ನೋವು ನಿವಾರಕ ನಿಂಬೆಹುಲ್ಲಿನ ಕಷಾಯ

ಗ್ರೀನ್ ಟೀ, ಬ್ಲಾಕ್ ಟೀ ರೀತಿಯಲ್ಲಿ ಲೆಮನ್ ಗ್ರಾಸ್ ಕಷಾಯ ಕೂಡ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಇದು ಆರೋಗ್ಯ ವರ್ಧಿಸುವ ಗುಣ ಹೊಂದಿದೆ. ನಮ್ಮ ಮನೆಯ ಹಿತ್ತಲಿನಲ್ಲಿ ಅತ್ಯಂತ ಕಡಿಮೆ ನೀರಿದ್ದರೂ ಬೆಳೆಯಬಹುದಾದ ಲೆಮನ್ ಗ್ರಾಸ್ ಸೌಂದರ್ಯವರ್ಧಕ ಹುಲ್ಲು ಕೂಡ.

ಪ್ರತಿದಿನ ಈ ಹುಲ್ಲನ್ನು ಜಜ್ಜಿ ಪರಿಮಳವನ್ನು ಆಘ್ರಾಣಿಸುವುದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್, ಎಚ್.ಐ.ವಿ. ಇರುವವರಲ್ಲಿ ಹಾಗೂ ದೇಹದಲ್ಲಿ ಹಲವಾರು ಸಂದರ್ಭಗಳಲ್ಲಿ ರೋಗನಿರೋಧಕ ಶಕ್ತಿ ತುಂಬ ಕಡಿಮೆ ಆಗಿರುತ್ತದೆ. ಪ್ರತಿದಿನ ಎರಡು ಬಾರಿ ಲೆಮನ್ ಗ್ರಾಸ್ ಕಷಾಯದ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ನಿಂಬೆಹುಲ್ಲಿನ ಚಿಕ್ಕ ಚಿಕ್ಕ ಪೀಸ್​ಗಳನ್ನು ಅಗಿಯುವುದರಿಂದ ಬಾಯಿಯ, ವಸಡಿನ ಆರೋಗ್ಯ ಹೆಚ್ಚಾಗುತ್ತದೆ. ಬಾಯಿಯಲ್ಲಿರುವ ಬೇಡವಾದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಇದಕ್ಕಿದೆ. ಇದೊಂದು ನ್ಯಾಚುರಲ್ ನೋವುನಿವಾರಕ. ವಿವಿಧ ರೀತಿಯ ನೋವುಗಳಲ್ಲಿ ಲೆಮನ್ ಗ್ರಾಸ್ ಕಷಾಯವನ್ನು ದಿನದಲ್ಲಿ 4-5 ಬಾರಿ ಸೇವಿಸುವುದು ಸ್ವಲ್ಪ ಮಟ್ಟಿಗೆ ನೋವು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಹೊಟ್ಟೆಯಲ್ಲಿ ಯಾವಾಗಲೂ ವಾಯು ತುಂಬಿದಂತೆ ಇರುವುದು, ಅಜೀರ್ಣ, ಗ್ಯಾಸ್, ಹೊಟ್ಟೆಯುಬ್ಬರಗಳನ್ನು ನಿವಾರಿಸಲು ಈ ನಿಂಬೆಹುಲ್ಲಿನ ಕಷಾಯ ನಿಯತವಾಗಿ ಸೇವಿಸಬೇಕು. ಇದು ಮೂತ್ರವರ್ಧಕವಾಗಿ ಕೆಲಸ ಮಾಡುತ್ತದೆ. ತನ್ಮೂಲಕ ಉರಿಮೂತ್ರ ನಿವಾರಣೆ, ಕಿಡ್ನಿಯಲ್ಲಿ ಕಲ್ಲು ಕರಗಿಸುವ ಸಾಮರ್ಥ್ಯ ಹೊಂದಿದೆ.

ಮೆನೋಪಾಸ್, ಅಂದರೆ ಮುಟ್ಟು ನಿಲ್ಲುವ ಸಮಯದಲ್ಲಿ ಕೆಲವು ಮಹಿಳೆಯರಲ್ಲಿ ದೇಹ ವಿಪರೀತ ಬಿಸಿಯಾದ ಅನುಭವ ಉಂಟಾಗಿ ತೊಂದರೆ ಆಗುತ್ತಿರುತ್ತದೆ. ಈ ಚಿಹ್ನೆಯನ್ನು ಹತೋಟಿ ಮಾಡಲು ಲೆಮನ್ ಗ್ರಾಸ್ ಕಷಾಯ ಉಪಯುಕ್ತ. ಮುಂದಿನ ಸಂಚಿಕೆಯಲ್ಲಿ ಈ ನಿಂಬೆಹುಲ್ಲಿನ ಆರೋಗ್ಯಕಾರಿ ಗುಣಗಳ ಇನ್ನಷ್ಟು ಮಾಹಿತಿ ತಿಳಿದುಕೊಳ್ಳೋಣ.

One Reply to “ನೋವು ನಿವಾರಕ ನಿಂಬೆಹುಲ್ಲಿನ ಕಷಾಯ”

Comments are closed.