ಚನ್ನಕೇಶವ ದೇಗುಲದಲ್ಲಿ ಕಾನೂನು ಮೀರಿ ವಿವಾಹ

ಬೇಲೂರು: ಐತಿಹಾಸಿಕ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ವಿವಾಹ ಮತ್ತಿತರ ಕಾರ್ಯಕ್ರಮಗಳು ಕಾನೂನು ಮೀರಿ ನಡೆಯುತ್ತಿದ್ದರೂ ಆಡಳಿತ ಮಂಡಳಿ ಕಣ್ಮುಚ್ಚಿ ಕುಳಿತಿದೆ.

ಹೊಯ್ಸಳರ ಕಾಲದ ಸುಪ್ರಸಿದ್ಧ ದೇವಾಲಯ ಇದಾಗಿದ್ದು, ವಾಸ್ತು ಶಿಲ್ಪಕ್ಕೆ ಯಾವುದೇ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ದೇವಾಲಯ ಆಡಳಿತ ಮಂಡಳಿ ಕೆಲ ನಿರ್ಬಂಧ ಹಾಕಿಕೊಂಡಿದೆ. ಈ ಕಾರಣಕ್ಕಾಗಿಯೆ ಅನೇಕ ಚಲನಚಿತ್ರಗಳ ಚಿತ್ರೀಕರಣವನ್ನು ನಿಷೇಧಿಸಿದ ನಿದರ್ಶನಗಳಿವೆ.

ಆದರೆ ಬುಧವಾರ ಆಡಳಿತ ಮಂಡಳಿಯ ಪರವಾನಗಿ ಪಡೆಯದೆ ಅಮೇರಿಕ ಮೂಲದ ವರ ಹಾಗೂ ತಾಲೂಕಿನ ಹಂದ್ರಾಳು ಗ್ರಾಮದ ಯುವತಿಯ ವಿವಾಹ ನೆರವೇರಿದೆ. ಅನಧಿಕೃತಕವಾಗಿ ದೇವಾಲಯ ಆವರಣದಲ್ಲಿ ದೀಪ ಹಾಗೂ ದೇವಿಯ ವಿಗ್ರಹವನ್ನಿಟ್ಟು ಗಂಗಾ ಪೂಜೆ ನಡೆಸಿದ್ದಲ್ಲದೆ, ಪೂಜಾ ಕಾರ್ಯಗಳಿಗೆ ಉಪಯೋಗಿಸುವ ಹೋಮ ಕುಂಡವನ್ನು ಬಳಸಿ ದೇವರ ಗರ್ಭಗುಡಿಯಲ್ಲಿ ವಧುವರರು ಹಾರ ಬದಲಿಸಿಕೊಂಡಿದ್ದಾರೆ. ಐತಿಹಾಸಿಕ ದೇವಾಲಯದ ಪಾವಿತ್ರೃ ಹಾಳು ಮಾಡುವ ಕೆಲಸ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.