ಇಂದು ಬೆಂಗಳೂರು ರೈಲು ಪುನರಾರಂಭ

ಮಂಗಳೂರು: ಸುಬ್ರಹ್ಮಣ್ಯ ರೋಡ್-ಸಕಲೇಶಪುರ ಘಾಟ್ ರೈಲು ಮಾರ್ಗ ದುರಸ್ತಿ ಪೂರ್ಣಗೊಂಡಿದ್ದು, ಮಂಗಳೂರು-ಬೆಂಗಳೂರು ರೈಲು ಈ ಮಾರ್ಗದಲ್ಲಿ ಆ.26ರಂದು ರಾತ್ರಿ ಪುನರಾರಂಭಗೊಳ್ಳಲಿದೆ. ಕುಲಶೇಖರ-ಪಡೀಲ್ ನಡುವೆ ಗುಡ್ಡಕುಸಿತದಿಂದ ಸ್ಥಗಿತಗೊಂಡ ಕೇರಳ-ಮಂಗಳೂರು-ಮುಂಬಯಿ ರೈಲು ಮಾರ್ಗ ದುರಸ್ತಿ ಕೂಡ ಮುಕ್ತಾಯ ಹಂತದಲ್ಲಿದ್ದು, ಆ.26ರಂದು ಸಂಚಾರಕ್ಕೆ ತೆರೆದುಕೊಳ್ಳುವ ನಿರೀಕ್ಷೆ ಇದೆ.

ಸಕಲೇಶಪುರ- ಸುಬ್ರಹ್ಮಣ್ಯ ರೋಡ್ ಘಾಟ್ ಸೆಕ್ಷನ್ ಸಿರಿಬಾಗಿಲಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ದುರಸ್ತಿ ಕಾಮಗಾರಿ ಹಳಿ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಪ್ರಯಾಣಿಕರ ರೈಲು ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಭಾನುವಾರ ಪರಿಶೀಲನೆ ನಡೆಸಿದ ಇಲಾಖೆಯ ಹಿರಿಯ ಅಧಿಕಾರಿಗಳು ತೀರ್ಮಾಸಿದ್ದಾರೆ.
ದುರಸ್ತಿಗೊಂಡ ಮಾರ್ಗದ ಸುರಕ್ಷತೆ ಖಾತರಿಪಡಿಸಿಕೊಳ್ಳಲು ಶನಿವಾರ ಒಂದು ಪ್ರಾಯೋಗಿಕ ರೈಲು ಸಂಚಾರ ಹಾಗೂ ಭಾನುವಾರ ರಾತ್ರಿ ಒಂದು ಗೂಡ್ಸ್ ರೈಲು ಈ ಮಾರ್ಗ ಸಂಚರಿಸಿದೆ. ಭೂಕುಸಿತದಿಂದ ಸಕಲೇಶಪುರ ಘಾಟ್ ಮಾರ್ಗ ಆಗಸ್ಟ್ ಮೊದಲ ವಾರದಿಂದಲೇ ರೈಲು ಓಡಾಟಕ್ಕೆ ಮುಚ್ಚಿತ್ತು. ಮೈಸೂರು ವಿಭಾಗ ರೈಲ್ವೆ ಪ್ರಬಂಧಕಿ ಅಪರ್ಣಾ ಗರ್ಗ್ ನಿರಂತರ ಈ ಪ್ರದೇಶಕ್ಕೆ ಭೇಟಿ ನೀಡಿ ದುರಸ್ತಿ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದರು. ನೈಋತ್ಯ ರೈಲ್ವೆ ಮಹಾಪ್ರಬಂಧಕ ಎ.ಕೆ.ಸಿಂಗ್ ಕೂಡ ಕಳೆದ ವಾರ ಈ ಪ್ರದೇಶಕ್ಕೆ ಭೇಟಿ ನೀಡಿದ್ದರು.

ಕೇರಳ-ಮುಂಬೈ ರೈಲು 3ನೇ ದಿನವೂ ಸ್ಥಗಿತ
ಗುಡ್ಡಕುಸಿತದಿಂದ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡ ಕೇರಳ-ಮಂಗಳೂರು-ಮುಂಬಯಿ ನೇರ ರೈಲು ಸಂಚಾರ ಮೂರನೇ ದಿನ ಭಾನುವಾರವೂ ಸ್ಥಗಿತಗೊಂಡಿದೆ. ಫಾಲ್ಘಾಟ್ ವಿಭಾಗಕ್ಕೆ ಸೇರಿದ ಈ ಪ್ರದೇಶದಲ್ಲಿ ಗುರುವಾರ ಸುರಿದ ಮಳೆಗೆ ಗುಡ್ಡಕುಸಿದು ಮಣ್ಣು ಹಳಿಗೆ ಬಿದ್ದಿತ್ತು. ಇದರಿಂದಾಗಿ ಮಂಗಳೂರು ಮೂಲಕ ಕೇರಳ ಹಾಗೂ ಮುಂಬಯಿಗೆ ತೆರಳಬೇಕಾದ ನೇರ ರೈಲು ಸಂಚಾರವನ್ನು ರದ್ದುಪಡಿಸಲಾಯಿತು. ಆದರೆ ಸುರತ್ಕಲ್‌ನಿಂದ ಕೊಂಕಣ ಮಾರ್ಗದಲ್ಲಿ ರೈಲು ಸಂಚಾರವನ್ನು ಸೀಮಿತಗೊಳಿಸಲಾಯಿತು. ಪಡೀಲಿನಲ್ಲಿ ಭರದಿಂದ ಮಣ್ಣು ತೆರವು ಕಾಮಗಾರಿ ನಡೆಯುತ್ತಿದ್ದು, ಸೋಮವಾರ ಮಧ್ಯಾಹ್ನ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಹಲವು ರೈಲು ಪ್ರಯಾಣ ರದ್ದು
ಭಾನುವಾರ ಸಂಚರಿಸಲಿದ್ದ ಕಣ್ಣೂರು-ಕಾರವಾರ-ಬೆಂಗಳೂರು ರಾತ್ರಿ ರೈಲನ್ನು ರದ್ದುಪಡಿಸಲಾಗಿದೆ. ವಯಾ ಮೈಸೂರು ಮೂಲಕ ಸಂಚರಿಸಬೇಕಾದ ಬೆಂಗಳೂರು-ಕಣ್ಣೂರು/ಕಾರವಾರ ರಾತ್ರಿ ರೈಲನ್ನು ಕೂಡ ರದ್ದುಪಡಿಸಲಾಗಿದೆ. ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲು ಸೋಮವಾರ ಯಶವಂತಪುರದಿಂದ ಹೊರಡಲಿದೆ. ಆದರೆ ಈ ರೈಲು ಮಂಗಳೂರು ಜಂಕ್ಷನ್‌ವರೆಗೆ ಮಾತ್ರ ಸಂಚರಿಸಲಿದ್ದು, ಕಾರವಾರಕ್ಕೆ ಸಂಚರಿಸುವುದಿಲ್ಲ. ಮಂಗಳವಾರ ಕಾರವಾರ-ಯಶವಂತಪುರ ತ್ರೈವೀಕ್ಲಿ ಎಕ್ಸ್‌ಪ್ರೆಸ್ ರೈಲು ಕೂಡ ಕಾರವಾರದಿಂದ ಮಂಗಳೂರು ಜಂಕ್ಷನ್‌ಗೆ ಇರುವುದಿಲ್ಲ. ಮಂಗಳೂರು ಸೆಂಟ್ರಲ್-ಯಶವಂತಪುರ ನಡುವಿನ ತ್ರೈವೀಕ್ಲಿ ರಾತ್ರಿ ರೈಲು ಸೋಮವಾರ ಅವಶ್ಯಕತೆಗೆ ಅನುಗುಣವಾಗಿ ಸಂಚರಿಸಲಿದೆ.

ರದ್ದುಗೊಂಡ ಕೊಂಕಣ ರೈಲುಗಳು
ಕೊಂಕಣ ರೈಲ್ವೆ ನಿಗಮ ವಯಾ ಮಂಗಳೂರು ಮೂಲಕ ಭಾನುವಾರ ಸಂಚರಿಸಬೇಕಾದ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ಕುಚ್ಚುವೇಲಿ-ಪೋರಬಂದರ್ ಎಕ್ಸ್‌ಪ್ರೆಸ್ ಎರ್ನಾಕುಲಂ-ಅಜ್ಮೀರ್ ಜಂಕ್ಷನ್ ಮರುಸಾಗರ್ ಎಕ್ಸ್‌ಪ್ರೆಸ್, ಮಡ್ಗಾಂವ್- ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದುಗೊಳಿಸಿದೆ. ಆ.26ರಂದು ಸಂಚರಿಸಬೇಕಾದ ಎರ್ನಾಕುಲಂ ಮಡ್ಗಾಂವ್ ಎಕ್ಸ್‌ಪ್ರೆಸ್, ಮುಂಬಯಿ ಎಸ್‌ಟಿಟಿ-ತಿರುವನಂತಪುರಂ ನೇತ್ರಾವತಿ ಎಕ್ಸ್‌ಪ್ರೆಸ್, ತಿರುನೇಲ್ವಿ-ಜಾಮ್ ನಗರ್ ಎಕ್ಸ್‌ಪ್ರೆಸ್, ಕುಚ್ಚುವೇಲಿ-ಮುಂಬಯಿ ಎಲ್‌ಟಿಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಕುಚ್ಚುವೇಲಿ-ಚಂಡೀಘರ್ ಕೇರಳ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ರೈಲು ಸಂಚಾರ ಇರುವುದಿಲ್ಲ.

ಮಾರ್ಗ ಬದಲಾವಣೆ
ಹಝರತ್ ನಿಜಾಮುದ್ದೀನ್-ಎಕ್ನಾಕುಲಂ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್, ಎರ್ನಾಕುಲಂ-ಹಝರತ್ ನಿಜಾಮುದ್ದೀನ್ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್, ತಿರುವನಂತಪುರಂ-ಮುಂಬಯಿ ಎಲ್‌ಟಿಟಿ ನೇತ್ರಾವತಿ ಎಕ್ಸ್‌ಪ್ರೆಸ್ ರೈಲುಗಳು ಜೋಲಾರಪೇಟೆ, ಪಾಲಕ್ಕಾಡ್, ಶೋರ್ನೂರು ಮೂಲಕ ಮಾರ್ಗದಲ್ಲಿ ಸಂಚರಿಸಲಿವೆ.

Leave a Reply

Your email address will not be published. Required fields are marked *