ಬೇಗೂರು ವಾರ್ಡ್​ನಲ್ಲಿಂದು ಜನತಾದರ್ಶನ

ಬೆಂಗಳೂರು: ಸ್ಥಳೀಯ ಜನಪ್ರತಿನಿಧಿಗಳು ಮತ್ತು ಜನರ ನಡುವಿನ ನೇರ ಸಂಪರ್ಕದ ಮೂಲಕ ನಾಗರಿಕ ಸಮಸ್ಯೆಗಳ ಪರಿಹಾರಕ್ಕಾಗಿ ಆರಂಭಿಸಿರುವ ಜನತಾದರ್ಶನ ಶನಿವಾರ (ನ.17) ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಗೂರು ವಾರ್ಡ್​ನಲ್ಲಿ ನಡೆಯಲಿದೆ.

ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್​ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಡಿ.ಕೆ. ಸುರೇಶ್, ಶಾಸಕ ಎಂ. ಕೃಷ್ಣಪ್ಪ, ಬಿಬಿಎಂಪಿ ಜಂಟಿ ಆಯುಕ್ತ ವೀರಭದ್ರಸ್ವಾಮಿ, ಕಾಪೋರೇಟರ್ ಎಂ. ಆಂಜನಪ್ಪ ಅವರ ಜತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು, ಜನರ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸಲಿದ್ದಾರೆ.

ಅಭಿವೃದ್ಧಿಗೆ ವೇಗ ನೀಡಿದ ಕಾರ್ಪೇರೇಟರ್

ಮೂಲತಃ ಕಾರ್ವಿುಕ ಕುಟುಂಬದ ಹಿನ್ನೆಲೆಯ ಎಂ. ಆಂಜನಪ್ಪ, ಇದೇ ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿದ್ದಾರೆ. ತಮ್ಮ ವಾರ್ಡ್ ಮಾದರಿಯಾಗಿ ಅಭಿವೃದ್ಧಿಯಾಗಬೇಕೆಂಬ ಕನಸು ಹೊತ್ತು ಅದನ್ನು ನನಸಾಗಿಸುವತ್ತ ಮುನ್ನಡೆಯುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಮಾಜಸೇವೆಯಲ್ಲಿ ಆಸಕ್ತಿ ಬೆಳೆಸಿಕೊಂಡವರು ಆಂಜನಪ್ಪ. ಬೊಮ್ಮನಹಳ್ಳಿ ಗ್ರಾ.ಪಂ.ಅಧ್ಯಕ್ಷರಾಗಿ ಜನಮೆಚ್ಚುವ ಕಾರ್ಯ ಮಾಡಿದ ಅನುಭವವಿದೆ. ಸಂಸದ ಡಿ.ಕೆ. ಸುರೇಶ್ ಅವರೇ ಜನಸೇವೆ ಮಾಡಲು ನನಗೆ ಪ್ರೇರಣೆ ಎನ್ನುತ್ತಾರೆ. 2008ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಬೇಗೂರು ವಾರ್ಡ್ ಸೇರ್ಪಡೆಯಾಯಿತು. ಆಂಜನಪ್ಪ ಪಾಲಿಕೆ ಸದಸ್ಯರಾದ ನಂತರ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿವೆ. ಸಂಸದರ ನೇತೃತ್ವದಲ್ಲಿ ಅಂದಾಜು 100 ಕೋಟಿ ರೂ.ಗಳ ಅನುದಾನದಲ್ಲಿ ವಾರ್ಡ್ ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿನ ಪ್ರಮುಖ ಸಮಸ್ಯೆಯೆಂದರೆ ಬೊಮ್ಮನಹಳ್ಳಿ- ಬೇಗೂರು ಮುಖ್ಯರಸ್ತೆ ವಿಸ್ತರಣೆ. ಇದನ್ನು ಸವಾಲಾಗಿ ಸ್ವೀಕರಿಸಲಾಗಿದೆ ಎನ್ನುತ್ತಾರೆ ಆಂಜನಪ್ಪ. ಈಗಾಗಲೇ ಇದಕ್ಕಾಗಿ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಜನತಾದರ್ಶನ ನಡೆಯುವ ಸ್ಥಳ

ಸ್ಥಳ: ಸರ್ಕಾರಿ ಪ್ರೌಢಶಾಲೆ ಆವರಣ, ಬೇಗೂರು.

ಸಮಯ: ಬೆಳಗ್ಗೆ 10 ಗಂಟೆ

ಡಯಾಲಿಸಿಸ್ ಸೆಂಟರ್

ಬಡ ರೋಗಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಯನ್ನು 50 ಹಾಸಿಗೆ ವ್ಯವಸ್ತೆಯೊಂದಿಗೆ ಮೇಲ್ದರ್ಜೆಗೆ ಏರಿಸುವುದು ಹಾಗೂ ಡಯಾಲಿಸಿಸ್ ಸೆಂಟರ್ ನಿರ್ವಿುಸುವ ಕಾರ್ಯ ಕೈಗೊಳ್ಳಲಾಗಿದೆ. ಇದಕ್ಕೆ ಈಗಾಗಲೇ 50 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ.

ಕ್ರೀಡಾಂಗಣ, ಡಿಜಿಟಲ್ ಗ್ರಂಥಾಲಯ

ಬೇಗೂರಿನಲ್ಲಿ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮುಕ್ತಾಯ ಹಂತದಲ್ಲಿದ್ದ್ದು, ಜನವರಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕ್ರೀಡಾಂಗಣ ನಿರ್ವಿುಸಲು ಈಗಾಗಲೇ 6 ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಅಲ್ಲದೆ, ಬೇಗೂರಿನಲ್ಲಿ ಪೊಲೀಸ್ ಠಾಣೆ ತೆರೆಯಲಾಗಿದೆ.

ಬೇಗೂರು ಕೆರೆ ಪ್ರವಾಸಿ ತಾಣ

ಬೇಗೂರು ಕೆರೆಯನ್ನು 26 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 134.24 ಎಕರೆ ವಿಸ್ತೀರ್ಣವಿರುವ ಕೆರೆಯಲ್ಲಿ ನಡಿಗೆ ಪಥ, ದೋಣಿ ವಿಹಾರ ಮತ್ತು ಪಕ್ಷಿಧಾಮ ನಿರ್ವಿುಸಿ ಆಕರ್ಷಕ ತಾಣವಾಗಿಸುವ ಕನಸು ಆಂಜನಪ್ಪ ಅವರದ್ದು.

ಪ್ರಮುಖ ಸಮಸ್ಯೆಗಳು

# ಬೊಮ್ಮನಹಳ್ಳಿಯಿಂದ ಬೇಗೂರು ರಸ್ತೆ ಟ್ರಾಫಿಕ್ ಅವ್ಯವಸ್ಥೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಪ್ರದೇಶವೆಲ್ಲ ಧೂಳುಮಯ ಎಂಬುದು ಜನರ ಅಳಲು.

# ಕಾವೇರಿ ನೀರು ಪೂರೈಕೆ ಭರದಲ್ಲಿ ಒಳಚರಂಡಿ ಹಾಗೂ ನೀರು ಸಂಪರ್ಕ ಕಡಿತಗೊಂಡು ಸಮಸ್ಯೆ. ಅಭಿವೃದ್ಧಿಗೊಂಡ ಅಡ್ಡರಸ್ತೆಗಳು ಹಾಳಾಗಿವೆ.

ಕಾವೇರಿ ನೀರು ಹರಿಸಲು ಸಿದ್ದತೆ

ಕಾವೇರಿ 4ನೇ ಹಂತದ ಸಂಪರ್ಕ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಚಿಕ್ಕಬೇಗೂರು, ಬೇಗೂರು, ಸುಭಾಷ್​ನಗರ, ಆಶ್ರಯನಗರ, ಚಾಮುಂಡೇಶ್ವರಿ ಬಡಾವಣೆ, ವಿಶ್ವಪ್ರಿಯ ಬಡಾವಣೆ, ರಾಘವೇಂದ್ರ ಬಡಾವಣೆಗಳಲ್ಲಿ ಕಾವೇರಿ ನೀರು ಪೂರೈಕೆ ಕಾಮಗಾರಿ ಪೂರ್ಣಗೊಂಡಿದೆ. ಮನೆಗಳ ಸಂಪರ್ಕ ಕಲ್ಪಿಸುವ ಕಾರ್ಯವೂ ಅಂತಿಮ ಹಂತದಲ್ಲಿದೆ.

ಉಪಸ್ಥಿತರಿರುವವರು

ಲೋಕಸಭಾ ಸದಸ್ಯ ಡಿ.ಕೆ. ಸುರೇಶ್, ಶಾಸಕ ಎಂ. ಕೃಷ್ಣಪ್ಪ, ಪಾಲಿಕೆ ಜಂಟಿ ಆಯುಕ್ತ ವೀರಭದ್ರಸ್ವಾಮಿ, ಪಾಲಿಕೆ ಸದಸ್ಯ ಎಂ. ಆಂಜನಪ್ಪ.