ಹೆಣ್ಣು ಮಗುವಾಗಿದ್ದಕ್ಕೆ ಹಸುಳೆಯ ಕತ್ತು ಹಿಸುಕಿದ ತಂದೆ

ಚಿಕ್ಕಮಗಳೂರು: ಹೆಣ್ಣು ಮಗು ಎಂದು ಬೇಸರಗೊಂಡ ತಂದೆಯೊಬ್ಬ 40 ದಿನದ ಹಸುಳೆಯ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ತಾಲೂಕಿನ ಬೂಚೇನಹಳ್ಳಿ ಕಾವಲ್ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮನುಷ್ಯತ್ವ ಕಳೆದುಕೊಂಡು ಹಸುಳೆ ಕೊಲೆ ಮಾಡಿದ ಹಾಸನ ಜಿಲ್ಲೆ ಬೇಲೂರು ತಾಲೂಕಿನ ನರಸೀಪುರ ಗ್ರಾಮದ ಮಂಜುನಾಥ್ ಜೈಲು ಸೇರಿದ್ದಾನೆ.

ಈತ ಚಿಕ್ಕಮಗಳೂರು ತಾಲೂಕಿನ ಬೂಚೇನಹಳ್ಳಿ ಕಾವಲ್ ಗ್ರಾಮದ ಮುನಿಸ್ವಾಮಿ ಎಂಬುವರ ಮಗಳು ಅರ್ಪಿತಾ ಅವರನ್ನು ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದ. ನರಸೀಪುರ ಗ್ರಾಮದಲ್ಲೇ ಸುಪ್ರೀತಾಗೆ ಹೆರಿಗೆಯಾಗಿತ್ತು. ಆರೈಕೆಗಾಗಿ ತವರು ಮನೆ ಬೂಚೇನಹಳ್ಳಿ ಕಾವಲ್​ಗೆ ಬಂದಿದ್ದರು. ಜೂ.18ರಂದು ಬೂಚೇನಹಳ್ಳಿಗೆ ಬಂದಿದ್ದ ಮಂಜುನಾಥ್ ಹಿತ್ತಲಲ್ಲಿ ಪತ್ನಿ ಬಟ್ಟೆ ತೊಳೆಯುತ್ತಿದ್ದಾಗ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದ.

ಸುಪ್ರೀತಾ ಒಳಗೆ ಬಂದು ನೋಡಿದಾಗ ಮಗುವಿನ ಕುತ್ತಿಗೆ ಸುತ್ತ ಕಪ್ಪು ಗುರುತು ಕಾಣಿಸಿದ್ದು, ಮೂಗಿನಲ್ಲಿ ರಕ್ತ ಬರುತ್ತಿತ್ತು. ಆಗ ಮಂಜುನಾಥ್ ತನಗೂ ಈ ಘಟನೆಗೂ ಸಂಬಂಧ ಇಲ್ಲದವರಂತೆ ಮೌನವಾಗಿದ್ದ. ಸುಪ್ರೀತಾ ಅಳುವುದನ್ನು ನೋಡಿದ ಸುತ್ತಮುತ್ತಲಿನವರು ವಿಚಾರ ಮಾಡಿದಾಗ ಮಂಜುನಾಥ್ ಸಹ ವಿಪರೀತ ರೋದಿಸುತ್ತಿದ್ದ.

ಮಗು ಆಕಸ್ಮಿಕವಾಗಿ ಮೃತಪಟ್ಟಿರುವುದಾಗಿ ಕುಟುಂಬದವರು ಹಾಗೂ ಗ್ರಾಮಸ್ಥರನ್ನು ನಂಬಿಸಿದ್ದ. ನಂತರ ತಾನೇ ಕತ್ತಲಾದ ಮೇಲೆ ಕುಟುಂಬದವರನ್ನು ಕರೆದುಕೊಂಡು ಹೋಗಿ ಮಾವ ಮುನಿಸ್ವಾಮಿ ಹೊಲದಲ್ಲಿ ಮಗುವಿನ ಅಂತ್ಯಕ್ರಿಯೆ ಮಾಡಿದ್ದ.

ಫೋಟೊ ವೈರಲ್​ನಿಂದ ಸುಳಿವು: ಅಂತ್ಯಕ್ರಿಯೆಗೂ ಮೊದಲು ಸ್ಥಳಕ್ಕೆ ಆಗಮಿಸಿದ್ದ ಗ್ರಾಮದ ಆಶಾ ಕಾರ್ಯಕರ್ತೆಯೊಬ್ಬರು ಮೃತ ಮಗುವಿನ ಮೂರ್ನಾಲ್ಕು ಫೋಟೊ ತೆಗೆದಿದ್ದರು. ಚಿತ್ರವನ್ನು ಅವರು ಕೆಲವರಿಗೆ ಕಳಿಸಿದ್ದರು. ಚಿತ್ರದಲ್ಲಿ ಶಿಶುವಿನ ಕುತ್ತಿಗೆ ಕಪ್ಪಾಗಿರುವುದು, ಮೂಗಿನಲ್ಲಿ ರಕ್ತ ಬಂದ ಗುರುತು ಕಾಣಿಸುತ್ತಿತ್ತು. ಶಿಶುವಿನ ಅಂತ್ಯಕ್ರಿಯೆ ನಂತರ ಫೋಟೊ ಗ್ರಾಮದಲ್ಲಿ ವೈರಲ್ ಆಯಿತು. ಅನುಮಾನ ಬಂದ ಗ್ರಾಮಸ್ಥರು ರಾತ್ರಿ ಮಂಜುನಾಥ್​ನನ್ನು ಕೂರಿಸಿಕೊಂಡು ವಿಚಾರಣೆ ಮಾಡಿದರು. ಹೆಣ್ಣು ಹುಟ್ಟಿದ ಕಾರಣಕ್ಕೆ ನಾನೇ ಕೊಲೆ ಮಾಡಿದ್ದೇನೆ. ಈ ವಿಚಾರ ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈತನ ಕೃತ್ಯದಿಂದ ಕೋಪಗೊಂಡ ತಾಯಿ ಸುಪ್ರೀತಾ ಬುಧವಾರ ಬೆಳಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ್ದ ಪೊಲೀಸರು, ಉಪ ವಿಭಾಗಾಧಿಕಾರಿ ಕೆ.ಎಚ್.ಶಿವಕುಮಾರ್ ಸಮ್ಮುಖದಲ್ಲಿ ಶಿಶುವಿನ ಕಳೇಬರವನ್ನು ಸಮಾಧಿಯಿಂದ ಹೊರತೆಗೆಸಿ ವೈದ್ಯರಿಂದ ಪರೀಕ್ಷೆ ಮಾಡಿಸಿದರು. ಆರೋಪಿ ಮಂಜುನಾಥನನ್ನು ಪೊಲೀಸರು ಬಂಧಿಸಿದ್ದಾರೆ.

ನಿಹಾರಿಕಾ ಎಂದು ನಾಮಕರಣ: ಹೆಣ್ಣು ಹುಟ್ಟಿದ್ದಕ್ಕೆ ಪತಿ ಮಂಜುನಾಥ್ ಮೊದಲಿಂದಲೂ ತೀವ್ರ ಬೇಸರಗೊಂಡಿದ್ದ. ಆದರೆ ಸುಪ್ರೀತಾ ತೀವ್ರ ಖುಷಿಯಾಗಿದ್ದರು. ಕನಸಿನ ಕೂಸಿಗೆ ತಾನೆ ಆಯ್ಕೆ ಮಾಡಿದ ಹೆಸರು ನಿಹಾರಿಕಾ ಎಂದು ನಾಮಕರಣ ಮಾಡಿದ್ದಳು. ಗಂಡನಿಗೆ ಬೇಸರವಿದ್ದರೂ ತನಗೇನು ಬೇಸರವಿಲ್ಲವೆಂದು ಹಲವರ ಬಳಿ ಹೇಳಿಕೊಂಡಿದ್ದರು. ಇಷ್ಟಪಟ್ಟು ಇಟ್ಟ ಹೆಸರಿನ ತನ್ನ ಹಸುಗೂಸಿಗೆ ಪತಿಯೇ ಕಂಠಕನಾಗಿದ್ದರಿಂದ ಸುಪ್ರೀತಾ ತಲ್ಲಣಗೊಂಡಿದ್ದಾರೆ.

Leave a Reply

Your email address will not be published. Required fields are marked *