ಬೆಳ್ತಂಗಡಿ ಆಸ್ಪತ್ರೆಯಲ್ಲೂ ಸಂಕಷ್ಟ

ಮನೋಹರ್ ಬಳಂಜ ಬೆಳ್ತಂಗಡಿ
ಬಡವರ ಆರೋಗ್ಯ ನೆರವಿಗೆ ಸಹಾಯವಾಗುವ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ. ಸಿಬ್ಬಂದಿ ಕೊರತೆ ಹಿಂದೆಯೂ ಇದ್ದರೂ ಇದೀಗ ಆರ್ಥಿಕ ಪರಿಸ್ಥಿತಿ ನೆಪದಲ್ಲಿ ಡಿ ದರ್ಜೆ ನೌಕರರನ್ನು ಕೆಲಸದಿಂದ ವಜಾ ಮಾಡಿರುವುದು ಇನ್ನಷ್ಟು ಸಮಸ್ಯೆಗಳಿಗೆ ದಾರಿಯಾಗಿದೆ.

ಬೆಳ್ತಂಗಡಿಯ ಸಮುದಾಯ ಆಸ್ಪತ್ರೆಯಿಂದ 15 ಡಿ ದರ್ಜೆ ನೌಕರರು ಕೆಲಸ ಕಡುಕೊಂಡಿದ್ದಾರೆ. ಇದರಿಂದ ನೌಕರರ ಕುಟುಂಬವೂ ಸಂಕಷ್ಟಕ್ಕೀಡಾಗಿದುದಲ್ಲದೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಡಿ ಗ್ರೂಪ್ ಸಿಬ್ಬಂದಿ ಇಲ್ಲದೆ ರೋಗಿಗಳನ್ನು ಸಂಬಂಧಿಕರೇ ಗಾಲಿ ಕುರ್ಚಿಯಲ್ಲಿ ಸಾಗಿಸುವ ಅನಿವಾರ್ಯತೆ ಬಂದಿದೆ. ಉಳಿದಂತೆ ತಾಲೂಕಿನ ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ ಒಂದೊಂದು ಡಿ ದರ್ಜೆ ನೌಕರರ ಹುದ್ದೆ ಖಾಲಿಗೊಂಡಿದೆ.

ಆ್ಯಂಬುಲೆನ್ಸ್ ಸಮಸ್ಯೆ: ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಆ್ಯಂಬುಲೆನ್ಸ್ ಇಲ್ಲದೆ ರೋಗಿಗಳನ್ನು ಖಾಸಗಿ ಆ್ಯಂಬುಲೆನ್ಸ್‌ಗಳಲ್ಲಿ ಸಾಗಿಸಬೇಕಾದ ಸ್ಥಿತಿ ಇದೆ. ಆಸ್ಪತ್ರೆಗೆ ಅಗತ್ಯವಾಗಿ ಆ್ಯಂಬುಲೆನ್ಸ್ ಬೇಕು ಎಂದು ಆಸ್ಪತ್ರೆಯ ಅಧಿಕಾಗಳು ಜಿಲ್ಲಾ ಆರೋಗ್ಯ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಭರವಸೆ ಲಭಿಸಿದೆಯೇ ವಿನಃ ಅನುಷ್ಠಾನಗೊಂಡಿಲ್ಲ. ಹೀಗಾಗಿ ಇಂದು ಬರುತ್ತದೆ, ನಾಳೆ ಬರುತ್ತದೆ ಎಂದು ಕಾಯಬೇಕಾದ ಸ್ಥಿತಿ ಇದೆ. ಈ ಹಿಂದೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ಕೆಟ್ಟು ಹೋದ ಪರಿಣಾಮ ಬಂಟ್ವಾಳದ ಆಸ್ಪತ್ರೆಯ ಆ್ಯಂಬುಲೆನ್ಸ್ ನೀಡಲಾಗಿತ್ತು. ಅದು ಸಮರ್ಪಕವಾಗಿ ಇಲ್ಲದಿದ್ದರೂ, ರೋಗಿಗಳ ಸೇವೆ ದೃಷ್ಟಿಯಿಂದ ಅದನ್ನು ಚಲಾಯಿಸಲಾಗುತ್ತಿತ್ತು. ಆದರೆ ಈ ಆ್ಯಂಬುಲೆನ್ಸ್ ಒಂದೂವರೆ ವರ್ಷಗಳ ಹಿಂದೆ ಪಣಕಜೆಯಲ್ಲಿ ಅಪಘಾತವಾದ ಬಳಿಕ ಬೆಳ್ತಂಗಡಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ಇಲ್ಲದಂತಾಗಿದೆ.

ಪ್ರಸ್ತುತ ಬೆಳ್ತಂಗಡಿ ಸರಕಾರಿ ಆ್ಪತ್ರೆಯಲ್ಲಿ ನಗು-ಮಗು ಎಂಬ ಒಂದು ಆ್ಯಂಬುಲೆನ್ಸ್ ಮಾತ್ರ ಲಭ್ಯವಿದ್ದು, ಅದರಲ್ಲಿ ಗರ್ಭಿಣಿಯರು, ತಾಯಿ-ಮಗುವನ್ನು ಸಾಗಿಸುವುದಕ್ಕೆ ಮಾತ್ರ ಅವಕಾಶವಿದೆ. ಈ ಕುರಿತು ಹಲವು ಬಾರಿ ಸಭೆಗಳಲ್ಲಿ ಚರ್ಚೆಯಾಗಿದ್ದರೂ ಏನೂ ಪ್ರಯೋಜನವಾಗಿಲ್ಲ.

ಸ್ಥಳೀಯ 108 ಬಳಕೆ: ಸರ್ಕಾರಿ ಆಸ್ಪತ್ರೆಯಿಂದ ಮಂಗಳೂರಿಗೆ ರೋಗಿಗಳನ್ನು ಸಾಗಿಸಲು ಸ್ಥಳೀಯವಾಗಿ (ಉಜಿರೆ, ಕೊಕ್ಕಡ, ಪುಂಜಾಲಕಟ್ಟೆ, ವೇಣೂರು, ನಾರಾವಿ) ಲಭ್ಯವಿರುವ ಸರ್ಕಾರಿ 108 ಆ್ಯಂಬುಲೆನ್ಸ್ ತರಿಸಲಾಗುತ್ತದೆ ಎಂದು ಆಸ್ಪತ್ರೆಯವರು ಹೇಳುತ್ತಾರೆ. ಆದರೆ ಮಂಗಳೂರಿಗೆ ಸಾಗಿಸಬೇಕಾದರೆ ದುಡ್ಡು ಕೊಟ್ಟು ಖಾಸಗಿ ಆ್ಯಂಬುಲೆನ್ಸ್‌ಗಳಲ್ಲಿ ಸಾಗಿಸಬೇಕಿದೆ ಎಂದು ಬಡ ರೋಗಿಗಳ ಸಂಬಂಧಿಕರು ಆರೋಪಿಸುತ್ತಾರೆ. ಅಂದರೆ ಸ್ಥಳೀಯವಾಗಿ ಲಭ್ಯವಿರುವ 108 ಆ್ಯಂಬುಲೆನ್ಸ್‌ಗಳು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ತಲುಪಬೇಕಾದರೆ ಕನಿಷ್ಠ ಅಂದರೂ ಅರ್ಧ ತಾಸು ಬೇಕಾಗುತ್ತದೆ. ಆದರೆ ತುರ್ತು ಸಂದರ್ಭ ಕಾಯುವುದು ಅಪಾಯವಾಗಿರುವುದರಿಂದ ಖಾಸಗಿ ಆ್ಯಂಬುಲೆನ್ಸ್‌ಗಳಲ್ಲೇ ಸಂಬಂಧಿಕರು ರೋಗಿಗಳನ್ನು ಕರೆದೊಯ್ಯುತ್ತಾರೆ.

ಸರ್ಕಾರಿ ಆಸ್ಪತ್ರೆಗೆ ಹೆಚ್ಚಾಗಿ ಅಪರಿಚಿತ ಅಸ್ವಸ್ಥರು ಆಗಮಿಸುತ್ತಿದ್ದು, 108 ಆ್ಯಂಬುಲೆನ್ಸ್‌ನವರು ಇಂತಹ ರೋಗಿಗಳನ್ನು ಸಾಗಿಸಲು ಹಿಂದೇಟು ಹಾಕುತ್ತಾರೆ. ಅವರನ್ನು ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ವೀಕರಿಸಬೇಕಾದರೆ ಪೊಲೀಸರ ಅನುಮತಿ ಬೇಕು ಎಂದು ಅಪರಿಚಿತರನ್ನು ಸಾಗಿಸುತ್ತಿಲ್ಲ.

ಮೇಯಲ್ಲಿ ಹೊಸ ಆ್ಯಂಬುಲೆನ್ಸ್?: ಬೆಳ್ತಂಗಡಿ ಆಸ್ಪತ್ರೆಗೆ ಮೇ ತಿಂಗಳಲ್ಲಿ ಹೊಸ ಆ್ಯಂಬುಲೆನ್ಸ್ ನೀಡುವ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಭರವಸೆ ನೀಡಿದ್ದಾರೆ. ಅಂದರೆ ಎಂಆರ್‌ಪಿಎಲ್ ಸಂಸ್ಥೆಯ ವತಿಯಿಂದ ಜಿಲ್ಲಾ ಎಲ್ಲ ಆಸ್ಪತ್ರೆಗಳಿಗೂ ಹೊಸ ಆ್ಯಂಬುಲೆನ್ಸ್ ಬರಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಕಳೆದ ಒಂದೂವರೆ ವರ್ಷದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಇಲ್ಲ. ಸಾಕಷ್ಟು ಬಾರಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ತೀರಾ ಅಗತ್ಯವಿದ್ದರೆ ಸ್ಥಳೀಯ 108 ಆ್ಯಂಬುಲೆನ್ಸ್‌ಗಳನ್ನು ತರಿಸಲಾಗುತ್ತದೆ. ಮೇ ತಿಂಗಳಲ್ಲಿ ಹೊಸ ಆ್ಯಂಬುಲೆನ್ಸ್ ಒದಗಿಸುವ ಕುರಿತು ಡಿಎಚ್‌ಒ ಭರವಸೆ ನೀಡಿದ್ದಾರೆ.
|ಡಾ.ವಿದ್ಯಾವತಿ, ಆಡಳಿತ ವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ

ಸರ್ಕಾರ ಡಿ ದರ್ಜೆ ನೌಕರರನ್ನು ತಕ್ಷಣದಿಂದ ಜಾರಿಗೊಳ್ಳುವಂತೆ ಕೆಲಸದಿಂದ ಮುಕ್ತಿಗೊಳಿಸಿದೆ. ಇದರಿಂದ ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ 15 ಮಂದಿ ಇತರ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ ಒಬ್ಬೊಬ್ಬರು ಕೆಲಸದಿಂದ ಮುಕ್ತಿ ಹೊಂದಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇದರಿಂದ ಹೆಚ್ಚನ ಸಮಸ್ಯೆಯಾಗಿದ್ದು. ಸ್ವಚ್ಛತೆ ಹಾಗೂ ಇತರ ದೃಷ್ಟಿಯಲ್ಲಿ ಆಸ್ಪತ್ರೆಯ ಬೇರೆ ಆದಾಯದ ಹಣದಿಂದ 2 ದಿನಕ್ಕೊಮ್ಮೆ ಈ 15 ಮಂದಿಯನ್ನು ಸ್ವಚ್ಛತಾ ಕಾರ್ಯಕ್ಕೆ ಬರುವಂತೆ ತಿಳಿಸಲಾಗಿದೆ.
|ಡಾ.ಕಲಾಮಧು, ತಾಲೂಕು ವೈದ್ಯಾಧಿಕಾರಿ

Leave a Reply

Your email address will not be published. Required fields are marked *