ಆರೋಗ್ಯಕ್ಕೆ ಆಡುಸೋಗೆ

ಡುಸೋಗೆ ಎಲ್ಲ ಕಡೆಗಳಲ್ಲಿ ಸಿಗುವಂತಹ ಔಷಧಿಯ ಸಸ್ಯ. ಇದರ ಎಲೆಗಳು, ಬೇರು, ಹೂವು ಎಲ್ಲವುಗಳೂ ಔಷಧೀಯ ಗುಣಗಳನ್ನು ಹೊಂದಿವೆ. ಸಾವಿರಾರು ವರ್ಷಗಳಿಂದ ಭಾರತೀಯ ಔಷಧೀಯಪದ್ಧತಿಯಲ್ಲಿ ಇದು ಬಳಕೆಯಲ್ಲಿದ್ದು, ಇದಕ್ಕೆ ವಿಶೇಷ ಸ್ಥಾನಮಾನವನ್ನೇ ನೀಡಲಾಗಿದೆ.

ಶ್ವಾಸಕೋಶ ಸಂಬಂಧಿತ ಸಮಸ್ಯೆಗಳ ನಿರ್ವಹಣೆಯಲ್ಲಿ ಅದರಲ್ಲಿಯೂ ಮುಖ್ಯವಾಗಿ ಬ್ರಾಂಕೈಟಿಸ್, ಟಿ.ಬಿ., ಶೀತ, ನೆಗಡಿ, ಕಫ ನಿರ್ವಹಣೆಗೆ ಅತ್ಯಂತ ಪರಿಣಾಮಕಾರಿ. ಅಸ್ತಮಾವನ್ನು ಕಡಿಮೆ ಮಾಡುವಲ್ಲಿ ಅದ್ಭುತ ಕೆಲಸವನ್ನು ಮಾಡುತ್ತದೆ. ಗಂಟಲುನೋವು ನಿವಾರಣೆಗೆ ಆಡುಸೋಗೆಯ ಕಷಾಯ ಒಳ್ಳೆಯದು. ಇದರ ಆಂಟಿ ಬ್ಯಾಕ್ಟೀರಿಯಲ್ (ದೇಹದಲ್ಲಿರುವ ಮಾರಕ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುವ) ಹಾಗೂ ಆಂಟಿ ಇನ್​ಪ್ಲಮೇಟರಿ (ಉರಿಯೂತವನ್ನು ಕಡಿಮೆ ಮಾಡುವ) ಗುಣವು ಗಾಯಗಳನ್ನು ಗುಣ ಮಾಡಲು ಸಹಕರಿಸುತ್ತವೆ. ಅಲ್ಲದೆ ಆಮವಾತವನ್ನು ಹತೋಟಿಗೆ ತರುವಲ್ಲಿಯೂ ಅನುಕೂಲಕಾರಿ. ದೇಹದ ಒಳಭಾಗದಲ್ಲಿ ಆಗಬಹುದಾದ ರಕ್ತಸ್ರವಿಕೆಯನ್ನು ಕಡಿಮೆ ಮಾಡಲು ಹಾಗೂ ಗಾಯಗಳಿಂದಾಗುವ ರಕ್ತಸ್ರಾವಗಳನ್ನು ನಿಲ್ಲಿಸಲು ಸಹಾಯವಾಗುತ್ತದೆ.

ಆಡುಸೋಗೆಯ ಕಷಾಯ ಸೇವನೆಯು ರಕ್ತವನ್ನು ಶುದ್ಧಿ ಮಾಡುವ ಗುಣಗಳನ್ನು ಹೊಂದಿದೆ. ಒಂದೆರಡು ಚಮಚ ಆಡುಸೋಗೆಯ ಹಸಿ ಜ್ಯೂಸ್ ಭೇದಿಯನ್ನು ನಿಯಂತ್ರಿಸುತ್ತದೆ. ಹಿಂದಿನ ಕಾಲಗಳಲ್ಲಿ ಹೆರಿಗೆ ನೋವು ಬಂದಾಗ ಹೆರಿಗೆ ತ್ವರಿತವಾಗಿ ಆಗಲು ಇದನ್ನು ಔಷಧಿಯಾಗಿ ನೀಡುತ್ತಿದ್ದರು. ಆಡುಸೋಗೆ ಎಲೆಯ ಕಷಾಯವನ್ನು ಕುಡಿಯುವುದು ಮುಟ್ಟಿನ ಸಮಸ್ಯೆಗಳನ್ನು ಸರಿಪಡಿಸುವಲ್ಲಿ ಸಹಕಾರಿ. ಆಡುಸೋಗೆಯ ಹೂವುಗಳ ಕಷಾಯವನ್ನು 45 ದಿನಗಳ ಕಾಲ ಸೇವಿಸುವುದರಿಂದ ದೇಹದಲ್ಲಿ ರಕ್ತಶುದ್ಧಿಯಾಗುವುದಲ್ಲದೆ ದೇಹದ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಆಡುಸೋಗೆಯ ಎಲೆಗಳನ್ನು ಬೆಚ್ಚಗೆ ಮಾಡಿ ಮಕ್ಕಳ ಎದೆ ಹಾಗೂ ಬೆನ್ನಿನ ಮೇಲೆ ಇರಿಸುವುದರಿಂದ ಕಫ ಕರಗಿ ಉಸಿರಾಟವು ಸುಗಮವಾಗುತ್ತದೆ.