ಆರೋಗ್ಯವೃದ್ಧಿಗೆ ಬರಿಗಾಲಿನ ನಡಿಗೆ

ಕಲ್ಲು ಅಥವಾ ಮರಳಿನ ಮೇಲೆ ಬರಿಗಾಲಲ್ಲಿ ನಿಲ್ಲಿ. ಇದಕ್ಕಾಗಿ ಮನೆ ಕಟ್ಟುವಾಗ ಮರಳನ್ನು ಸೋಸಿ ಉಳಿಯುವ ಸಣ್ಣ ಗಾತ್ರದ ಕಲ್ಲುಗಳನ್ನು ಸಂಗ್ರಹಿಸಿ. ನಿಂತಲ್ಲೇ (ಏಕಸ್ಥಾನ) ನಡಿಗೆ ಆರಂಭಿಸಿ. ಎರಡರಿಂದ ಐದು ನಿಮಿಷಗಳವರೆಗೆ ಈ ಕ್ರಿಯೆ ಮಾಡಿ. ಇದು ಪಾದಗಳ ಬಿಂದುಗಳನ್ನು ಪ್ರಚೋದಿಸಿ ಶರೀರದ ಅವಯವಗಳ ಹಾಗೂ ಗ್ರಂಥಿಗಳ ಕಾರ್ಯಕ್ಷಮತೆಯನ್ನು, ಸ್ವಾಸ್ಥ್ಯನ್ನು ಹೆಚ್ಚಿಸುತ್ತದೆ. ಕಲ್ಲುಗಳ ಮೇಲೆ ಮಾಡುವ ಸಹಜ ನಡಿಗೆಯಿಂದ ತಲೆನೋವು, ಮೈಗ್ರೇನ್, ಸೈನಸ್, ಅಸ್ತಮಾ ಹಾಗೂ ನಿದ್ರಾಹೀನತೆ ನಿವಾರಣೆಯಾಗುತ್ತದೆ. ಇದರ ಅಭ್ಯಾಸದ ಸಂದರ್ಭದಲ್ಲಿ ನಿಮ್ಮ ಕುಲದೇವತೆಯ ಸ್ಮರಣೆ ಮಾಡಬಹುದು. ಹಿಮ್ಮಡಿ ನಡಿಗೆಯು ಮಲಬದ್ಧತೆ, ಗ್ಯಾಸ್ಟ್ರಿಕ್, ಅಸಿಡಿಟಿ, ಮಧುಮೇಹ, ಅಜೀರ್ಣ, ಮೂತ್ರಜನಕಾಂಗದ ಸಮಸ್ಯೆ ನಿವಾರಣೆಗೆ ಸಹಾಯಕವಾಗಿದೆ.

ಸೂಕ್ತ ಸ್ಥಳದಲ್ಲಿ ಪಾದರಕ್ಷೆರಹಿತವಾಗಿ ಬರಿಗಾಲಿನಲ್ಲಿ ನಡೆಯುವುದರಿಂದ ಅಥವಾ ಮರಳರಾಶಿಯಿಂದ ಆಯ್ದ ಸಣ್ಣ ಕಲ್ಲುಗಳ ಮೇಲೆ ನಿಂತಲ್ಲೇ ನಡಿಗೆಯ ಅಭ್ಯಾಸ ಮಾಡುವುದರಿಂದ ದೇಹದ ಅವಯವ ಅಥವಾ ಗ್ರಂಥಿಗಳ ಏರುಪೇರನ್ನು ಸಹಜವಾಗಿ ನಿವಾರಿಸಬಹುದು. ಇದೊಂದು ಸ್ವ-ನಿರ್ವಹಣಾ ತಂತ್ರವಾಗಿದ್ದು, ನೋವುಗಳ ಶಮನ ಸಾಧ್ಯ. ಶರೀರ ವ್ಯೂಹಗಳನ್ನು ಚೈತನ್ಯವಾಗಿಡುವ ನೈಸರ್ಗಿಕ ವಿಧಾನವೂ ಆಗಿದೆ.

ಯೋಗನಡಿಗೆಗೆ ನಿಜ ಅರ್ಥದಲ್ಲಿ ಪಾದರಕ್ಷೆಯ ಆವಶ್ಯಕತೆಯಿಲ್ಲ. ಬರಿಗಾಲಿನಲ್ಲಿ ಸಹಜವಾಗಿ ನೆಲದ ಮೇಲೆ ನಡೆಯುವುದೇ ಹಿತ. ಇದರ ಹಿತಾನುಭವ ಅನುಭವಿಸಿ ನೋಡಿ. ಒದ್ದೆ ಹಸಿರು ಹುಲ್ಲಿನ ಮೇಲೆ, ಒದ್ದೆ ಕಲ್ಲಿನ ಮೇಲೆ, ಮಣ್ಣಿನ ಮೇಲೆ, ಮರಳಿನಲ್ಲಿ, ವನದಲ್ಲಿ, ನದೀತೀರದಲ್ಲಿ ನಡೆಯುವುದರಿಂದ ಪಾದದಲ್ಲಿರುವ ದೇಹದ ಅವಯವಗಳು ಹಾಗೂ ಗ್ರಂಥಿಗಳಿಗೆ ನೇರ ಸಂಬಂಧವಿರುವ ಸೂಕ್ಷ್ಮ ನರತಂತುಗಳಿಗೆ ಉತ್ತಮ ಪ್ರಚೋದನೆ ಪ್ರಾಪ್ತವಾಗುತ್ತದೆ.

ಕಣ್ಣಿನ ದೋಷ, ವಾತ, ಅತಿ ಉಷ್ಣತೆ, ಅನಿದ್ರೆ ದೂರವಾಗುತ್ತದೆ. ನಿಜವಾದ ಆರೋಗ್ಯವನ್ನು ಅನುಭವಿಸಲು ಹಾಗೂ ಸುತ್ತಮುತ್ತಲಿನ ವಾತಾವರಣದ ಏರಿಳಿತಗಳಲ್ಲಿ, ವೈಪರೀತ್ಯಗಳಲ್ಲಿ ತೊಂದರೆಗೀಡಾಗದೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾದರೆ ಶರೀರವನ್ನು ಅದಕ್ಕೆ ತಕ್ಕಂತೆ ಹದ ಮಾಡಬೇಕು. ಇದಕ್ಕೆ ಸುಲಭೋಪಾಯವೆಂದರೆ ಯೋಗನಡಿಗೆಯ ಅನುಸಂಧಾನ. ಇದರ ಅನುಷ್ಠಾನದಿಂದ ಉಷ್ಣ, ಶೀತ, ಮಳೆ, ಗಾಳಿಗಳಲ್ಲಿ ಶರೀರದ ಆರೋಗ್ಯ ಕೆಡದಂತೆ ಕಾಪಾಡಿಕೊಳ್ಳಬಹುದು.

ಬರಿಗಾಲಲ್ಲಿ ನಡೆಯುವುದರಿಂದ ಒತ್ತಡ ಚಿಕಿತ್ಸೆ (ಆಕ್ಯುಪ್ರೆಶರ್) ಪರಿಣಾಮ ಲಭಿಸುತ್ತದೆ. ಪ್ರತಿಕ್ರಿಯಾತ್ಮಕ ಬಿಂದುಗಳು (ರಿಫೆ್ಲಕ್ಸ್ ಪಾಯಿಂಟ್ಸ್) ಸಹ ಪ್ರಚೋದನೆಗೊಳ್ಳುತ್ತವೆ. ಪಾದಗಳಲ್ಲಿರುವ ಸೂಕ್ಷ್ಮ ನರತಂತುಗಳಿಗೆ ದೇಹದ ವಿವಿಧ ವ್ಯೂಹ, ಗ್ರಂಥಿ, ಕ್ರಿಯೆ, ಮಂಡಲ, ಜೀವಕೋಶಗಳೊಂದಿಗೆ ಸಹಜ ಸಂಪರ್ಕವಿರುವುದು ನಿಜವಷ್ಟೇ. ಬರಿಗಾಲಿನಲ್ಲಿ ನಡೆಯುವುದರಿಂದ ಪಾದಗಳ ಪ್ರತಿಕ್ರಿಯಾತ್ಮಕ ಬಿಂದುಗಳ ಪ್ರಚೋದನೆಯಿಂದ ಇಡೀ ಶರೀರಕ್ಕೆ ಉತ್ತಮ ಒತ್ತಡ, ಚೋದನೆ ಲಭಿಸಿ ಚೈತನ್ಯಯುಕ್ತವಾಗಲು ಇದು ಸಹಕಾರಿ.

ಪಾದರಕ್ಷೆರಹಿತ ನಡಿಗೆಯಿಂದ ಪ್ರಾರಂಭದ ದಿನಗಳಲ್ಲಿ ಕಾಲು ಉರಿ, ನೋವು ಕಾಣಿಸಿಕೊಳ್ಳಬಹುದು. ಆದರೆ ಹೆದರಬೇಡಿ. ಶ್ರದ್ಧೆ, ಸತತ ಅನುಸರಣೆಯಿಂದ ಕ್ರಮೇಣ ಯಶಸ್ಸು ಸಿಗುತ್ತದೆ. ಮಧುಮೇಹ ಇರುವವರು ಪಾದರಕ್ಷೆ ಇಲ್ಲದೆ ನಡೆಯುವಾಗ ಸ್ವಚ್ಛತೆ ಇರುವ ಸ್ಥಳದಲ್ಲಿ ಮಾತ್ರ ನಡಿಗೆ ಮಾಡಿ. ನಿಮ್ಮ ಕಾಲುಗಳ ಬಗ್ಗೆ ಗಮನ ಇರಲಿ.

One Reply to “ಆರೋಗ್ಯವೃದ್ಧಿಗೆ ಬರಿಗಾಲಿನ ನಡಿಗೆ”

  1. Same principle as Chinese Acupressure points. You can apply pressure on these areas
    to get relief.

Comments are closed.