ಬೆಳ್ಮಣ್ ಟೋಲ್ ನೇಪಥ್ಯಕ್ಕೆ?

>

ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ಭಾರಿ ಸುದ್ದಿಯಾಗಿ ಬೃಹತ್ ಪ್ರತಿಭಟನೆಯಿಂದ ಗಮನ ಸೆಳೆದಿದ್ದ ಬೆಳ್ಮಣ್ ಟೋಲ್ ಗೇಟ್ ಪ್ರಕರಣ ಮುಚ್ಚಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಅಕ್ಟೋಬರ್ 15ರಿಂದ ಆರಂಭವಾಗಬೇಕಿದ್ದ ಸುಂಕ ವಸೂಲಿ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ಈ ಸ್ಥಿತಿಗೆ ಗ್ರಾಮಸ್ಥರ ಪ್ರತಿಭಟನೆ ಕಾರಣವೇ?, ಚುನಾವಣೆಯಿಂದ ಪ್ರಕ್ರಿಯೆ ಹಿನ್ನಡೆ ಕಂಡಿತೇ ಅಥವಾ ಗುಟ್ಟಾಗಿ ಕಾರ್ಯರಂಭಕ್ಕೆ ಸಿದ್ಧತೆ ನಡೆಯುತ್ತಿದೆಯೇ ಎಂಬುದು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಅನುಮಾನ.
ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ 1ರಲ್ಲಿ ಸುಂಕ ವಸೂಲಿ ಕೇಂದ್ರ ನಿರ್ಮಿಸಿ ವಾಹನ ಸವಾರರಿಂದ ಸುಂಕ ಪಡೆಯುತ್ತೇವೆ ಎಂದು ಗುತ್ತಿಗೆ ಪಡೆದುಕೊಂಡ ಮೈಸೂರಿನ ಮಿತ್ರಾ ಇನ್ಫೋ ಸೊಲ್ಯೂಷನ್ ಸಂಸ್ಥೆ ಈ ಹಿಂದೆ ಪ್ರಕಟಿಸಿತ್ತು. ಲೋಕಸಭಾ ಚುನಾವಣಾ ಕಾವು ರಂಗೇರಿದ್ದು, ಅಭ್ಯರ್ಥಿ ಹಾಗೂ ಬೆಂಬಲಿಗರಿಗೆ ಟೋಲ್ ಕೂಡ ಪ್ರಚಾರದ ವಿಷಯವೇ ಆಗಿದೆ. ಈ ಬಗ್ಗೆ ಪರ ಹಾಗೂ ವಿರೋಧ ಚರ್ಚೆಗಳು ಕೂಡ ನಡೆಯುತ್ತಿವೆ. ಸುಂಕ ವಸೂಲಿಗೆ ಇನ್ನೂ ಕೂಡ ಯಾವ ಪೂರ್ವತಯಾರಿಯೂ ನಡೆದಿಲ್ಲ. ಹೀಗಾಗಿ ಚುನಾವಣೆ ಬಳಿಕ ಮತ್ತೆ ಸುಂಕ ಪಡೆಯಲು ಗುತ್ತಿಗೆ ಸಂಸ್ಥೆ ಹಾಗೂ ಸರ್ಕಾರ ಮುಂದಾಗಬಹುದು ಎನ್ನುವ ಯೋಚನೆ ಸ್ಥಳೀಯರದು.

ಕಾಮಗಾರಿ ಸ್ಥಗಿತ:  ಕೇವಲ 28 ಕಿ.ಮೀ ವ್ಯಾಪ್ತಿಯ ಈ ರಾಜ್ಯ ಹೆದ್ದಾರಿಗೆ ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜು ಮುಂಭಾಗ ಟೋಲ್ ಗೇಟ್ ನಿರ್ಮಾಣಕ್ಕೆ ಕೆಆರ್‌ಡಿಸಿಎಲ್ ಹಾಗೂ ಸುಂಕ ವಸೂಲಾತಿ ಗುತ್ತಿಗೆ ವಹಿಸಿಕೊಂಡಿರುವ ಮಿತ್ರಾ ಇನ್ಫೋ ಸೊಲ್ಯೂಷನ್ ನಡುವೆ ಒಡಂಬಡಿಕೆ ನಡೆದಿತ್ತು. ಜನರ ಸಂಘಟಿತ ಪ್ರತಿಭಟನೆಗೆ ಮಣಿದು ಟೋಲ್ ನಿರ್ಮಾಣ ಕಾಮಗಾರಿ ಪ್ರಕ್ರಿಯೆ ಸದ್ಯಕ್ಕೆ ಸ್ಥಗಿತಗೊಂಡಿದೆ.

ರಾಜಕೀಯ ರಹಿತ ಹೋರಾಟ:  ಬೆಳ್ಮಣ್‌ನಲ್ಲಿ ಟೋಲ್ ಗೇಟ್ ನಿರ್ಮಾಣ ಮಾಹಿತಿ ತಿಳಿದ ಈ ಭಾಗದ ಜನರು ಹೋರಾಟ ಸಮಿತಿ ರಚಿಸಿ, ರಾಜಕೀಯ ರಹಿತ ಹೋರಾಟ ಮಾಡಿದ್ದರು. ಅ.7ರಂದು ಬೆಳ್ಮಣ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆ ಸಭೆಯಲ್ಲಿ 6 ಸಾವಿರಕ್ಕೂ ಅಧಿಕ ಮಂದಿ ಭಾಗವ ಹಿಸಿದ್ದರು. ಬಳಿಕ ಟೋಲ್ ಗೇಟ್ ವಿರುದ್ಧ ನಿರಂತರ ಸಭೆಗಳು ನಡೆದವು. ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು, ಸಚಿವರನ್ನು, ಜಿಲ್ಲಾಧಿಕಾರಿ, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಟೋಲ್ ನಿರ್ಮಾಣವಾಗದಂತೆ ಮನವಿ ಮಾಡಲಾಗಿತ್ತು. ಕಾನೂನು ರೀತಿಯ ಹೋರಾಟಕ್ಕೂ ಹೋರಾಟ ಸಮಿತಿ ಮುಂದಾಗಿತ್ತು. ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ 1ರಲ್ಲಿ ಯಾವುದೇ ಕಾರಣಕ್ಕೂ ಟೋಲ್ ನಿರ್ಮಾಣವಾಗದಂತೆ ನಿರ್ಣಯ ಕೈಗೊಳ್ಳಲಾಗಿದೆ.

ಗುತ್ತಿಗೆ ಪಡೆದ ಸಂಸ್ಥೆ ಮೌನ:  ಮೈಸೂರಿನ ಮಿತ್ರಾ ಇನ್ಫೋ ಸೊಲ್ಯೂಷನ್ ಸಂಸ್ಥೆ ಟೋಲ್ ಬಗ್ಗೆ ಪೂರ್ವ ತಯಾರಿ ನಡೆಸಿಲ್ಲ. ಸ್ಥಳೀಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಟೋಲ್ ವಸೂಲಿ ಪ್ರಾರಂಭಗೊಂಡಿಲ್ಲ. ಒಂದು ವೇಳೆ ಸರ್ಕಾರ ಮಟ್ಟದಲ್ಲಿ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ 1ರಲ್ಲಿ ಟೋಲ್ ನಿರ್ಮಾಣ ರದ್ದಾದಲ್ಲಿ ನಮ್ಮ ಸಂಸ್ಥೆ ಸರ್ಕಾರಕ್ಕೆ ಟೆಂಡರ್ ಮೂಲಕ ಕಟ್ಟಿದ ಠೇವಣಿ ಹಿಂಪಡೆಯಲಿದೆ ಎಂದು ಗುತ್ತಿಗೆ ಪಡೆದ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಚುನಾವಣೆ ಸಮಯವಾದ್ದರಿಂದ ರಾಜಕೀಯ ನಾಯಕರ ಜತೆ ಗುತ್ತಿಗೆದಾರರೂ ಮೌನವಾಗಿದ್ದಾರೆ.

ಜನ ಈಗ ಏನಂತಾರೆ?:  ಚುನಾವಣೆ ಕಾರಣಕ್ಕಾಗಿ ಟೋಲ್ ಮಂದಿ ತಣ್ಣಗಾಗಿರಬಹುದು. ರಾಜಕೀಯ ಪಕ್ಷದ ನಾಯಕರು ಜನ ವಿರೋಧಿ ಯೋಜನೆಗೆ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲದ ಕಾರಣ ಚುನಾವಣೆ ಬಳಿಕ ಮತ್ತೆ ಟೋಲ್ ಪ್ರಕ್ರಿಯೆ ಗರಿಗೆದರುವ ಸಾಧ್ಯತೆ ಇದೆ. ಬೆಳ್ಮಣ್ ಹೋರಾಟಗಾರರು ಟೋಲ್ ಯಾವ ರೂಪದಲ್ಲಿ ಬಂದರೂ ತಡೆಯಲು ಸದಾ ಸಿದ್ಧರಾಗಿದ್ದಾರೆ ಎನ್ನುತ್ತಾರೆ ಈ ಭಾಗದ ಗ್ರಾಮಸ್ಥರು.

ಟೋಲ್ ವಿಷಯ ತಣ್ಣಗಾದರೂ, ನಮ್ಮ ಹೋರಾಟ ಸಮಿತಿ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಯಾವುದೇ ಜನವಿರೋಧಿ ಯೋಜನೆ ಬಂದರೂ ಅದನ್ನು ನಾವು ವಿರೋಧಿಸುತ್ತೇವೆ. ಯಾವುದೇ ಕಾರಣಕ್ಕೂ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಹೋರಾಟಕ್ಕೆ ಸಿದ್ಧ,
– ಸರ್ವಜ್ಞ ತಂತ್ರಿ, ಹೋರಾಟ ಸಮಿತಿ ಕಾರ‌್ಯದರ್ಶಿ

Leave a Reply

Your email address will not be published. Required fields are marked *