ಶಾಲಾ ಬಾವಿ, ಅಕ್ಷರ ದಾಸೋಹ ಕೊಠಡಿ ಸ್ವಚ್ಛತೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್

ರಜೆ ಸಿಕ್ಕಿದ ಬಳಿಕ ಶಾಲಾ ಆವರಣ ಸ್ವಚ್ಛತೆ ಬಗ್ಗೆ ಯೋಚನೆ ಮಾಡುವವರೂ ಇದ್ದಾರೆ. ಮುಂಡ್ಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ತಮ್ಮ ಶಾಲೆಯ ಬಾವಿಯನ್ನು ರಜೆಗೆ ಮುನ್ನ ಸ್ವಚ್ಛಗೊಳಿಸಿ ಮಾದರಿಯಾಗಿದ್ದಾರೆ.

ಶಾಲೆ ಮುಖ್ಯ ಶಿಕ್ಷಕಿ ಪೂರ್ಣಿಮಾ ಭಟ್ ಅವರ ಪರಿಕಲ್ಪನೆ ಈಗ ಎಲ್ಲರ ಗಮನ ಸೆಳೆದಿದೆ. ಶಾಲೆಗೆ ರಜೆ ಸಿಕ್ಕ ಬಳಿಕ ಬಾವಿ ಬಗ್ಗೆ, ಅಕ್ಷರ ದಾಸೋಹ ಕೊಠಡಿ ಹಾಗೂ ಶಾಲೆಗಳ ಪ್ರಮುಖ ಪರಿಕರಗಳ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ. ಗಿಡಗಂಟಿಗಳು ಬೆಳೆದ ಬಾವಿ ಸ್ವಚ್ಛ ಮಾಡಿದರೆ ಶಾಲಾರಂಭದ ಸಂದರ್ಭ ಮಳೆ ಬಂದು ಬಾವಿ ತುಂಬಿ ನೀರು ಬಳಕೆ ಉತ್ತಮವಾಗುತ್ತದೆ ಎಂಬುದು ಶಿಕ್ಷಕರ ಅಭಿಪ್ರಾಯ. ಅದೇ ರೀತಿ ಶಾಲೆಯ ಅಕ್ಷರ ದಾಸೋಹ ಕೊಠಡಿ, ಪರಿಕರಗಳನ್ನೂ ಒಪ್ಪ ಓರಣವಾಗಿರಿಸಿದರೆ ಶಾಲಾರಂಭದ ಸಂದರ್ಭ ಅವುಗಳ ಬಳಕೆಗೆ ಇನ್ನಷ್ಟು ಸುಲಭವಾಗುತ್ತದೆ ಎನ್ನುವುದೂ ಅವರ ಅನಿಸಿಕೆ.

ಶಾಲೆಗೆ ಪಂಚಾಯಿತಿ ನೀರು ಪೂರೈಕೆಯಾಗುತ್ತಿದ್ದರೂ ಇಲ್ಲಿನ ಬಾವಿಯನ್ನು ಶತಮಾನೋತ್ಸವ ಸಂದರ್ಭ ನವೀಕರಿಸಲಾಗಿದ್ದು ಸುಂದರಗೊಳಿಸಲಾಗಿತ್ತು. ಈ ಬಾವಿ ಸುತ್ತ ಪ್ರತಿವರ್ಷ ಪೊದೆ ಗಿಡಗಂಟಿಗಳು ಬೆಳೆದು ಮುಚ್ಚಿಹೋಗುತ್ತಿತ್ತು. ಈ ಬಾರಿಯೂ ಅದೇ ರೀತಿ ಕಳೆಗಿಡಗಳು ಬೆಳೆದಿತ್ತು. ಮುಖ್ಯಶಿಕ್ಷಕಿ ತಮ್ಮ ಸಹ ಶಿಕ್ಷಕರ ಜತೆ ಸೇರಿ ಕೂಲಿಯಾಳುಗಳನ್ನು ಬಳಸಿ ಬಾವಿ ಸ್ವಚ್ಛಗೊಳಿಸಿದ್ದಾರೆ. ಸರ್ಕಾರಿ ಶಾಲೆ ಶಿಕ್ಷಕರ ಈ ನಡೆ ಶಿಕ್ಷಣ ವಲಯದಲ್ಲಿ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.

ಶಿಕ್ಷಕರು ಶಾಲೆಗೆ ರಜಾ ದಿನಗಳಲ್ಲಿ ಭೇಟಿ ನೀಡಿದರೂ ಪಾಲಕರು ಹಾಗೂ ವಿದ್ಯಾರ್ಥಿಗಳು ಬರುವುದು ಕಡಿಮೆ. ಮುಂದೆ ಶಾಲಾರಂಭದ ಸಂದರ್ಭ ಶಾಲೆ ಸ್ಥಿತಿ ಭೂತ ಬಂಗಲೆಯಂತಾಗಬಾರದೆಂದು ರಜೆಗೆ ಮುನ್ನವೇ ಶಾಲೆಯ ವಸ್ತುಗಳ ನಿರ್ವಹಣೆ ಬಗ್ಗೆ ಗಂಭೀರವಾಗಿ ಯೋಚಿಸಿ ಈ ಕ್ರಮ ಕೈಗೊಂಡಿದ್ದೇವೆ.
|ಪೂರ್ಣಿಮಾ ಭಟ್, ಮುಖ್ಯಶಿಕ್ಷಕಿ

ಮುಂಡ್ಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇತರ ಶಾಲೆಗಳಿಗೆ ಮಾದರಿ ಎನಿಸಿದೆ. ಇಲ್ಲಿನ ಶಿಕ್ಷಕರು, ಪಾಲಕರು, ಹಾಗೂ ಹಳೇ ವಿದ್ಯಾರ್ಥಿಗಳ ಪರಿಶ್ರಮ ಈ ಶಾಲೆಯನ್ನು ಉಳಿಸಿ ಬೆಳಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
|ಅರುಣ್ ರಾವ್, ಹಳೇ ವಿದ್ಯಾರ್ಥಿ