ಕೆಎಸ್ಸಾರ್ಟಿಸಿ ರೆಸ್ಟ್‌ರೂಂನಲ್ಲಿ ಸಿಬ್ಬಂದಿ ಮೃತ್ಯು

ಬೆಳ್ತಂಗಡಿ: ಕರ್ತವ್ಯ ಮುಗಿಸಿ ಬಂದು ರಾತ್ರಿ ಧರ್ಮಸ್ಥಳ ಕೆಎಸ್ಸಾರ್ಟಿಸಿ ಘಟಕದ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದ ಸಿಬ್ಬಂದಿ ವಿಜಯಪುರದ ಸುರೇಶ್ ಬಾಬು ಬಡಿಗೇರ್(30) ಎಂಬುವರು ಮೃತಪಟ್ಟಿದ್ದಾರೆ.

10 ವರ್ಷಗಳಿಂದ ಕೆಎಸ್ಸಾರ್ಟಿಸಿಯಲ್ಲಿ ಚಾಲಕ ಹಾಗೂ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್ ಬಾಬು ಬಡಿಗೇರ್ ಹೊಸಪೇಟೆಯಿಂದ ಧರ್ಮಸ್ಥಳಕ್ಕೆ ಬರುವ ಬಸ್‌ನಲ್ಲಿ ಕರ್ತವ್ಯ ಮುಗಿಸಿ ಬಂದು ಭಾನುವಾರ ರಾತ್ರಿ 10ಕ್ಕೆ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದರು. ಆದರೆ ಬೆಳಗ್ಗೆ ಏಳದೇ ಇರುವುದನ್ನು ಕಂಡು ಇತರ ಸಿಬ್ಬಂದಿ ಎಬ್ಬಿಸಲೆತ್ನಿಸಿದಾಗ ಅವರು ಮೃತರಾಗಿರುವುದು ಬೆಳಕಿಗೆ ಬಂದಿದೆ.

ಘಟನೆ ಬಗ್ಗೆ ಧರ್ಮಸ್ಥಳ ಘಟಕ ವ್ಯವಸ್ಥಾಪಕ ಶಿವರಾಮ ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಸುರೇಶ್ ಬಾಬು ಬಡಿಗೇರ್ ಅವರಿಗೆ ಈ ಹಿಂದೆ ಹೃದಯದ ಶಸ್ತ್ರಚಿಕಿತ್ಸೆ ನಡೆದಿದ್ದು, ಹೀಗಾಗಿ ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಜೆ ನೀಡದ ಆರೋಪ
ಧರ್ಮಸ್ಥಳ ಘಟಕದಲ್ಲಿ ಕಳೆದ 10 ದಿನಗಳ ಹಿಂದೆ ಇದೇ ರೀತಿ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದು, ಸಿಬ್ಬಂದಿಗೆ ಅನಾರೋಗ್ಯವಿದ್ದರೂ ರಜೆ ನೀಡದೆ ದುಡಿಸಲಾಗುತ್ತಿದೆ ಎಂದು ಬೆಳ್ತಂಗಡಿ ಸಿಐಟಿಯು ಆರೋಪಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಘಟಕ ವ್ಯವಸ್ಥಾಪಕರು, ಸಿಬ್ಬಂದಿಗೆ ಅಗತ್ಯ ರಜೆಗಳನ್ನು ನೀಡಲಾಗುತ್ತಿದೆ. ಯಾವುದೇ ಸಮಸ್ಯೆಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ.