ವಿದ್ಯಾಸಾಗರ್ ಪ್ರತಿಮೆ ಧ್ವಂಸಕ್ಕೆ ಖಂಡನೆ

ಯಾದಗಿರಿ: ಪಕ್ಷಿಮ ಬಂಗಾಳದ ಕೊಲ್ಕತ್ತದಲ್ಲಿ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಮಹಾನ್ ಮಾನವತಾವಾದಿ ವಿದ್ಯಾಸಾಗರ್ರ ಪ್ರತಿಮೆ ಧ್ವಂಸಗೊಳಿಸಿದ ಕೃತ್ಯ ಖಂಡಿಸಿ ಎಐಡಿಎಸ್ಒ ಸಂಘಟನೆಯಿಂದ ಗುರುವಾರ ನಗರದ ಸುಭಾಷ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎನ್.ರಾಮಲಿಂಗಪ್ಪ ಮಾತನಾಡಿ, ಕೊಲ್ಕತ್ತದಲ್ಲಿ ಮಂಗಳವಾರ ನಡೆದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ರೋಡ್ ಶೋ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಟಿಎಂಸಿ ಕಾರ್ಯಕರ್ತರೊಂದಿಗೆ ಘರ್ಷಣೆ ನಡೆದಿದೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ವಿದ್ಯಾಸಾಗರ್ ಕಾಲೇಜಿನ ಒಳಗೆ ನುಗ್ಗಿ ಅಲ್ಲಿದ್ದ ನವೋದಯ ಚಿಂತಕ ಹಾಗೂ ಮಹಾನ್ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದರು.

ನವೋದಯದ ಹರಿಕಾರ ಈಶ್ವರಚಂದ್ರ ವಿದ್ಯಾಸಾಗರ್ ಒಳಗೊಂಡಂತೆ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ ಇವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಆಗ್ರಹಿಸಿದವರು. ತಮ್ಮ ಜೀವನದಾದ್ಯಂತ ಈಶ್ವರಚಂದ್ರರು ಮಹಿಳೆಯರ ವಿಮುಕ್ತಿಗಾಗಿ ಹೋರಾಡಿದವರು. ಈಶ್ವರಚಂದ್ರರು ಕೇವಲ ಬಂಗಾಳಕ್ಕೆ ಮಾತ್ರವಲ್ಲ ಇಡೀ ರಾಷ್ಟ್ರಕ್ಕೆ ನಾಯಕ ಎಂದು ವಿವೇಕಾನಂದರು ಹೇಳಿದ್ದರು.

ಸುಭಾಷ್ಚಂದ್ರ ಬೋಸ್ ಅತ್ಯಂತ ಉನ್ನತ ಸ್ಥಾನದಲ್ಲಿ ಕಂಡಿದ್ದರು. ವಿವೇಕಾನಂದ, ನೇತಾಜಿ ಸುಭಾಷ್ಚಂದ್ರ ಬೋಸ್, ಖುದಿರಾಂ ಬೋಸ್ ಹಾಗು ವಿದ್ಯಾಸಾಗರರಂತಹ ಮಹಾನ್ ಚೇತನಗಳನ್ನು ಸೃಷ್ಠಿಸಿದ ನಾಡು ಬಂಗಾಳ. ಆದರೆ ನೀಚ ರಾಜಕೀಯ ಹಿತಾಸಕ್ತಿಗಳು ಇಂದು ಬಂಗಾಳದ ಸಾಂಸ್ಕೃತಿಕ ಪರಂಪರೆಯನ್ನು ನಾಶಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಕಾರ್ಯದರ್ಶಿ ಕೆ.ಸೋಮಶೇಖರ, ಶರಣಗೌಡ ಗೂಗಲ್, ಡಿ.ಉಮಾದೇವಿ, ಸೈದಪ್ಪ ಹೆಚ್.ಪಿ, ಸುಭಾಷ್ಚಂದ್ರ ಇದ್ದರು.