ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿಯು ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿದೆ. ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಕಾವೇರಿ ಜಲ ಸಂರಕ್ಷಣಾ ಸಮಿತಿಯ ವತಿಯಿಂದ ರೈತ ಸಂಘಟನೆಗಳ ಒಕ್ಕೂಟ, ಕನ್ನಡಪರ ಸಂಘಟನೆಗಳ ಒಕ್ಕೂಟ ಹಾಗೂ ಬೆಂಗಳೂರಿನ ನಾಗರಿಕ ಸಂಘಗಳ ನೇತೃತ್ವದಲ್ಲಿ ಫ್ರೀಡಂಪಾರ್ಕ್‌ನಲ್ಲಿ ನಡೆದ ಕಾವೇರಿ ಹೋರಾಟ ಜಾಗೃತಿ ಸಭೆಯಲ್ಲಿ ಮಂಗಳವಾರ ಬೆಂಗಳೂರು ಬಂದ್ ನಡೆಸಲು ತೀರ್ಮಾನಿಸಲಾಗಿದೆ.
ಸೆ.೨೬ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬೆಳಗ್ಗೆ ೧೧ ಗಂಟೆಗೆ ಟೌನ್‌ಹಾಲ್ನಿಂದ ಎಸ್‌ಬಿಎಂ ವೃತ್ತದವರೆಗೆ ರ‌್ಯಾಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ಸಭೆ ಬಳಿಕ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ನಗರದ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಮನವಿ ಮಾಡಿದ್ದಾರೆ. ಇದು ನಮ್ಮ ಬಂದ್ ಅಲ್ಲ, ಬೆಂಗಳೂರಿನ ನಾಗರಿಕರ ಬಂದ್. ಐಟಿ ಕಂಪನಿಗಳು, ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ನೀಡಬೇಕು. ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಬಂದ್‌ಗೆ ಬೆಂಬಲಿಸಬೇಕು. ಸರ್ಕಾರ ಕೂಡಲೇ ವಿಶೇಷ ಅಧಿವೇಶನ ಕರೆದು ನಿರ್ಣಯ ಕೈಗೊಳ್ಳಲಿ. ಸುಪ್ರೀಂಕೋರ್ಟ್ ಕೂಡಲೇ ಸಿಡಬ್ಲುಆರ್‌ಸಿ, ಸಿಡಬ್ಲುಎಂಎ ರದ್ದು ಮಾಡಬೇಕು ಎಂದು ಶಾಂತಕುಮಾರ್ ಆಗ್ರಹಿಸಿದರು.
ಸಿನಿಮಾ ರಂಗದವರನ್ನು ಜನಸಾಮಾನ್ಯರು ಬೆಳೆಸಿದ್ದಾರೆ. ಸಿನಿಮಾ ನಟರು ಸ್ವಯಂ ಪ್ರೇರಿತವಾಗಿ ಬಂದ್‌ಗೆ ಬರಬೇಕು. ಸಭೆಗೆ ಬಾರದೆ ಇರುವವರನ್ನ ಭೇಟಿಯಾಗಿ ಮಾತನಾಡುತ್ತೇವೆ. ಇಡೀ ಚಿತ್ರೋದ್ಯಮ ಒಂದು ದಿನ ಚಟುವಟಿಕೆ ನಿಲ್ಲಿಸಿ ಬೆಂಬಲ ನೀಡಬೇಕು. ಅಲ್ಲದೆ ಐಟಿ ಕಂಪನಿಗಳು ಸ್ವಯಂ ಪ್ರೇರಿತವಾಗಿ ಕೆಲಸಕ್ಕೆ ಗೈರಾಗಿ ಬೆಂಬಲ ನೀಡಬೇಕು. ಸರ್ಕಾರ ತಮಿಳುನಾಡಿಗೆ ನೀರನ್ನು ಹರಿಸುತ್ತಿದ್ದು, ಈ ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು. ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಬೆಂಗಳೂರು ನಗರವನ್ನು ಕಾವೇರಿ ನೀರಿನ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಈಗಾಗಲೇ ಮಂಡ್ಯದಲ್ಲಿ ಬಂದ್ ಮಾಡಿದ್ದಾರೆ. ಮಂಗಳವಾರ ಬೆಂಗಳೂರು ಬಂದ್ ನಿಶ್ಚಿತ ಎಂದು ಹೇಳಿದರು.
ಓಲಾ, ಊಬರ್ ಸಂಘದ ಬೆಂಬಲ:
ಜಲ ಸಂರಕ್ಷಣಾ ಸಮಿತಿ ಕರೆ ಕೊಟ್ಟಿರುವ ಬೆಂಗಳೂರು ಬಂದ್‌ಗೆ ಓಲಾ, ಊಬರ್ ಸಂಘಗಳು ಬೆಂಬಲ ನೀಡಿವೆ. ಬೆಂಗಳೂರಿನಾದ್ಯಂತ ಮಂಗಳವಾರ ಓಲಾ, ಉಬರ್ ಓಡಿಸದಿರಲು ನಿರ್ಧಾರ ಮಾಡಿವೆ. ಈ ಬಗ್ಗೆ ಓಲಾ, ಊಬರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಮಾಹಿತಿ ನೀಡಿದ್ದಾರೆ.