ಬಿಸಿಯೂಟಕ್ಕೆ ವಿದ್ಯಾರ್ಥಿಗಳೇ ಬೆಳೆದ ಸಾವಯವ ತರಕಾರಿ

ಮನೋಹರ್ ಬಳಂಜ ಬೆಳ್ತಂಗಡಿ

ಗಣಿತ ಲೋಕ, ಔಷಧೀಯ ವನ, ಹಿಂದಿ ಸ್ಮಾರ್ಟ್ ಕ್ಲಾಸ್ ಮೊದಲಾದ ಅದ್ವಿತೀಯ ಕಾಣಿಕೆಗಳನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಿ ಹೆಸರುವಾಸಿಯಾಗಿರುವ ಬೆಳ್ತಂಗಡಿ ತಾಲೂಕಿನ ನಡ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಾವಯವ ಕೃಷಿ ಕೈತೋಟ ಮಾಡಿ ಅಧಿಕ ಇಳುವರಿ ಪಡೆದು ಯಶಸ್ಸು ಕಂಡಿದ್ದಾರೆ.

ಶಾಲೆಯಲ್ಲಿ ಕೊಯ್ಲು ಮಾಡಿಟ್ಟಿರುವ ತರಕಾರಿ ನೋಡುವಾಗ ವಿದ್ಯಾರ್ಥಿಗಳ ಮುಖದಲ್ಲಿ ಸಾರ್ಥಕ ಭಾವ ಕಾಣುತ್ತಿದೆ. ತಾವೇ ಬೆಳೆದ ಸಾವಯವ ತರಕಾರಿ ಬಿಸಿಯೂಟದಲ್ಲಿ ಸವಿಯುವಾಗ ವಿದ್ಯಾರ್ಥಿಗಳ ಸಂತೋಷ ಅಷ್ಟಿಷ್ಟಲ್ಲ.

ಶಾಲಾಭಿವೃದ್ಧಿ ಸಮಿತಿ ಹಾಗೂ ಪಾಲಕರ ಸಹಕಾರದಿಂದ ಒಂದು ಎಕರೆಯಷ್ಟು ಜಾಗ ಸಮತಟ್ಟುಗೊಳಿಸಿ, ಕೃಷಿ ಇಲಾಖೆ ನೆರವಿನಿಂದ ಮೈಸೂರಿನಿಂದ ಸಾವಯವ ಬೀಜ ತರಿಸಿ ನಾಟಿ ಮಾಡಲಾಗಿದೆ. ಪ್ರಗತಿಪರ ಕೃಷಿಕ ಪ್ರಭಾಕರ ಮಯ್ಯ ಹಾಗೂ ಅಜಿತ್ ಆರಿಗರ ಮಾರ್ಗದರ್ಶನದಲ್ಲಿ ಕೋಳಿ ಗೊಬ್ಬರ ಹಾಗೂ ಕುರಿ ಗೊಬ್ಬರ ಮಿಶ್ರ ಮಾಡಿಕೊಂಡು ಬೀಜ ನಾಟಿ ಮಾಡಲಾಗಿತ್ತು. ಬೆಳಗ್ಗೆ ಹಾಗೂ ಸಾಯಂಕಾಲ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಏಕನಾಥ್ ಗೌಡ ಹಾಗೂ ಶಾಲೆಯ 9ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ನೀರು ಹಾಯಿಸಿ ತರಕಾರಿ ಗಿಡಗಳನ್ನು ಸೂಕ್ತ ರೀತಿ ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ. ಈಗ ಸುಮಾರು ಮುಕ್ಕಾಲು ಎಕರೆ ಜಾಗದಲ್ಲಿ ಕೃಷಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ವಿಸ್ತರಿಸುವ ಚಿಂತನೆ ಹೊಂದಿದ್ದಾರೆ.

ವಿವಿಧ ತರಕಾರಿಗಳು: ತರಕಾರಿ ತೋಟದಲ್ಲಿ ಸೌತೆ ಕಾಯಿ, ಬಾಳೆ, ಪಡುವಲ ಕಾಯಿ, ಚೀನಿಕಾಯಿ, ಬೂದು ಕುಂಬಳ, ಹೀರೇಕಾಯಿ, ಬದನೆ, ಬಸಳೆ, ಅಲಸಂಡೆ, ಬೆಂಡೆಕಾಯಿ, ಸೋರೆಕಾಯಿ, ಹರಿವೆ ಸೊಪ್ಪು ಮೊದಲಾದವುಗಳನ್ನು ಯಥೇಚ್ಛವಾಗಿ ಬೆಳೆಯಲಾಗಿದೆ. ಅಡುಗೆ ಕೋಣೆಯ ಅಂಗಳದಲ್ಲಿ ಒಂದೆಲಗವನ್ನು ನಾಟಿ ಮಾಡಲಾಗಿದೆ.

ಜಿಲ್ಲಾ ಮಟ್ಟದ ಸಭೆಯಲ್ಲಿ ಪ್ರಶಂಸೆ: ಶಾಲೆಯ ಕೈತೋಟ ನೋಡಲು ರಾಷ್ಟ್ರೀಯ ಆಹಾರ ಭದ್ರತಾ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರ ತಂಡ ಭೇಟಿ ನೀಡಿತ್ತು. ಜಿಲ್ಲಾಧಿಕಾರಿ ಜಿಲ್ಲಾಮಟ್ಟದ ಸಭೆಯಲ್ಲಿ ಶಾಲಾ ಕೈತೋಟದ ಬಗ್ಗೆ ಪ್ರಸ್ತಾಪಿಸಿ ಪ್ರಶಂಸಿಸಲಾಗಿತ್ತು. ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಲಕ್ಷ್ಮಣ ಶೆಟ್ಟಿ ಉತ್ತೇಜನದಿಂದ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿ ಸುಡು ಬೇಸಗೆ ಸಂದರ್ಭದಲ್ಲೂ ಸೂಕ್ತ ರೀತಿ ಕೈತೋಟ ನಿರ್ವಹಿಸುತ್ತಿದ್ದಾರೆ.

ಮಕ್ಕಳಿಗೆ ಕೃಷಿಯ ಅರಿವು: ವಿದ್ಯಾರ್ಥಿಗಳಲ್ಲಿ ಪಠ್ಯದ ಜತೆಗೆ ಸಾವಯವ ಹಾಗೂ ಸಾಂಪ್ರದಾಯಿಕ ಕೃಷಿ ಬಗ್ಗೆ ಅರಿವು ಮೂಡಿಸುವುದರ ಉದ್ದೇಶದಿಂದ ಹಾಗೂ ಮಧ್ಯಾಹ್ನದ ಬಿಸಿಯೂಟಕ್ಕೆ ವಿಷ ರಹಿತ ತರಕಾರಿಗಳನ್ನು ಬಳಕೆ ಮಾಡುವ ಇರಾದೆಯಿಂದ ಕೈತೋಟ ನಿರ್ಮಿಸಲಾಗಿದೆ. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಪಾಲಕರು ಹಾಗೂ ಊರಿನ ಪ್ರಮುಖರ ಮುತುವರ್ಜಿಯಿಂದ ಕೈತೋಟ ಹಸಿರಿನಿಂದ ಕಂಗೊಳಿಸುತ್ತಿದೆ.

ಶಿಕ್ಷಕರು ಮತ್ತು ಮಕ್ಕಳು ಅತ್ಯಂತ ಆಸಕ್ತಿಯಿಂದ ಪ್ರತಿದಿನ ಗಿಡಗಳ ಆರೈಕೆ ಮಾಡುತ್ತಿದ್ದಾರೆ. ಊರಿನ ಪ್ರಗತಿಪರ ಕೃಷಿಕರು ಹಾಗೂ ಪಾಲಕರು ಕಾಲಕಾಲಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಈಗಾಗಲೇ ಶಾಲೆಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದೊಂದಿಗೆ ಔಷಧೀಯ ವನ ನಿರ್ಮಿಸಲಾಗಿದ್ದು, ಜನರನ್ನು ಆಕರ್ಷಿಸುತ್ತಿದೆ. ಮುಂದಿನ ದಿನಗಳಲ್ಲಿ ಹಣ್ಣು ಹಂಪಲು ಗಿಡಗಳ ಅಕ್ಷರ ಕೈತೋಟ ರಚಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.
|ಶರ್ಮಿಳಾ ಬಿ, ಶಾಲಾ ಮುಖ್ಯ ಶಿಕ್ಷಕಿ