50 ವರ್ಷದೊಳಗಿನ 51 ಮಹಿಳೆಯರಿಂದ ಅಯ್ಯಪ್ಪ ದೇಗುಲ ಪ್ರವೇಶ: ಸುಪ್ರೀಂಗೆ ಮಾಹಿತಿ ನೀಡಿದ ಕೇರಳ ಸರ್ಕಾರ

ನವದೆಹಲಿ: ನವದೆಹಲಿ: ಎಲ್ಲ ವಯೋಮಾನದ ಮಹಿಳೆಯರಿಗೂ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಬಳಿಕ ಈತನಕ ಸುಮಾರು 51 ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ ಎಂದು ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ ಅಯ್ಯಪ್ಪ ದೇಗುಲ ಪ್ರವೇಶಿಸಿದ್ದ 40 ವರ್ಷದ ಇಬ್ಬರು ಮಹಿಳೆಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕೇರಳ ಸರ್ಕಾರದ ಪರ ಹಿರಿಯ ವಕೀಲ ವಿಜಯ್‌ ಹನ್ಸಾರಿಯಾ ಅವರು, ಸೆ. 28ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪು ನೀಡಿದ ನಂತರ ಇದುವರೆಗೂ 50 ವರ್ಷದೊಳಗಿನ 51 ಮಹಿಳಾ ಭಕ್ತರು ಅಯ್ಯಪ್ಪ ದೇಗುಲ ಪ್ರವೇಶಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಶಬರಿಮಲೆ ದೇಗುಲ ಪ್ರವೇಶಕ್ಕೆ ಆನ್‌ಲೈನ್‌ ಮೂಲಕ 10 ರಿಂದ 50ವರ್ಷದೊಳಗಿನ ಸುಮಾರು 7,500 ಸಾವಿರ ಮಹಿಳೆಯರು ತಮ್ಮ ಆಧಾರ್‌ ಮಾಹಿತಿ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಯಾವುದೇ ಸಮಸ್ಯೆಯಿಲ್ಲದೆ 50 ಮಹಿಳೆಯರ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.

ಜ. 2ರಂದು ಶಬರಿಮಲೆ ದೇಗುಲ ಪ್ರವೇಶಿಸಿದ್ದ 42 ವರ್ಷದ ಕನಕ ದುರ್ಗಾ ಮತ್ತು 44 ವರ್ಷದ ಬಿಂದು ಅಮ್ಮಿನಿ ಅವರು ಭದ್ರತೆ ಕೋರಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ದೇಗುಲ ಪ್ರವೇಶಿಸಿದ್ದ 51 ಜನರ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಬಿಂದು ಮತ್ತು ಕನಕದುರ್ಗ ಎಂಬವರು ಮಧ್ಯರಾತ್ರಿ ಶಬರಿಗಿರಿ ಏರಲಾರಂಭಿಸಿದಾಗ ಸಿವಿಲ್​ ವಸ್ತ್ರದಲ್ಲಿದ್ದ ಪೊಲೀಸರು ರಕ್ಷಣೆ ನೀಡಿದ್ದರು. ಮುಂಜಾನೆ 3.45ರ ಹೊತ್ತಿಗೆ ದೇಗುಲ ಪ್ರವೇಶಿಸಿ ದರ್ಶನ ಪಡೆದಿದ್ದರು. ಇದಾದ ಬಳಿಕ ಶುದ್ಧೀಕರಣಕ್ಕೆಂದು ಅರ್ಚಕರು ಬಂದ್‌ ಮಾಡಿ ಅರ್ಧ ಗಂಟೆಯ ಬಳಿಕ ದೇಗುಲವನ್ನು ದರ್ಶನಕ್ಕಾಗಿ ತೆರೆದಿದ್ದರು. (ಏಜೆನ್ಸೀಸ್)