೀ. ಉದ್ದದ ರಾಜಕಾಲುವೆಯನ್ನು 531.27 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾಗಿದೆ. ಈಗಾಗಲೇ 1,898 ಕೋಟಿ ರೂ. ವೆಚ್ಚದಲ್ಲಿ 296.35 ಕಿ.ಮೀ. ಉದ್ದದ ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಸೇರಿ ಇನ್ನಿತರ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಉಳಿದಂತೆ 92.65 ಕಿ.ಮೀ. ಕಾಮಗಾರಿ ಚಾಲ್ತಿಯಲ್ಲಿದ್ದು, 531.27 ಕೋಟಿ ರೂ. ವ್ಯಯಿಸಲಾಗುತ್ತಿದೆ.

ನ್ಯಾಯಾಲಯದ ಆದೇಶದಂತೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಬೇಕಿದೆ. ಅದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಅದೇ ರೀತಿ ಕಳೆದ ಮೂರು ವರ್ಷಗಳ ಹಿಂದೆ ನಡೆಸಲಾದ ತೆರವು ಕಾರ್ಯಾಚರಣೆ ಸ್ಥಳಗಳಲ್ಲಿ ರಾಜಕಾಲುವೆ ಮರುನಿರ್ವಣ ಮಾಡಲು ಕಾನೂನು ತೊಡಕಿದೆ. ಅದನ್ನು ಬಗೆಹರಿಸಲಾಗುವುದು. ಜತೆಗೆ, ಪರಿಹಾರ ನೀಡುವ ವಿಚಾರವಾಗಿಯೂ ಕ್ರಮ ಕೈಗೊಳ್ಳಲಾಗುತ್ತದೆ.

| ಗಂಗಾಂಬಿಕೆ ಮೇಯರ್

ಪ್ರವಾಹಕ್ಕೆ ಕಾರಣವೇನು?

ಗಂಟೆಗೆ 75ರಿಂದ 120 ಮಿ.ಮೀ ಮಳೆ ಬಿದ್ದರೆ ಬೆಂಗಳೂರಿನ ರಾಜಕಾಲುವೆಗಳಿಗೆ ತಡೆದುಕೊಳ್ಳುವ ಸಾಮರ್ಥ್ಯವಿದೆ. 120 ಮಿ.ಮೀಗೂ ಹೆಚ್ಚಿನ ಮಳೆಯಾದರೆ ನೀರು ಹರಿಯುವ ಪ್ರಮಾಣ ಹೆಚ್ಚಾಗಿ ರಾಜಕಾಲುವೆಯಿಂದ ಮೇಲಕ್ಕೆ ಉಕ್ಕುತ್ತದೆ. ಅದರಿಂದ ಹಲವು ಬಡಾವಣೆಗಳು ಜಲಾವೃತವಾಗುವಂತಾಗಿದೆ. ಜತೆಗೆ, ಹಲವೆಡೆ ಆರಂಭದಲ್ಲಿ ದೊಡ್ಡದಾಗಿರುವ ರಾಜಕಾಲುವೆಗಳು ಕ್ರಮೇಣ ಕಿರಿದಾಗುತ್ತಾ ಹೋಗಿದೆ. ಅದು ಕೂಡ ಪ್ರವಾಹ ಉಂಟಾಗಲು ಕಾರಣವಾಗಿದೆ.

ಮನೆ ಒಡೆಯುವಾಗ ಪರಿಹಾರ ಕೊಡುತ್ತೇವೆಂದು ಹೇಳಿದ್ದರು. ಆದರೆ, ಈವರೆಗೆ ಪರಿಹಾರ ನೀಡಿಲ್ಲ. ಈ ಬಗ್ಗೆ ಬಿಬಿಎಂಪಿ ಸದಸ್ಯರನ್ನು ಕೇಳಿದರೆ, ಶೀಘ್ರದಲ್ಲಿ ಹಣ ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ ಯಾವಾಗ ಎಂಬುದು ಮಾತ್ರ ತಿಳಿದಿಲ್ಲ.

| ಉಷಾ ಅವನಿ ಶೃಂಗೇರಿನಗರದಲ್ಲಿ ಮನೆ ಕಳೆದುಕೊಂಡವರು

Leave a Reply

Your email address will not be published. Required fields are marked *