ಶ್ರೀ ದೊಡ್ಡಮ್ಮ, ಚಿಕ್ಕಮ್ಮದೇವಿ ಅದ್ದೂರಿ ಕೊಂಡೋತ್ಸವ

ಬೇಲೂರು: ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಶ್ರೀ ದೊಡ್ಡಮ್ಮ, ಚಿಕ್ಕಮ್ಮದೇವಿ ದೇವಸ್ಥಾನದಲ್ಲಿ ಮಂಗಳವಾರ ಮಧ್ಯಾಹ್ನ ವಿಜೃಂಭಣೆಯಿಂದ ಕೊಂಡೋತ್ಸವ ನೆರವೇರಿತು.


ಬೇಲೂರು ಗ್ರಾಮ ದೇವತೆಗಳಾದ ಅಂತರ ಘಟ್ಟಮ್ಮ, ದುರ್ಗಮ್ಮನವರ ಕೊಂಡೋತ್ಸವ ಹಾಗೂ ಸಿಡಿ ಮಹೋತ್ಸವಗಳ ನಂತರ ಶ್ರೀ ದೊಡ್ಡಮ್ಮ ಚಿಕ್ಕಮ್ಮ ದೇವರ ಕೊಂಡೋತ್ಸವ ನಡೆಯುವುದು ವಾಡಿಕೆ. ಅದರಂತೆ ಮಂಗಳವಾರ ಬೆಳಗ್ಗೆಯಿಂದಲೇ ಶ್ರೀ ದೊಡ್ಡಮ್ಮ ಚಿಕ್ಕಮ್ಮ ದೇಗುಲದಲ್ಲಿ ಅರ್ಚಕ ಮಂಜುನಾಥ್ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು.


ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ವಿವಿಧ ಪರಿವಾರದ ದೇವರುಗಳನ್ನು ಪಟ್ಟಣ ಸಮೀಪದ ವಿಷ್ಣು ಸಮುದ್ರ ಕಲ್ಯಾಣಿಯಲ್ಲಿ ಗಂಗಾಸ್ನಾನಕ್ಕೆ ಕರೆದೊಯ್ದು, ಅಲ್ಲಿ ಕಳಸ ಪ್ರತಿಷ್ಠಾಪಿಸಿ ಅಭಿಷೇಕದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.


ಅಂಬೇಡ್ಕರ್ ನಗರದ ಕಟ್ಟೆ ಮಾರಮ್ಮ ದೇಗುಲದ ಮುಂದೆ ಶ್ರೀ ದೊಡ್ಡಮ್ಮ, ಚಿಕ್ಕಮ್ಮ ದೇವರನ್ನು ಹೊತ್ತ ಭಕ್ತರು, ದೇವರ ಕಳಸ ಹೊತ್ತವರು, ಪೀಠ ಹೊತ್ತವರು ಹಾಗೂ ಹರಕೆ ಹೊತ್ತವರು ಕೊಂಡ ಹಾಯ್ದರು.
ರಾತ್ರಿ 8 ಗಂಟೆ ಸಮಯದಲ್ಲಿ ದೊಡ್ಡಮ್ಮ, ಚಿಕ್ಕಮ್ಮ ದೇವರು ಹಾಗೂ ಲೋಕದಮ್ಮನವರ ಕಳಸವನ್ನು ವಿಶೇಷವಾಗಿ ಪೂಜಿಸಿ ಬೀಳ್ಕೊಡಲಾಯಿತು. ಕೊಂಡೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಪ್ರಸಾದವನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *