More

    ಬೆನಕನಹಳ್ಳಿ ತಿರುಗಣಿ ರಥೋತ್ಸವ ಸಂಭ್ರಮ

    ಸಾಸ್ವೆಹಳ್ಳಿ: ಹೋಬಳಿಯ ಐತಿಹಾಸಿಕ ಹಿನ್ನೆಲೆಯ ಬೆನಕನಹಳ್ಳಿ ಗ್ರಾಮದ ಬೆನಕೇಶ್ವರ ಸ್ವಾಮಿ ತಿರುಗಣಿ ರಥೋತ್ಸವ ಗುರುವಾರ ಬೆಳಗ್ಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

    ರಥವನ್ನು ಕನಕಾಂಬರ, ಸೇವಂತಿಗೆ, ಜಾಜಿ ಮಲ್ಲಿಗೆ, ಆಳೆತ್ತರದ ಹೂವಿನ ಮತ್ತು ರುದ್ರಾಕ್ಷಿ ಹಾರ, ಬಣ್ಣದ ಬಟ್ಟೆ, ಬಾಳೆಗೊನೆಗಳಿಂದ ಸಿಂಗರಿಸಲಾಗಿತ್ತು.

    ಚಿಕ್ಕಬಾಸೂರು ಬಸವೇಶ್ವರ, ಬೆನಕೇಶ್ವರ ಸ್ವಾಮಿ ಉತ್ಸವ ಮೂರ್ತಿಗಳು ರಥವೇರಿದ ಬಳಿಕ ಭಕ್ತರು ಜೈಕಾರಗಳೊಂದಿಗೆ ತೇರನ್ನು ಎಳೆದರು. ದೇವಸ್ಥಾನ ಹಾಗೂ ರಥೋತ್ಸವದ ಮುಂಭಾಗ ಒಣಕೊಬ್ಬರಿ ಸುಟ್ಟು ಹರಕೆ ಸಲ್ಲಿಸಿದರು. ಹಣ್ಣು ಕಾಯಿ ಒಡೆಸಿ ಸಕಲ ಇಷ್ಟಾರ್ಥಗಳ ನೆರವೇರಿಸಲಿ ಹಾಗೂ ಮಳೆ, ಬೆಳೆ ಸಮೃದ್ಧಿಯಾಗಲೆಂದು ದೇವರಲ್ಲಿ ಬೇಡಿಕೊಂಡರು.

    ಆಂಜನೇಯ, ಬೀರಪ್ಪ, ಕರಿಯಮ್ಮ, ದುರ್ಗಮ್ಮ ದೇವಿ ಉತ್ಸವ ನಡೆಸಿ ಮೂರ್ತಿಗಳನ್ನು ಬೆನಕೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.

    ಭಕ್ತರು ಪಾನಕ ಹಂಚಿದರು, ಮಕ್ಕಳ ಜವಳ ಕಾರ್ಯಗಳು ನಡೆದವು. ಸಂಜೆ ಓಕುಳಿ ಉತ್ಸವದ ನಂತರ ದೇವರನ್ನು ತುಂಗಭದ್ರಾ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ ರಾಜಬೀದಿ ಮೆರವಣಿಗೆ ಮೂಲಕ ಮೂಲಸ್ಥಳದಲ್ಲಿ ಮರುಪ್ರತಿಷ್ಠಾಪನೆ ಮಾಡಲಾಯಿತು.

    ತಿರುಗುಣಿ ವಿಶೇಷ: ತಿರುಗುಣಿ ರಥೋತ್ಸವದಲ್ಲಿ ರಥವನ್ನು ಎರಡು ಭಾಗ ಮಾಡಲಾಗುತ್ತದೆ. ಕುಂಬಾರನ ಚಕ್ರದ ಮಾದರಿಯಲ್ಲಿ ತಲೆಯ ಭಾಗಕ್ಕೆ ಬೇರಿಂಗ್ ಅಳವಡಿಸಿ ಚಕ್ಕಡಿ ಗಾಲಿ ಬಳಸಿ ಇದನ್ನು ನಿರ್ಮಿಸಲಾಗುತ್ತದೆ. ರಥದ ಒಳಗಡೆ ಇರುವ ಭಕ್ತರು ಚಕ್ರವನ್ನು ಕುಂಬಾರರ ಗಾಲಿ ತಿರುಗಿಸಿದಂತೆ ತಿರುಗಿಸುತ್ತಾರೆ. ಆಗ ರಥದ ಮೇಲ್ಭಾಗವು ಬುಗುರಿಯಂತೆ ತಿರುಗುತ್ತದೆ. ಇದು ನೋಡುಗರ ಗಮನವನ್ನು ಸೆಳೆಯುತ್ತದೆ.

    ಸಾಸ್ವೆಹಳ್ಳಿ ಹೋಬಳಿಯ ಬೆನಕನಹಳ್ಳಿ ಗ್ರಾಮದ ಬೆನಕೇಶ್ವರ ಸ್ವಾಮಿ ತಿರುಗುಣಿ ರಥೋತ್ಸವವು ಗುರುವಾರ ಬೆಳಗ್ಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts