ನೌಕರಿ ಗಿಟ್ಟಿಸುವಲ್ಲಿ ಬೆಂಗ್ಳೂರು ವಿದ್ಯಾರ್ಥಿಗಳೇ ಬೆಸ್ಟ್!

ಬೆಂಗಳೂರು: ಐಟಿ-ಬಿಟಿ, ಸಿಲಿಕಾನ್ ಸಿಟಿ ಎಂಬ ಖ್ಯಾತಿಯ ಉತ್ತುಂಗದಲ್ಲಿರುವ ಬೆಂಗಳೂರಿಗೀಗ ‘ಉದ್ಯೋಗ ನಗರಿ’ ಎಂಬ ಹೊಸ ಗರಿ ಮೂಡಿದೆ. ಇಡೀ ದೇಶದಲ್ಲಿ ಹೆಚ್ಚಿನ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿರುವವರ ಪೈಕಿ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ನಂಬರ್ ಒನ್! ಚೆನ್ನೈ ಮತ್ತು ಇಂದೋರ್ ಹಿಂದಿಕ್ಕಿ ಮುನ್ನಡೆಯುತ್ತಿರುವುದು ರಾಜಧಾನಿಯ ಮತ್ತೊಂದು ಹೆಗ್ಗಳಿಕೆ.

ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ (ಎಐಸಿಟಿಇ) ಕೌಶಲ ವರದಿ- 2018ರಲ್ಲಿ ಈ ಅಂಶ ಪ್ರಕಟವಾಗಿದೆ. ಈ ಸಮಿಕ್ಷೆಗೆ 29 ರಾಜ್ಯ 7 ಕೇಂದ್ರಾಡಳಿತ ಪ್ರದೇಶಗಳನ್ನು ಒಳಪಡಿಸಲಾಗಿತ್ತು. ನಗರವಾರು ಹೊರತುಪಡಿಸಿ ರಾಜ್ಯವಾರು ಪರಿಶೀಲಿಸಿದಾಗ ಕರ್ನಾಟಕ 4ನೇ ಸ್ಥಾನ ಪಡೆದುಕೊಂಡರೆ ಆಂಧ್ರಪ್ರದೇಶ ಮೊದಲ ಸ್ಥಾನ ಪಡೆದಿದೆ. ದೆಹಲಿ, ಗುಜರಾತ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿವೆ.

ಕಾರಣವೇನು?

ಬೆಂಗಳೂರಿನ ಶಿಕ್ಷಣ ಪದ್ಧತಿ, ಪಠ್ಯಕ್ರಮ, ಇಂಟರ್ನ್​ಶಿಪ್ ಕಡ್ಡಾಯ, ಮಾದರಿ ಪ್ರಶ್ನೆಪತ್ರಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸುವುದು ಉದ್ಯೋಗ ನಗರಿಯ ಗರಿ ಮೂಡಲು ಪ್ರಮುಖ ಕಾರಣವಾಗಿದೆ. ಇದರ ಜತೆಗೆ ಕೇಂದ್ರ ಸರ್ಕಾರ ಸ್ಟ್ಯಾಂಡ್ ಆಪ್ ಇಂಡಿಯಾ, ಸ್ಟ್ಯಾರ್ಟ್ ಆಪ್ ಇಂಡಿಯಾ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ವಿದ್ಯಾರ್ಥಿಗಳಲ್ಲಿರುವ ಸೃಜನಾತ್ಮಕ ಆಲೋಚನೆಗಳಿಗೆ ಮೂರ್ತ ರೂಪ ನೀಡುತ್ತಿರುವುದು ಕೂಡ ಬೆಂಗಳೂರಿನ ಸಾಧನೆಯ ಹಿಂದಿದೆ.

ನಮ್ಮಲ್ಲಿ ಗುಣಮಟ್ಟ ಶಿಕ್ಷಣ ನೀಡುತ್ತಿರುವುದರ ಜತೆಗೆ ವಿದ್ಯಾರ್ಥಿಗಳಿಗೆ ಕೌಶಲ್ಯ, ಅಣಕು ಸಂದರ್ಶನಗಳ ತರಬೇತಿ ನೀಡುವುದು ಉತ್ತಮ ಉದ್ಯೋಗ ಪಡೆಯಲು ಸಹಕಾರಿಯಾಗಿದೆ.

| ಡಿ.ಕೆ. ಮೋಹನ್ ಅಧ್ಯಕ್ಷ, ಕೇಂಬ್ರಿಡ್ಜ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ಹೊಸಬರಿಗೂ ಉದ್ಯೋಗ

2018ರಲ್ಲಿ ಹೊಸಬರಿಗೆ ಶೇ.52 ಉದ್ಯೋಗ ಲಭ್ಯವಾಗಿದೆ. 2016-17ರಲ್ಲಿ ಈ ಪ್ರಮಾಣ ಶೇ.45 ಇತ್ತು. ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳೇನೂ ಲಭ್ಯವಾಗಿಲ್ಲ. ಇಂಜಿನಿಯರಿಂಗ್ ವಿಭಾಗದಲ್ಲಿ ಮಾಹಿತಿ ತಂತ್ರಜ್ಞಾನ(ಐಟಿ) ಮತ್ತು ಕಂಪ್ಯೂಟರ್ ಸೈನ್ಸ್(ಸಿಎಸ್) ವಿಷಯಗಳಲ್ಲಿ ಅನುಕ್ರಮವಾಗಿ ಉದ್ಯೋಗಾವಕಾಶ ಶೇ.64.47 ಮತ್ತು ಶೇ.56.05 ಇದೆ. ಅರ್ಟಿಫಿಯಲ್ ಇಂಜಿನಿಯರಿಂಗ್ ಮತ್ತು ರೋಬ್ಯಾಟಿಕ್ ತಂತ್ರಜ್ಞಾನ ಕ್ಷೇತ್ರದಲ್ಲಿ ಶೇ.47 ಇದೆ. ಶೇ.11 ಉದ್ಯೋಗ ಸೃಷ್ಟಿಯಾಗುವ ಸಿವಿಲ್ ಇಂಜಿನಿಯರಿಂಗ್ ಕೋರ್ಸ್​ಗೆ ಬೆಲೆಯೇ ಇದ್ದಂತಾಗಿದೆ. ಆಟೋಮೇಷನ್ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಶೇ.60 ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ. ಮಹಿಳಾ ಉದ್ಯೋಗಿಗಳ ಪ್ರಮಾಣ ಶೇ.40 ಇದೆ. ಕಳೆದ ವರ್ಷ ಈ ಪ್ರಮಾಣ ಶೇ.41 ಇತ್ತು. ಪುರುಷ ಉದ್ಯೋಗಿಗಳ ಪ್ರಮಾಣ ಕಳೆದ ವರ್ಷ ಶೇ.40 ಇದ್ದದ್ದು ಈ ವರ್ಷ ಶೇ.47ಕ್ಕೆ ಏರಿಕೆ ಆಗಿದೆ.

Leave a Reply

Your email address will not be published. Required fields are marked *