ಗೊಬ್ಬರದಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್

ಬೇಲೂರು: ಪಟ್ಟಣದ ನೆಹರು ನಗರದ ಗೊಬ್ಬರದಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಲಕ್ಷಾಂತರ ರೂ.ಗಳ ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಇನ್ನಿತರೆ ವಸ್ತುಗಳು ಸುಟ್ಟು ಹೋಗಿವೆ.

ವಸಂತಮ್ಮ ಟ್ರೇಡರ್ಸ್‌ನಲ್ಲಿ ಈ ಅವಘಡ ಸಂಭವಿಸಿದೆ.ಗುರುವಾರ ರಾತ್ರಿ 7.30ರ ಸಮಯದಲ್ಲಿ ಅಂಗಡಿಯೊಳಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದೆ. ಇದರಿಂದ ಅಂಗಡಿಯಲ್ಲಿದ್ದ ವಸ್ತುಗಳಿಗೆ ಬೆಂಕಿ ತಗುಲಿ ದಟ್ಟ ಹೊಗೆ ಆವರಿಸಿದೆ. ಇದನ್ನು ಗಮನಿಸಿದ ಪಕ್ಕದ ಅಂಗಡಿ ಮಾಲೀಕರು ತಕ್ಷಣ ಅಗ್ನಿ ಶಾಮಕ ದಳದವರಿಗೆ ಮಾಹಿತಿ ನಿಡಿದ್ದಾರೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಇತರೆಡೆಗೆ ವ್ಯಾಪಿಸದಂತೆ ತಡೆಯುವಲ್ಲಿ ಯಶಸ್ವಿಯಾದರು. ಅಷ್ಟರಲ್ಲಾಗಲೇ ಅಂಗಡಿಯೊಳಗಿದ್ದ ಕ್ರಿಮಿನಾಶಕ ಸೇರಿದಂತೆ ಗೊಬ್ಬರ ಇನ್ನಿತರೆ ಕೃಷಿ ಸಲಕರಣೆಯ ವಸ್ತುಗಳು ಸುಟ್ಟು ಹೋಗಿವೆ.

ಸ್ಥಳಕ್ಕೆ ಪಿಎಸ್‌ಐ ಜಗದೀಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.